
ಸುಬ್ರಹ್ಮಣ್ಯ ಮಾ.24: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುವಂತೆ ಈ ವರ್ಷವೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಪೂರ್ವಾಹ್ನ ಗಂಟೆ 11:00 ರಿಂದ 12:00 ರವರೆಗಿನ ವೃಷಭ ಲಗ್ನದಲ್ಲಿ 10 ನವ ಜೋಡಿಗಳು ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ ಹಾರ ಬದಲಾಯಿಸುವುದರೊಂದಿಗೆ ಸಪ್ತಪದಿ ತುಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಪುರೋಹಿತ ಮಧುಸೂಧನ ಕಲ್ಲೂರಾಯರ ನೇತೃತ್ವದಲ್ಲಿ ಅರ್ಚಕ ವರ್ಗದವರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಂಡರು.
ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ವಧುವಿಗೆ ರೂ 48,000/- ಮೌಲ್ಯದ ತಾಳಿ ಕಂಠಿ, ಹಾಗೂ ಕಾಲುಂಗುರ ,ಸೀರೆ ,ರವಿಕೆ, ಹಾರ ಖರೀದಿಸಲು ರೂ.10,000/- ನೀಡಲಾಗಿದೆ. ಹಾಗೆಯೇ ವರನಿಗೆ ಶರ್ಟ್, ವೇಸ್ಟಿ ,ಪೇಟ, ಖರೀದಿಸಲು ರೂ. 5,000/- ನೀಡಲಾಗಿದೆ.
ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರುಗಳಾದ ಲಕ್ಷ್ಮೀಶ ಗಬ್ಲಡ್ಕ, ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಬಳ್ಪ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳದ ನೌಕರ ವೃಂದದವರು, ಸಾರ್ವಜನಿಕರು ಹಾಗೂ ವಧು-ವರರ ಕಡೆಯವರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.