2025ನೇ ಇಸವಿಯ ರಸ್ತೆ ಸುರಕ್ಷಾ ಮಾಸಿಕ ಆಚರಣೆಯ ಘೋಷ ವಾಕ್ಯ “ಸಡಕ್ ಸುರಕ್ಷಾ- ಜೀವನ್ ರಕ್ಷಾ” ಆಗಿರುತ್ತದೆ. ಇದರ ಆಶಯ “ರಸ್ತೆ ಸುರಕ್ಷಾ” ನಿಯಮಗಳನ್ನು ಪಾಲಿಸಿ, ಜೀವವನ್ನು ರಕ್ಷಿಸಿಕೊಳ್ಳಿ ಎಂಬುದಾಗಿದೆ.
ಏನಿದು ರಸ್ತೆ ಸುರಕ್ಷಾ ನಿಯಮಗಳು?
ರಸ್ತೆ ಸುರಕ್ಷಾ ನಿಯಮಗಳನ್ನು ವಾಹನ ಚಾಲಕರು ಮತ್ತು ಪಾದಾಚಾರಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ. ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸಾವು ನೋವಿನ ಸಂಖ್ಯೆಯನ್ನು ನಿಯಂತ್ರಿಸಬಹುದು ಮತ್ತು ರಾಷ್ಟ್ರೀಯ ಮಾನವ ಸಂಪನ್ಮೂಲದ ಸೋರಿಕೆ ಆಗುವುದನ್ನು ತಪ್ಪಿಸಬಹುದು.
1) ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಶೇಕಡಾ 50 ರಷ್ಟು ಅಪಘಾತಗಳಿಗೆ ಮುಖ್ಯ ಕಾರಣ ಮದ್ಯಪಾನ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
2) ವಾಹನ ಚಾಲನೆ ಮಾಡುವಾಗ ಎಲ್ಲರೂ ಕಡ್ಡಾಯವಾಗಿ ಸೀಟು ಬೆಲ್ಟು ಧರಿಸತಕ್ಕದ್ದು.
3) ದ್ವಿಚಕ್ರ ವಾಹನ ಚಾಲಕರು ಮತ್ತು ಜೊತೆ ಪ್ರಯಾಣಿಕರು ಕಡ್ಡಾಯವಾಗಿ ಶಿರ ಕವಚ ಧರಿಸತಕ್ಕದ್ದು. BIS ಅನುಮೋದಿತ ISI ಮಾರ್ಕ್ ಉಳ್ಳ ಹೆಲ್ಮೆಟ್ ಬಳಸಿ ರಾಜ್ಯದಲ್ಲಿ ಸಂಭವಿಸಿರುವ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಶೇ 32% ಸವಾರರು ಸಾವಿಗೀಡಾಗಿರುತ್ತಾರೆ. ಹೆಲ್ಮೆಟ್ ಧರಿಸುವುದು ಜೀವರಕ್ಷಣೆ, ಹೆಲ್ಮೆಟ್ ಹೊರೆ ಅಲ್ಲ.
4) ವಾಹನ ಚಲಾಯಿಸುವಾಗ ನಿಮ್ಮ ಮುಂದಿನ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ
5) ವಾಹನ ಚಲಾವಣೆ ಮಾಡುವಾಗ ಯಾವುದೇ ಕಾರಣಕ್ಕೆ ಮೊಬೈಲ್ ಬಳಸಬೇಡಿ.
6) ವಾಹನ ಚಲಾವಣೆ ಮಾಡುವಾಗ ಧೂಮಪಾನ ಮಾಡುವುದು ನಿಮ್ಮ ಆರೋಗ್ಯಕ್ಕೆ ಮತ್ತು ಸಮಾಜದ ಆರೋಗ್ಯಕ್ಕೆ ಹಾನಿಕಾರಕ.
7) ವಾಹನ ಚಲಾಯಿಸುವಾಗ ನಿಮ್ಮ ವೇಗದ ಮಿತಿಯನ್ನು ನಿಯಂತ್ರಣದಲ್ಲಿಡಿ. ಅವಸರವೇ ಅಪಘಾತಕ್ಕೆ ಕಾರಣ
8) ವಾಹನ ಚಲಾಯಿಸುವಾಗ ಯಾವತ್ತೂ ರಸ್ತೆಯ ಎಡಭಾಗದಲ್ಲಿ ಚಲಿಸಿ. ಬೇರೆ ವಾಹನಗಳು ನಿಮ್ಮನ್ನು ದಾಟಿ ಮುಂದೆ ಹೋಗಲು ಬಲಭಾಗದಲ್ಲಿ ಜಾಗವಿರಲಿ.
9) ಕರ್ಕಶವಾದ ಹಾರ್ನ್ಗಳನ್ನು ದಯವಿಟ್ಟು ಬಳಸಬೇಡಿ. ಅತೀ ಅಗತ್ಯವಿದ್ದಲ್ಲಿ ಮಾತ್ರ ಹಾರ್ನ್ ಬಳಸಿ. ಆದಷ್ಟು ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಿ. ಆಸ್ಪತ್ರೆ, ಶಾಲೆಗಳ ಬಳಿ ಅನಾವಶ್ಯಕ ಹಾರ್ನ್ ಬಳಸುವುದು ಅಪರಾಧವಾಗಿರುತ್ತದೆ.
10) ಇನ್ನೊಂದು ವಾಹನವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವಾಗ ಬಲಭಾಗದಿಂದಲೇ ಓವರ್ಟೇಕ್ ಮಾಡಬೇಕು. ರಸ್ತೆ ತಿರುವುಗಳಲ್ಲಿ ವಾಹನ ತಿರುಗಿಸುವ ಮುಂಚೆ ಇಂಡಿಕೇಟರ್ ಸೂಚನೆ ನೀಡಿ.
11) ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು 60 ನಿಮಿಷದೊಳಗೆ (golden hour) ಆಸ್ಪತ್ರೆಗೆ ಸೇರಿಸಿ ಜೀವರಕ್ಷಕರಾಗಿರಿ. ಆರೋಗ್ಯ ಕವಚ 108ಕ್ಕೆ ಕರೆಮಾಡಿರಿ.
12) ಮೋಟಾರು ವಾಹನ ಕಾಯ್ದೆ-1988 ರ ಪ್ರಕಾರ ರಸ್ತೆ ನಿಯಮ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ
ನೆನಪಿರಲಿ:
- ಅಜಾಗರೂಕತೆ ಚಾಲನೆ ಹಾಗೂ ವ್ಹೀಲಿಂಗ್ ಅಪಾಯವನ್ನು ಆಹ್ವಾನಿಸಿದಂತೆ.
- ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ
- ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ
- ಮಂಪರಿನಲ್ಲಿ ವಾಹನ ಚಾಲನೆ ಮಾಡುವುದು ಅಪಾಯಕಾರಿಸುರಕ್ಷಿತವಾಗಿ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸಿ. ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತದೆ.
- ನಿಮ್ಮ ಜೀವ ಅತ್ಯಮುಲ್ಯ. ಜಾಗೃತ ಚಾಲನೆಗೆ ಮೊದಲ ಆದ್ಯತೆ ನೀಡಿ. ಚಾಲನೆಯಲ್ಲಿ ಮನಸ್ಸು ಪ್ರಶಾಂತವಾಗಿರಲಿ ಮತ್ತು ಸಹನೆ ಇರಲಿ
ಕೊನೆ ಮಾತು:
ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಪೊಲೀಸರ ಭಯ ಮತ್ತು ದಂಡ ತೆರಬೇಕು ಎಂಬ ಕಾರಣದಿಂದ ಸೀಟು ಬೆಲ್ಟ್ ಧರಿಸಬೇಡಿ, ನಿಮ್ಮ ರಕ್ಷಣೆಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ. ಯಾರೂ ನಮ್ಮನ್ನು ಗಮನಿಸದೆ ಇರುವಾಗ ನಮ್ಮ ನಡುವಳಿಕೆಯೇ ನಮ್ಮ ನಿಜವಾದ ಸಂಸ್ಕೃತಿ. ರಸ್ತೆ ಇರುವುದು ಕೇವಲ ವಾಹನ ಸಂಚಾರಕ್ಕೆ ಮಾತ್ರವಲ್ಲ, ರಸ್ತೆ ಬದಿಯಲ್ಲಿ ನಡೆದಾಡುವ ಪಾದಚಾರಿಗಳಿಗೂ ಗೌರವ ನೀಡಿ. ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸೋಣ. ಸುರಕ್ಷಿತ ಭಾರತಕ್ಕಾಗಿ ಪ್ರತಿಜ್ಞೆ ಮಾಡೋಣ. ರಸ್ತೆ ಸುರಕ್ಷತೆಗಾಗಿ ಪ್ರತಿಜ್ಞೆ ತೆಗೆದುಕೊಳ್ಳೋಣ.
.ಜೈ ಹಿಂದ್
ಡಾ|| ಮುರಲೀ ಮೋಹನ್ಚೂಂತಾರು