
ಕೊಲ್ಲಮೊಗ್ರು ಗ್ರಾಮದ ಜಯಪ್ರಕಾಶ್ ಕಜ್ಜೋಡಿ ಎಂಬುವವರ ರಬ್ಬರ್ ಸ್ಮೋಕ್ ಹೌಸ್ ಗೆ ಫೆ.15 ರಂದು ರಾತ್ರಿ 10 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಮುಳ್ಳುಬಾಗಿಲು ಬೈಲಿನ ಜನರು, ಹರಿಹರ ಹಾಗೂ ಐನೆಕಿದು ಭಾಗದ ಕೆಲವು ಯುವಕರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದು, ಸಂಭವಿಸಬಹುದಾದ ದೊಡ್ಡ ಹಾನಿಯನ್ನು ತಪ್ಪಿಸಿದ್ದಾರೆ. ಸ್ಮೋಕ್ ಹೌಸ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸ್ಮೋಕ್ ಹೌಸ್ ನಲ್ಲಿದ್ದ ಅಲ್ಪಪ್ರಮಾಣದ ರಬ್ಬರ್ ಹಾಗೂ ಸ್ಮೋಕ್ ಹೌಸ್ ನ ಛಾವಣಿ ಬೆಂಕಿಗೆ ಆಹುತಿಯಾಗಿದೆ.
ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ ಕಾರಣ ಅಡಿಕೆ, ಕಾಳುಮೆಣಸು ಹಾಗೂ ಮರ ಬೆಂಕಿಗೆ ಆಹುತಿಯಾಗುವುದು ತಪ್ಪಿದಂತಾಗಿದೆ.
ಅಂದಾಜು ಸರಿಸುಮಾರು 1.5 ರಿಂದ 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಸ್ಮೋಕ್ ಹೌಸ್ ಗೆ ಬೆಂಕಿ ಹತ್ತಿದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದ ಕಾರಣ ಬೆಂಕಿ ನಂದಿಸುವ ಕಾರ್ಯ ಕಷ್ಟಕರವಾಯಿತು.(ವರದಿ : ಉಲ್ಲಾಸ್ ಕಜ್ಜೋಡಿ)