ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಶನಿವಾರ ದರ್ಶನ ಬಲಿ- ಬಟ್ಟಲು ಕಾಣಿಕೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ದೇವಸ್ಥಾನದ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ ಮಾರ್ಗದರ್ಶನದಲ್ಲಿ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ದೇವರು ಬಲಿ ಹೊರಟು ಉತ್ಸವದ ಸಂದರ್ಭದಲ್ಲಿ ಶ್ರೀ ಉಳ್ಳಾಕುಲು ದೈವದ ಭಂಡಾರ ಬಂದು ದೇವರನ್ನು ಎದುರುಗೊಂಡಿತು. ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ನಡೆಯಿತು. ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಸುಳ್ಯ, ಕಡಬ, ಪುತ್ತೂರು ತಾಲೂಕಿನ ಇಪ್ಪತ್ತೆರಡು ಗ್ರಾಮಗಳಿಗೆ ಸೇರಿರುವ ದೇವಸ್ಥಾನ ಇದಾಗಿದ್ದು ದರ್ಶನ ಬಲಿ, ಬಟ್ಟಲು ಕಾಣಿಕೆ ಸಂದರ್ಭ ತಾಲೂಕು, ಹೊರ ತಾಲೂಕಿನ ವಿವಿಧ ಭಾಗದಿಂದ ಭಕ್ತರು ಆಗಮಿಸಿದರು. ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ಬೀಕರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಸಹಿತ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.