
ಸುಬ್ರಹ್ಮಣ್ಯ: ಮಹಾ ಶಿವರಾತ್ರಿ ಪ್ರಯುಕ್ತ ಶ್ರೀ ಧರ್ಮಸ್ಥಳಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಸ್ಲೆ ಘಾಟ್ – ಮರ್ಧಾಳ ಮೂಲಕ ಪಾದಯಾತ್ರೆ ಕೈಗೊಂಡಿರುವ ಪಾದಯಾತ್ರಿಗಳಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸ್ವಚ್ಚತೆ ಹಾಗೂ ಪೂರಕ ವ್ಯವಸ್ಥೆ ಮೂಲಕ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ.
ಬಿಸ್ಲೆ ಘಾಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪಾದಯಾತ್ರಿಗಳು ಸುಬ್ರಹ್ಮಣ್ಯದ ಕುಲ್ಕುಂದ – ಕೈಕಂಬ ಮೂಲಕ ಬಿಳಿನೆಲೆ, ಮರ್ಧಾಳ, ಇಚ್ಲಂಪಾಡಿ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.
ರಸ್ತೆ ಮಾರ್ಗವಾಗಿ ತೆರಳುವ ಭಕ್ತರು ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲಿ ಕಸ ಹಾಕದಂತೆ, ಪರಿಸರ ಹಾಳು ಮಾಡದಂತೆ ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಕಸ ಹಾಕಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಪಾದಯಾತ್ರಿಗಳಿಗೆ ಕುಡಿಯುವ ನೀಡಿ ಸರಬರಾಜು ಮಾಡಲು ಪೂರಕ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ಋ ಸಾಗುವ ದಾರಿಯುದ್ದಕ್ಕೂ ಜಾಗೃತಿ ಮೂಲಕ ಫಲಕಗಳನ್ನು ಅಳವಡಿಸಿ ಪಾದಯಾತ್ರಿಗಳಿಗೆ ನಿರ್ದೇಶನಗಳನ್ನು ನೀಡಲಾಗುತ್ತಿದ್ದು, ಅದರಂತೆ ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರ ನೇತೃತ್ವದಲ್ಲಿ ವಲಯದ ಅಧಿಕಾರಿಗಳು, ಸಿಬ್ಬಂದಿಗಳು ಜಾಗೃತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ಸುಬ್ರಹ್ಮಣ್ಯ ವಲಯದ ವ್ಯಾಪ್ತಿಯಲ್ಲಿ ಬಿಸಿಲೆಯಿಂದ ಕಲ್ಲಾಜೆವರೆಗೆ 5 ಕಡೆ ಪೆಂಡಲ್ ಹಾಕಿ, ಪ್ರತಿ ಪೆಂಡಲ್ ನಲ್ಲಿ ತಲಾ 4 ಸಿಬ್ಬಂದಿಗಳಿದ್ದು, ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಕಸವನ್ನು ಬಿಸಾಡದೆ, ಪ್ರತಿ 100 ಮೀಟರ್ ನಲ್ಲಿ ಒದಗಿಸಿರುವ ಕಸದ ಬುಟ್ಟಿಗೆ ಹಾಕಬೇಕೆಂದು ಮನವರಿಕೆ ಮಾಡಿ, ಈ ಐದೂ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದ್ದಾರೆ.