ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಅವಭೃತವು ಗೌರಿ ಹೊಳೆಯ ಜಳಕದ ಗುಂಡಿಯಲ್ಲಿ ಸೋಮವಾರ ರಾತ್ರಿ ನೆರವೇರಿತು.
ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ರಾತ್ರಿ ಶ್ರೀ ದೇವರ ಬಲಿ ಹೊರಟು ಅಲ್ಲಲ್ಲಿ ಕಟ್ಟೆಪೂಜೆ ಸ್ವೀಕರಿಸುತ್ತಾ ಶ್ರೀದೇವಿ ಅವಭೃತಕ್ಕೆ ತೆರಳಿತು. ಹಿಂಭಾಗದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು. ಅವೃಭತದ ಬಳಿಕ ಪುನಃ ದೇವಾಲಯಕ್ಕೆ ಆಗಮಿಸಿ ಧ್ವಜಾವರೋಹಣ ನಡೆಯಿತು.
ಜಳಕದ ಬಳಿ ಮುಕ್ಕೂರು ಉಳ್ಳಾಲ್ತಿ ಭಕ್ತವೃಂದದ ವತಿಯಿಂದ ಸಿಡಿಮದ್ದು ನಡೆಯಿತು. ಅವಭೃಥ ಸಾಗುವ ರಾಜ ರಸ್ತೆಯ ಅಲ್ಲಲ್ಲಿ ಪಾನಕ ಸಹಿತ ಉಪಹಾರದ ವ್ಯವಸ್ಥೆಯನ್ನು ಭಕ್ತಾಧಿಗಳು ಕಲ್ಪಿಸಿದರು.
ಮಹಾಪೂಜೆ, ಪ್ರಸಾದ ವಿತರಣೆ ನಂತರ ಉಳ್ಳಾಕುಲು, ಮೈಷಂತಾಯ, ಶ್ರೀ ವ್ಯಾಘ್ರಚಾಮುಂಡಿ ದೈವದ ಭಂಡಾರ ತೆಗೆಯಲಾಯಿತು. ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.