
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಜಾತ್ರೋತ್ಸವದ ಮೊದಲ ದಿನವಾದ ಫೆ.20 ಗುರುವಾರದಂದು ಬೆಳಿಗ್ಗೆ ಮೆರವಣಿಗೆಯ ಮೂಲಕ ಶ್ರೀ ದೇವರಿಗೆ ಹಸಿರು ಕಾಣಿಕೆ ಸಮರ್ಪಣೆ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಅದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಸಂಜೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ರಾಷ್ಟ್ರೀಯ ಯೋಗಪಟು ಬೇಬಿ ಹವ್ಯಾಕ್ಷ ಎಸ್.ಆರ್ ಇವರಿಂದ ಯೋಗ ಪ್ರದರ್ಶನ, ವಿವೇಕಾನಂದ ಸ್ವಾಯುತ್ತ ಮಹಾವಿದ್ಯಾಲಯ ಪುತ್ತೂರು ಇದರ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ಶ್ರೀಶಕುಮಾರ್ ಎಂ ಕೆ ಅವರಿಂದ ಧಾರ್ಮಿಕ ಉಪನ್ಯಾಸ, ಕೌಸ್ತುಭ ಕಲಾಸೇವಾ ಟ್ರಸ್ಟ್(ರಿ.) ಕೂಜುಗೋಡು ಪ್ರಸ್ತುತಪಡಿಸುವ “ಶ್ರೀರಾಮ ದರ್ಶನ” ಮಕ್ಕಳ ಯಕ್ಷಗಾನ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಜಾತ್ರೋತ್ಸವದ ಎರಡನೇ ದಿನವಾದ ಫೆ.21 ಶುಕ್ರವಾರದಂದು ಬೆಳಿಗ್ಗೆ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಚೆಂಡೆವಾದನ, ರಾತ್ರಿ ಮಹಾಪೂಜೆ, ದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಹಾಗೂ ರಾಜಾಂಗಣ ಪ್ರಸಾದ ನಡೆಯಿತು. ಅದೇ ರೀತಿ ಈ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ಹಾಗೂ ಸಂಜೆ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ(ರಿ.) ಇವರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಗೊಂಬೆಯಾಟ ನಡೆಯಿತು.
ಜಾತ್ರೋತ್ಸವದ ಕೊನೆಯ ದಿನವಾದ ಫೆ.22 ಶನಿವಾರದಂದು ಬೆಳಿಗ್ಗೆಯಿಂದ ಶ್ರೀ ಉಳ್ಳಾಗುಲು ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ಸಂಪನ್ನಗೊಂಡಿತು.(ವರದಿ : ಉಲ್ಲಾಸ್ ಕಜ್ಜೋಡಿ)