
ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಬಾಯಿ ಆರೋಗ್ಯ ದಿನ ಎಂದು ಆಚರಿಸಿ ಬಾಯಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಲಾಗುತ್ತದೆ. 2007ರಲ್ಲಿ ಈ ಆಚರಣೆ ಆರಂಭವಾಯಿತು. ಬಾಯಿಯ ಆರೋಗ್ಯವನ್ನು ಕಾಪಾಡುವುದು ಹೇಗೆ ಮತ್ತು ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ದೇಹದ ಆರೋಗ್ಯದ ಮೇಲೆ ಉಂಟಾಗುವ ಧನ್ಮಾತ್ಮಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 2025ರ ಆಚರಣೆ ಧ್ಯೇಯ ವಾಕ್ಯ “ಆರೋಗ್ಯವಂಥ ಬಾಯಿ, ಆರೋಗ್ಯವಂಥ ಮನಸ್ಸು” ಎಂಬುದಾಗಿದೆ.
ಬಾಯಿ ಎನ್ನುವುದು ನಮ್ಮ ದೇಹದ ಆರೋಗ್ಯದ ಹೆಬ್ಬಾಗಿಲು. ನಾವು ತಿನ್ನುವ ಆಹಾರ ಬಾಯಿಯ ಮುಖಾಂತರವೇ ಹೊಟ್ಟೆಗೆ ಸೇರುತ್ತದೆ. ನಮ್ಮ ಬಾಯಿ ಮತ್ತು ಹಲ್ಲಿನ ಆರೋಗ್ಯ ಚೆನ್ನಾಗಿಲ್ಲದಿದ್ದಲ್ಲಿ ಆಹಾರದ ಪಚನ ಕ್ರಿಯೆಗೆ ಅಡ್ಡಿಯಾಗಿ ಹಲವಾರು ಜಠರ ಸಂಬಂದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹುಳುಕಾದ ಹಲ್ಲುಗಳಿಂದ ಚರ್ಮದಲ್ಲಿ ತುರಿಕೆ ಮತ್ತು ಇತರ ಚರ್ಮ ಸಂಬಂಧಿ ರೋಗಗಳು ಬರಲು ಸಾಧ್ಯವಿದೆ. ಹಲ್ಲಿನ ಸುತ್ತಲಿರುವ ವಸಡುಗಳ ಆರೋಗ್ಯ ಹದಗೆಟ್ಟಲ್ಲಿ ಹೃದಯದ ಸಮಸ್ಯೆ ಕಾಡಲೂಬಹುದು. ನಮ್ಮ ವಸಡುಗಳ ಆರೋಗ್ಯ ಹದೆಗೆಟ್ಟಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದೇ ರೀತಿ ಆಲ್ ಝೈಮರ್ಸ್ ರೋಗಕ್ಕೂ ವಸಡಿನ ರೋಗಕ್ಕೂ ನೇರ ಸಂಬಂಧ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ನಮ್ಮ ವಸಡುಗಳ ಆರೋಗ್ಯ ಹದಗೆಟ್ಟು ಹೋದಲ್ಲಿ ಮರೆಗುಳಿತನ ರೋಗ ಬರುವ ಸಾಧ್ಯತೆ 50 ಶೇಕಡಾ ಜಾಸ್ತಿಯಾಗುತ್ತದೆ ಎಂದು ವರದಿಗಳಿಂದ ತಿಳಿದು ಬಂದಿದೆ. ವಸಡು ರೋಗ ಇರುವ ರೋಗಿಗಳಲ್ಲಿ ಕಂಡು ಬರುವ “ಪೊರ್ ಫೈರೋಮೋನಸ್ ಜಿಂಜಿವಾಲಿಸ್” ಎಂಬ ಬ್ಯಾಕ್ಟೀರಿಯಾ ರಕ್ತದ ಮೂಲಕ ಮೆದುಳಿಗೆ ಸೇರಿಕೊಂಡಲ್ಲಿ ಅಮೈಲಾಯ್ಡು ಬೀಟಾ ಎಂಬ ಪ್ರೋಟೀನ್‍ನನ್ನು ಅಧಿಕವಾಗಿ ಉತ್ಪಾಧಿಸಿ ಮೆದುಳಿನ ಜೀವಕೋಶಗಳ ನಡುವೆ ಸೇರಿಕೊಂಡು ‘ಮರೆಗುಳಿತನ’ ರೋಗಕ್ಕೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಬಾಯಿಯ ಆರೋಗ್ಯ ಮತ್ತು ವಸಡಿನ ಆರೋಗ್ಯದ ಬಗ್ಗೆ ಜನರು ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡಲೇಬೇಕು. ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಮಾಡಿಸಿಕೊಳ್ಳತಕ್ಕದ್ದು. ಹಲ್ಲು ನೋವು, ವಸಡು ನೋವು ಬರುವಲ್ಲಿಯವರೆಗೆ ಕಾಯಲೇಬಾರದು. ಇನ್ನು ನಿರಂತರವಾಗಿ ಆರು ತಿಂಗಳಿಗೊಮ್ಮೆ ಬಾಯಿಯನ್ನು ದಂತ ವೈದ್ಯರ ಬಳಿ ಶುಚಿಗೊಳಿಸತಕ್ಕದ್ದು. ನಿಮ್ಮ ಬಾಯಿಯನ್ನು ದಂತ ವೈದ್ಯರ ಬಳಿ ಶುಚಿಗೊಳಿಸಿದಲ್ಲಿ ನಿಮಗೆ ಹೃದಯಘಾತವಾಗುವ ಸಾಧ್ಯತೆ 25 ಶೇಕಡಾ ಕಡಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಬಾಯಿಯೊಳಗೆ ಹಲ್ಲು ಮೂಡಿದ ಬಳಿಕ ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ ಅತೀ ಅವಶ್ಯಕ. ನಮ್ಮ ಬಾಯಿ ಎನ್ನುವುದು ‘ಫಿಸಿಷಿಯನ್ಸ್ ಮಿರರ್’ ಎಂದು ಕರೆಯಲಾಗುತ್ತದೆ. ‘ವೈದ್ಯರ ಮುಖ ಗನ್ನಡಿ’ ಎಂದೂ ಬಾಯಿ ಕುಖ್ಯಾತಿ ಪಡೆದಿದೆ. ಲಿವರ್ ಸಮಸ್ಯೆ, ರಕ್ತ ಹೀನತೆ, ಜಾಂಡಿಸ್, ಪ್ಲೇಟ್‍ಲೆಟ್ ಕೊರತೆ, ಡೆಂಗ್ಯುಜ್ವರ, ರಕ್ತದ ಕ್ಯಾನ್ಸರ್, ವಿಟಮಿನ್ ಸಿ ಕೊರತೆ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ, ಏಡ್ಸ್, ಹೆಪಟೈಟಿಸ್, ಮಧುಮೇಹ ರೋಗ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಶಿಲೀಂದ್ರಗಳ ಸೋಂಕು, ಗ್ಯಾಸ್ಟ್ರಿಕ್ ಸಮಸ್ಯೆ, ಶ್ವಾಸಕೋಶದ ಕೀವು, ರಕ್ತದ ಕಾಯಿಲೆಗಳು, ಔಷಧಿಗಳ ಅಡ್ಡ ಪರಿಣಾಮ, ಅಪಸ್ಮಾರ ರೋಗ, ವೈರಾಣು ಸೋಂಕು, ರಸದೂತಗಳ ಏರುಪೇರು, ನಿದ್ರಾಹೀನತೆ, ಚಿಕುನ್‍ಗುನ್ಯ ಜ್ವರ, ಥೈರಾಯ್ಡು ಸಮಸ್ಯೆ ಹೀಗೆ ಹತ್ತಾರು ರೋಗಗಳು ನಮ್ಮ ಬಾಯಿಯೊಳಗೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತದೆ. ಹೆಚ್ಚಿನ ಎಲ್ಲಾ ರೋಗಗಳು ಆರಂಭಿಕ ಹಂತದಲ್ಲಿಯೇ ಬಾಯಿಯಲ್ಲಿ ಪ್ರಕಟಗೊಳ್ಳುತ್ತದೆ. ಈ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿಯಾಗಿ ಗುಣಪಡಿಸಲು ಸಾಧ್ಯವಿದೆ. ಮಾನಸಿಕ ಖಿನ್ನತೆ, ನಿದ್ರಾಹೀನತೆ ಇದ್ದಲ್ಲಿ ಪದೇ ಪದೇ ಬಾಯಿ ಹುಣ್ಣು, ಲಿವರ್ ಸಮಸ್ಯೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತ, ವಿಟಮಿನ್ ಬಿ ಕಾಂಪ್ಲೇಕ್ಸ್ ಕೊರತೆ ಇದ್ದಲ್ಲಿ ಬೋಳು ನಾಲಿಗೆ, ರಕ್ತ ಹೀನತೆ ಇದ್ದಲ್ಲಿ ಬಾಯಿಯ ಒಳಪದರ ಬಿಳಿಚಿಕೊಳ್ಳುವುದು, ಮಧುಮೇಹ ಇದ್ದಲ್ಲಿ ಹಲ್ಲು ಅಲುಗಾಡುವಿಕೆ ಮತ್ತು ವಿಪರೀತ ಬಾಯಿ ವಾಸನೆ, ಬಾಯಿ ಕ್ಯಾನ್ಸರ್ ಇದ್ದಲ್ಲಿ ಒಣಗದ ಹುಣ್ಣು, ಶಿಲೀಂದ್ರ ಸೋಂಕು ಇದ್ದಲ್ಲಿ ನಾಲಿಗೆ ಮೇಲೆ ಬಿಳಿ ಪದರ, ಜಾಂಡೀಸ್ ಇದ್ದಲ್ಲಿ ಹಳದಿ ನಾಲಿಗೆ, ಪ್ಲೇಟ್‍ಲೆಟ್ ಕೊರತೆ, ಚಿಕುನ್‍ಗುನ್ಯ ಜ್ವರ, ಡೈಂಗ್ಯೂ ಜ್ವರ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ ಹೀಗೆ ಹತ್ತು ಹಲವು ರೋಗಗಳು ಬಾಯಿಯಲ್ಲಿ ಸದ್ದಿಲ್ಲದೆ ಪ್ರಕಟಗೊಳ್ಳುತ್ತಲೇ ಇರುತ್ತದೆ. ಇವೆಲ್ಲವನ್ನು ಗುರುತಿಸಿ ರೋಗ ನಿರ್ಣಯ ಮಾಡುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ದಂತ ವೈದ್ಯರಿಗೆ ಇರುತ್ತದೆ. ದಂತ ವೈದ್ಯರು ಬರೀ ಹಲ್ಲು ಕೀಳುವ, ಹಲ್ಲು ಶುಚಿತ್ವಗೊಳಿಸುವಹಲ್ಲು ತುಂಬಿಸುವ ವೈದ್ಯರು ಎಂಬ ಹಣೆಪಟ್ಟಿಯನ್ನು ಹಾಗೂ ಉಡಾಫೆಯ ದೋರಣೆಯನ್ನು ಜನರು ತಮ್ಮ ತಲೆಯಿಂದ ತೆಗೆದು ಹಾಕಿ, ಅವರು ಕೂಡ ನಿಮ್ಮೊಳಗಿನ ಹಲವಾರು ರೋಗಗಳನ್ನು ಪತ್ತೆ ಹಚ್ಚುವ ಜವಾಬ್ದಾರಿ ಮತ್ತು ಕೌಶಲ್ಯ ಹೊಂದಿದ್ದಾರೆ ಎಂಬ ಮಾತಿನಲ್ಲಿ ವಿಶ್ವಾಸವಿಟ್ಟಲ್ಲಿ ಆರೋಗ್ಯವಂಥ ಸಮಾಜ ನಿರ್ಮಾಣ ಮಾಡುವುದರಲ್ಲಿ ಸಂಶಯವೇ ಇಲ್ಲ. ಈಗ ದಂತ ಚಿಕಿತ್ಸೆ ಎನ್ನುವುದು ಬರೀ ರೋಗ ಚಿಕಿತ್ಸಾ ಪದ್ಧತಿ ಮಾತ್ರವಲ್ಲದೇ ಸೌಂದರ್ಯವರ್ದಕ ಮತ್ತು ರೋಗ ನಿಯಂತ್ರಕ ಚಿಕಿತ್ಸಾ ಪದ್ಧತಿಯಾಗಿ ಬೆಳೆದು ನಿಂತಿದೆ. ‘ಹಲ್ಲು ನೋವು ಬಂದ ಬಳಿಕ ದಂತ ವೈದ್ಯರು ‘ ಎಂಬ ಮಾತಿಗೆ ವ್ಯತಿರಿಕ್ತವಾಗಿ ಹಲ್ಲು ನೋವು ಹಾಗೂ ಇತರ ಆರೋಗ್ಯ ಸಮಸ್ಯೆ ಬರದಂತೆ ದಂತ ಚಿಕಿತ್ಸೆ” ಎಂಬುವಲ್ಲಿವರೆಗೆ ದಂತ ವೈದ್ಯಕೀಯ ಶಾಸ್ತ್ರ ಬೆಳೆದು ನಿಂತಿದೆ. ಜನರು ದಂತ ವೈದ್ಯರನ್ನು ನೋಡುವ ದೃಷ್ಟಿಕೋನ ಬದಲು ಮಾಡಿಕೊಂಡಲ್ಲಿ ಅವರ ಆರೋಗ್ಯ ಸುಧಾರಿಸಿ ,ಆರೋಗ್ಯವಂಥ ಸಮಾಜ ನಿಮಾರ್ಣವಾಗಿ ,ದೇಶದ ಪ್ರಗತಿಗೆ ಎಲ್ಲರೂ ಧನ್ಮಾತ್ಮಕ ಕೊಡುಗೆ ನೀಡಲು ಸಾಧ್ಯವಿದೆ. ಅದರಲ್ಲಿಯೇ ನಮ್ಮೆಲ್ಲರ ಹಿತ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು