ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನಾ ಸಭೆಯು ಜ.18ರಂದು ಸುಳ್ಯ ವಲಯ ಅರಣ್ಯ ಇಲಾಖೆ ಕಛೇರಿ ಮುಂಭಾಗದಲ್ಲಿ ನಡೆಯಿತು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಕಿಶೋರ್ ಕುಮಾರ್ ಶಿರಾಡಿ ಮಾತನಾಡಿ ಇದು ರೈತರ ಬದುಕಿಗಾಗಿ ನಡೆಸುವ ಹೋರಾಟವಾಗಿದೆ. ರೈತರಾದ ನಮಗೆ ಇನ್ನು ಸ್ವಾತಂತ್ರ್ಯವೇ ಸಿಕ್ಕಿಲ್ಲ ಎಂಬುವಂತೆ ಕಾಣಿಸುತ್ತಿದೆ. ಬ್ರಿಟಿಷ್ ಕಾಲದಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ ಇದೀಗ ಅರಣ್ಯ ಹಾಗೂ ಕಂದಾಯ ಇಲಾಖೆ ನಡೆದುಕೊಳ್ಳುತ್ತಿದೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಇದೀಗ ಪೋಲಿಸ್ ಇಲಾಖೆಯನ್ನು ಬಳಸಿಕೊಂಡು ಕೇಸುಗಳನ್ನು ದಾಖಲಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶದ ಮಾತುಗಳನ್ನಾಡಿದರು. ನಮ್ಮ ಬಳಿಯಲ್ಲಿ ಎಲ್ಲಾ ದಾಖಲೆಗಳು ಇವೆ ಅರಣ್ಯ ಇಲಾಖೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ರೈತರಿಗೆ ಜಮೀನಿನ ಸರ್ವೆ ನಂಬರ್ ಗಳನ್ನು ನೀಡಿದರ ಪರಿಣಾಮವಾಗಿ ಇಂದು ಈ ಸ್ಥಿತಿಗೆ ರೈತರು ಬರುವಂತೆ ಆಗಿದೆ. ಇದರಿಂದಾಗಿ ನಮಗೆ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ನಂಬಿಕೆ ಇಲ್ಲದಂತಾಗಿದೆ. ನಮ್ಮ ಹೋರಾಟವು ಅವಿರತವಾಗಿ ನಡೆಯಲಿದೆ ಎಂದು ಹೇಳಿದರು. ಅಲ್ಲದೇ ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿ ಗುರುತು ಆಗಬೇಕು ಎಂದು ಒತ್ತಾಯಿಸಿದರು.
ಸುಳ್ಯ ತಾಲೂಕು ಸಂಚಾಲಕ ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ಹರಿಪ್ರಸಾದ್ ಪಾನತ್ತಿಲ, ತೀರ್ಥರಾಮ ನೆಡ್ಚಿಲ್, ಎ.ಜಿ.ಕರುಣಾಕರ, ಪಿ.ಎಸ್.ಗಂಗಾಧರ, ಸುರೇಶ್ ಎಂ.ಎಚ್, ಸಯ್ಯದ್ ಮೀರಾ ಸಾಹೇಬ್, ಪುರುಷೋತ್ತಮ ಕೋಲ್ಚಾರ್, ಜಯಪ್ರಕಾಶ್ ಕೂಜುಗೋಡು, ಅಶೋಕ್ ಪೀಚೆ, ಚಿತ್ರಾ ಕುಮಾರಿ, ಅನಿಲ್ ಕೆ.ಸಿ. ಪರಿವಾರಕಾನ, ಪ್ರಸನ್ನ ಅಜ್ಜನಗದ್ದೆ, ರಾಜರಾಮ್ ,ಹುಕ್ರಪ್ಪ ನೆಡಿಲು, ದಾಮೋದರ, ರವಿ ತೊಡಿಕಾನ ಮತ್ತಿತರರು ಉಪಸ್ಥಿತರಿದ್ದರು.