
ಸದಸ್ಯರ ಕೋರಿಕೆಯ ಮೇರೆಗೆ ವಾರ್ಡ್ ಅಭಿವೃದ್ಧಿಗಾಗಿ ಪ್ರತಿ ವಾರ್ಡಿಗೆ ತಲಾ ಹತ್ತು ಲಕ್ಷ ರೂಗಳ ಘೋಷಣೆ
ಸುಳ್ಯ ನಗರ ಪಂಚಾಯತ್ ಇದರ 2025 -26 ನೇ ಸಾಲಿನ ಬಜೆಟ್ ಮಂಡನಾ ಸಭೆಯು ಫೆ.5ರಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ರವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ ಅಧ್ಯಕ್ಷರು ಸುಮಾರು 14.43 ಕೋಟಿ ರೂಪಾಯಿಗಳ ಅನುದಾನಗಳನ್ನು ಮಂಡಿಸಿದರು. ಒಟ್ಟು ನಿರೀಕ್ಷಿತ ಆದಾಯ 10.02 ಕೋಟಿ ಇದ್ದು ಅದರಲ್ಲಿ ಆರಂಭಿಕ ಶುಲ್ಕ 4.40 ಕೋಟಿ ಸೇರಿ ಒಟ್ಟು 14.43 ಕೋಟಿ ಆಗಿದ್ದು ಇದರಲ್ಲಿ ನಿರೀಕ್ಷಿತ ಖರ್ಚು 11.36 ಕೋಟಿ ಗಳಾಗಿ ಇದ್ದು ಅಂತಿಮ ಶುಲ್ಕು 3.07 ಕೋಟಿಯ ಲೆಕ್ಕಪತ್ರವನ್ನು ಮಂಡಿಸಿದರು.
ನಿರೀಕ್ಷಿತ ಆದಾಯ ಹಾಗೂ ಖರ್ಚಿನ ಮೊತ್ತದಲ್ಲಿ ಒಂದು ಕೋಟಿ ರೂಪಾಯಿಗಳ ಕೊರತೆ ಕಂಡು ಬಂದ ಕಾರಣ ಈ ವಿಷಯದ ಕುರಿತು ಆಡಳಿತ ಮತ್ತು ಪ್ರತಿ ಪಕ್ಷದ ನಡುವೆ ಚರ್ಚೆಗಳು ನಡೆಯಿತು.
ಪ್ರತಿಪಕ್ಷ ಸದಸ್ಯ ಕೆ ಎಸ್ ಉಮ್ಮರ್, ಈ ಸಂದರ್ಭದಲ್ಲಿ ಮಾತನಾಡಿ ಅಧ್ಯಕ್ಷರು ಮಂಡಿಸಿರುವ ಬಜೆಟ್ಟಿನಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯಗಳು ಕಂಡುಬರುತ್ತಿಲ್ಲ. ಕೇವಲ ನಗರದ ಕಸ ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿ ಕೇವಲ ಜನರ ಕಣ್ಣು ಹೊರೆಸುವ ಬಜೆಟ್ ಇದಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದರು. ಅಲ್ಲದೆ ಕಳೆದ ವರ್ಷ ಸುಮಾರು 65,70 ಲಕ್ಷ ರೂಪಾಯಿ ಖರ್ಚು ಮಾಡಿ ನಗರ ಪಂಚಾಯತ್ ಆವರಣದಲ್ಲಿದ್ದ ಕಸವನ್ನು ವಿಲೇವಾರಿ ಮಾಡಿದ್ದು ಇದೀಗ ಮತ್ತೆ ಕಸದ ಶೆಡ್ಡಿನಲ್ಲಿ ಕಸ ತುಂಬಿ ತುಳುಕಲು ಆರಂಭಿಸುತ್ತಾ ಇದೆ. ಆದ್ದರಿಂದ ಆದಷ್ಟು ಕೂಡಲೇ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಕೇವಲ ನಗರದ ಅಭಿವೃದ್ಧಿಯ ಹಣವನ್ನು ಕಸಕ್ಕೆ ಮಾತ್ರ ಬಳಸಿದರೆ ಏನು ಪ್ರಯೋಜನ ಎಂದು ಪ್ರಶ್ನೆ ಕೇಳಿದರು. ಅಲ್ಲದೆ ಪ್ರತಿಯೊಂದು ವಾರ್ಡಿಗೂ ಕೂಡ ವಾರ್ಡಿನ ಅಭಿವೃದ್ಧಿಗಾಗಿ ತಲಾ 10 ಲಕ್ಷ ರೂಪಾಯಿ ಅನುದಾನ ಸಿಗಲೇಬೇಕು ಎಂದು ಪಟ್ಟು ಹಿಡಿದರು.
ಅಲ್ಲದೆ ಇನ್ನೂ ನಮಗೆ ಪಂಚಾಯತ್ ಅಧಿಕಾರ ಇದ್ದರೆ ಕೇವಲ ಒಂದು ವರ್ಷವಿದ್ದು ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೆ ಈ ವರ್ಷದಲ್ಲಿ ನಡೆಯಲೇಬೇಕು ಇಲ್ಲದಿದ್ದಲ್ಲಿ ಸಮಸ್ಯೆ ಆದಿತ್ತು ಎಂದು ಹೇಳಿದರು.
ಬಳಿಕ ಇವರ ಚರ್ಚೆಗೆ ಗಂಭೀರವಾಗಿ ಪರಿಗಣಿಸಿದ ಸಭೆಯ ಅಧ್ಯಕ್ಷರು ಬೇರೆ ಬೇರೆ ಯೋಜನೆ ಗಳಿಗೆ ನಿಗದಿಪಡಿಸಲಾಗಿದ್ದ ಅನುದಾನಗಳಲ್ಲಿ ಕೆಲವೊಂದನ್ನು ಕಡಿಮೆಗೊಳಿಸಿ ಪ್ರತಿ ವಾರ್ಡಿಗೂ ಹತ್ತು ಲಕ್ಷ ರೂಪಾಯಿಗಳ ಅನುದಾನ ನೀಡಲು ಅಧ್ಯಕ್ಷರು ತೀರ್ಮಾನ ಕೈಗೊಂಡರು.
ಈ ಸಂಧರ್ಭದಲ್ಲಿ ಮತ್ತೋರ್ವ ವಿಪಕ್ಷ ಸದಸ್ಯ ಶರೀಫ್ ಕಂಠಿಯವರು ಕೂಡ ಕಸದ ಬಗ್ಗೆ ನಗರದಲ್ಲಿ ಮತ್ತೆ ಉದ್ಭವವಾಗಿರುವ ಸಮಸ್ಯೆ ಬಗ್ಗೆ ಮಾತನಾಡಿ ಸುಳ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಕೆಲವು ಜನರಿಂದ ಮತ್ತು ಅವರ ಮನೆಗಳಿಂದ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಶುಚಿತ್ವವನ್ನು ಕೆಡಿಸುವ ಕಾರ್ಯ ಅವರಿಂದ ಹೆಚ್ಚಾಗಿ ಆಗುತ್ತಿದ್ದು ಪಂಚಾಯತ್ ನ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಅಲ್ಲದೆ ಶಾಲೆಗಳಲ್ಲಿ, ಮದ್ರಸಾ ಗಳಲ್ಲಿ ಮಕ್ಕಳಿಗೆ ಪರಿಸರ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಕಸದ ಬಗ್ಗೆ ಬೀದಿನಾಟಕಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.
ಇದಕ್ಕೆ ಪೂರಕ ವಾಗಿ ಮಾತನಾಡಿದ ಸದಸ್ಯರಾದ ವಿನಯ ಕುಮಾರ್ ಕಂದಡ್ಕ ನಮ್ಮ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಅತೀಯಾಗಿ ನಡೆಯುತಿದ್ದು ಮುಂದಿನ ದಿನಗಳಲ್ಲಿ ಇದು ಬಹಳ ಅಪಾಯಕಾರಿಯನ್ನು ಸೃಷ್ಟಿಸಬಹುದು.ಆದರಿಂದ ನಾವುಗಳು ಮೊದಲು ಹೆಚ್ಚೆತ್ತು ಕೊಳ್ಳಬೇಕು. ವಸ್ತುಗಳನ್ನು ಖರೀದಿಸಲು ಪೇಟೆಗೆ ಬರುವ ಸಮಯ ನಾವುಗಳು ಬಟ್ಟೆ ಚೀಲದೊಂದಿಗೆ ಬರುವ ರೂಢಿಯನ್ನು ಬೆಳೆಸಿ ಕೊಳ್ಳಬೇಕು. ಮತ್ತು ಪ್ರತಿಯೊಂದು ಹೊಟೇಲ್ ನವರು ಆಹಾರ ಸಾಮಾಗ್ರಿಗಳನ್ನು ಪಾರ್ಸಲ್ ರೂಪದಲ್ಲಿ ಗ್ರಾಹಕರಿಗೆ ನೀಡುವ ಸಮಯ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ನೀಡದೆ ಬಾಕ್ಸ್ ಗಳಲ್ಲಿ ನೀಡಬೇಕು ಹೀಗೆ ಆದರೆ ಮಾತ್ರ ನಗರಪರಿಸರದಲ್ಲಿ ಪ್ಲಾಸ್ಟಿಕ್ ಗಳನ್ನು ನಿಯಂತ್ರಣಮಾಡಬಹುದು ಎಂದು ಸಲಹೆ ನೀಡಿದರು.
ನಾಮ ನಿರ್ದೇಶಕ ಸದಸ್ಯ ರಾಜು ಪಂಡಿತ್ ಬಜೆಟ್ ಬಗ್ಗೆ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಮಶಾನಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಇಟ್ಟಿರುವ 4 ಲಕ್ಷ ತುಂಬಾ ಕಡಿಮೆ ಇದ್ದು ಇದನ್ನು ಹೆಚ್ಚು ಮಾಡುವಂತೆ ಕೇಳಿಕೊಂಡರು.
ಮುಖ್ಯಅಧಿಕಾರಿ ಸುಧಾಕರ್ ಮಾತನಾಡಿ ಘನ ತ್ಯಾಜ್ಯಕ್ಕೆ ಬಹಳಷ್ಟು ಖರ್ಚು ಆಗುತ್ತಿದ್ದು ಇದನ್ನು ಕಡಿಮೆ ಗೊಳಿಸಬೇಕಾದರೆ ಜನರ ಸಹಕಾರ ತುಂಬಾ ಅಗತ್ಯವಾಗಿದೆ. ಕಸವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಿ ಕೊಟ್ಟರೆ ಉತ್ತಮ. ಅಲ್ಲದೆ ಜನ ಪ್ರತಿನಿಧಿಗಳು ಕೂಡ ಸುಳ್ಯ ನಗರವನ್ನು ಕಸದಿಂದ ರಕ್ಷಣೆ ಹೊಂದಲು ಯಾವುದೆಲ್ಲಾ ಮಾರ್ಗಗಳನ್ನು ಯೋಜನೆಗಳಾಗಿ ರೂಪಿಸಬಹುದು ಎಂದು ಆಲೋಚನೆ ಮಾಡಿ ಅಧಿಕಾರಿಗಳಾದ ನಮಗೆ ಸಲಹೆ ಸೂಚನೆ ನೀಡಿದರೆ ಉತ್ತಮ ಎಂದು ಅಭಿಪ್ರಾಯ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಉಪಸ್ಥಿತರಿದ್ದರು.
ಸಭೆಯಲ್ಲಿ ನ ಪಂ ಸದಸ್ಯರುಗಳು ಭಾಗವಹಿಸಿದ್ದರು.
ನಗರದ ಅಭಿವೃದ್ಧಿಗೆ ಸರಕಾರದ ಅನುಧಾನ ತರಿಸಲು ವಿಪಕ್ಷದ ಸದಸ್ಯರು ಕೈ ಜೋಡಿಸಿ :ಶಶಿಕಲಾ ನೀರಬಿದಿರೆ
ಸಭೆಯಲ್ಲಿ ನಗರದ ಅಭಿವೃದ್ಧಿ ಬಗ್ಗೆ ಚರ್ಚೆಯಾಗುವ ವೇಳೆ ಅಧ್ಯಕ್ಷರು ಮಾತನಾಡಿ ಸುಳ್ಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ವಿಪಕ್ಷದ ಸದಸ್ಯರುಗಳು ಸರಕಾರದ ಮಟ್ಟಿಗೆ ನಮ್ಮ ಊರಿನ ಅಭಿವೃದ್ಧಿ ಕಾರ್ಯ ಗಳಿಗೆ ವಿಶೇಷ ಅನುಧಾನಗಳನ್ನು ತರಿಸುವ ಕಾರ್ಯ ಮಾಡಬೇಕು.
ಪಂಚಾಯತ್ ಅನುಧಾನ ಮತ್ತು ಸರಕಾರದ ಅನುಧಾನ ಎರಡೂ ಲಭಿಸಿದಾಗ ಪ್ರತಿಯೊಂದು ವಾರ್ಡ್ ಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಇದಕ್ಕೆ ಒಪ್ಪಿಗೆ ಸೂಚಿಸಿದ ಸದಸ್ಯ ಕೆ ಎಸ್ ಉಮ್ಮರ್ ನಾವು ರೆಡಿ ಇದ್ದೇವೆ. ನೀವು ಒಂದು ತಂಡವನ್ನು ರಚಿಸಿ ಸಮಯ ನಿಗಧಿ ಮಾಡಿ. ಅದರಲ್ಲಿ ನಮ್ಮ ಶಾಸಕರು ಕೂಡ ಇರಬೇಕು. ಆಗಿದ್ದಲ್ಲಿ ನಾವು ಸಂಭಂದಪಟ್ಟ ಸಚಿವರುಗಳನ್ನು ಭೇಟಿ ಮಾಡಿ ನಮ್ಮ ಸುಳ್ಯಕ್ಕೆ ಬೇಕಾಗಿರುವ ಯೋಜನೆಗಳ ಬಗ್ಗೆ ವಿನಂತಿಸಿ ತರುವ ಕೆಲಸವನ್ನು ಮಾಡೋಣ ಎಂದರು.