
ಗುತ್ತಿಗಾರು ಭಾಗದಲ್ಲಿ ಹಲವಾರು ದಿನಗಳಿಂದ 3 ಫೇಸ್ ವಿದ್ಯುತ್ ಇಲ್ಲದೇ ಕೃಷಿಕರು ಸಮಸ್ಯೆ ಅನುಭವಿಸುವಂತಾಗಿದೆ. ಭೂಗತ ಕೇಬಲ್ ಫಾಲ್ಟ್ ಕಾರಣ ನೀಡಿ ಫೆ.15 ರಿಂದ 3 ಫೇಸ್ ನೀಡದೇ ಇಲಾಖೆ ಇದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳು ಮೌನ ವಹಿಸಿದ್ದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
3 ಫೇಸ್ ಇಲ್ಲದೇ ಜನತೆಗೆ ಸಾರ್ವಜನಿಕ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದ್ದು ಜತೆಗೆ ಸಿಂಗಲ್ ಫೇಸ್ ಪಂಪ್ ಕೂಡ ವೋಲ್ಟೇಜ್ ನಿಂದಾಗಿ ಸಮಸ್ಯೆಯಾಗಿದೆ.
ಎರಡು-ಮೂರು ವರ್ಷದ ಹಿಂದೆ ಗುತ್ತಿಗಾರಿನಲ್ಲಿ ವಿದ್ಯುತ್ ಸಬ್ ಸ್ಟೇಶನ್ ಆರಂಭಗೊಂಡರೂ ಸಮಸ್ಯೆ ಮುಗಿಯುತ್ತಿಲ್ಲ. ವಿದ್ಯುತ್ ಸಬ್ ಸ್ಟೇಶನ್ ಉದ್ಘಾಟನೆ ವೇಳೆ ಅಧಿಕಾರಿಗಳು 7 ಫೀಡರ್ ಮಾಡುತ್ತೇವೆ ಎಂದಿದ್ದರು. ಆದರೇ ಅದನ್ನು ನಮ್ಮ ಜನಪ್ರತಿನಿಧಿಗಳು ಫಾಲೋ ಅಪ್ ಮಾಡಬೇಕಿತ್ತು. ಆದರೆ ಹೆಚ್ಚುವರಿ ಫೀಡರ್ ಮಾಡುವ ಕೆಲಸ ಅರ್ಧದಲ್ಲಿ ನಿಂತು ಹಲವು ವರ್ಷಗಳೇ ಕಳೆದಿದೆ. ಇದರಿಂದ ಕೂಡ ಬಳಕೆದಾರರಿಗೆ ತೊಂದರೆಯಾಗಿದೆ.
ಇದಕ್ಕೆ ಟೆಂಡರ್ ಆಗಿದ್ದರೂ ಗುತ್ತಿಗೆದಾರರು ಕ್ಲಪ್ತ ಸಮಯಕ್ಕೆ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿತ್ತು. ರಸ್ತೆಯುದ್ದಕ್ಕೂ ವಿದ್ಯುತ್ ಕಂಬ ಹಾಕಿ ಕೆಲವೆಡೆ ವಯರ್ ಕೂಡ ಎಳೆಯಲಾಗಿತ್ತು. ಇದನ್ನೂ ಮುಂದುವರೆಸಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.
ಬೆಳ್ಳಾರೆಯಿಂದ ಗುತ್ತಿಗಾರಿಗೆ 33 ಕೆವಿ ಲೈನ್ ಹಾದುಹೋಗುವ ಕೆಲವೆಡೆ ಭೂಗತ ಕೇಬಲ್( UG Cable) ಅಳವಡಿಸಲಾಗಿತ್ತು. ಒಂದು ಕೇಬಲ್ ಜತೆಗೆ ಇನ್ನೊಂದು ಸ್ಪೇರ್ ಕೇಬಲ್ ಕೂಡ ಅಳವಡಿಸಲಾಗಿತ್ತು. ಕಳಪೆ ಗುಣಮಟ್ಟದ ಕೇಬಲ್ ಆಗಿರುವುದರಿಂದ ಒಂದು ಕೇಬಲ್ ಮೊದಲೇ ಕೈಕೊಟ್ಟಿತ್ತು. ಅದನ್ನು ಸರಿಪಡಿಸಿಕೊಳ್ಳದೇ ಇದ್ದುದರಿಂದ ಇದ್ದ ಒಂದು ಕೇಬಲ್ ಕೂಡ ಕೈಕೊಟ್ಟು ಕೃಷಿಕರನ್ನು ಹೈರಣಾಗುವಂತೆ ಮಾಡಿದೆ. ಇಲ್ಲಿ ಕೂಡ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಮಸ್ಯೆ ಉದ್ಭವಿಸಿದೆ. ಒಂದು ಕೈಕೊಟ್ಟಾಗ ಸರಿಪಡಿಸಿದ್ದರೇ ಈಗ ಇಂತಹ ಸಮಸ್ಯೆ ಬರುತ್ತಿರಲಿಲ್ಲ.
ಗುತ್ತಿಗಾರಿನಿಂದ ಸುಬ್ರಹ್ಮಣ್ಯಕ್ಕೆ ಭೂಗತ ಕೇಬಲ್ ಮುಖಾಂತರ ಎಕ್ಸ್ ಪ್ರೆಸ್ ಲೈನ್ ಮಾಡಲಾಗಿತ್ತು. ಈಗ ಇದರಲ್ಲಿ ಗುತ್ತಿಗಾರು ಸಬ್ ಸ್ಟೇಷನ್ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಸುಬ್ರಹ್ಮಣ್ಯ ಸಬ್ ಸ್ಟೇಷನ್ ನಲ್ಲಿ ಒವರ್ ಲೋಡ್ ಸಮಸ್ಯೆ ಉಂಟಾಗಿದ್ದು 3 ಫೇಸ್ ಬಿಡಿ ಸಿಂಗಲ್ ನೀಡಲು ಪರದಾಡುವಂತಾಗಿದೆ. ಸುಬ್ರಹ್ಮಣ್ಯದಿಂದ ಗುತ್ತಿಗಾರಿಗೆ ಅಳವಡಿಕೆ ಮಾಡಿದ 2 ಭೂಗತ ಕೇಬಲ್ ಗಳ ಪೈಕಿ 1 ಕೇಬಲ್ ಫಾಲ್ಟ್ ಆಗಿದ್ದು ಇನ್ನೊಂದು ಕೈ ಕೊಟ್ಟರೇ ಗುತ್ತಿಗಾರಿಗೆ ಕತ್ತಲೇ ಭಾಗ್ಯವೇ ಗತಿ.