
ಆರಂತೋಡಿನ ಮನೆಯೊಂದರ ಕೆಲಸಕ್ಕೆ ಬಂದು ನಾಯಿ ಕಡಿತದಿಂದ ನಾಲ್ಕೈದು ದಿನಗಳ ಹಿಂದೆ ಸಂಪಾಜೆಯ ಗೂನಡ್ಕದಲ್ಲಿ ಮಹಿಳೆಯೊಬ್ಬರು ಮೃತರಾದ ಹಿನ್ನಲೆಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಆಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿ ಸುಳ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ನಿತಿನ್ ಪ್ರಭು ಅವರ ಸಹಕಾರದಿಂದ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಮಾಡಲಾಯಿತು. ಆರಂತೋಡು ಮತ್ತು ತೊಡಕಾನ ಗ್ರಾಮಗಳ 8 ಕೇಂದ್ರಗಳಲ್ಲಿ ಮಾ. 25ರಂದು ಉಚಿತ ರೇಬಿಸ್ ರೋಗ ನಿರೋಧಕ ಲಿಸಿಕಾ ಕಾರ್ಯಕ್ರಮ ನಡೆಯಿತು. ಪಂಚಾಯತ್ ವ್ಯಾಪ್ತಿಯ ನೂರಾರು ಮನೆಯವರು ಇದರ ಪ್ರಯೋಜನ ಪಡೆದುಕೊಂಡರು. ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯ ಮಧ್ಯೆಯೂ ಗ್ರಾಮ ಪಂಚಾಯತ್ ನ ಮನವಿಗೆ ತಕ್ಷಣ ಸ್ಪಂದಿಸಿದ ಸುಳ್ಯ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.