ಸರಕಾರಿ ಶಾಲೆಗಳ ಉತ್ತೇಜನಕ್ಕೆ ಹಲವಾರು ರೀತಿಯ ಯೋಜನೆಗಳನ್ನು ಸರಕಾರಗಳು ನಡೆಸುತ್ತಿದ್ದು ಖಾಸಗಿ ಶಾಲೆಗಳ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವಾಗ ಸರಕಾರಿ ಶಾಲೆಗಳಿಗೆ ಸರಕಾರಿ ಸಂಸ್ಥೆಯೇ ನೀರಿನ ಸಂಪರ್ಕ ಕಡಿತ ಗೊಳಿಸಿದ್ದರು. ಈ ಶಾಲೆಯವರು ದೂರು ಸಲ್ಲಿಸಿದ ಬಳಿಕ ಹಿರಿಯ ಅಧಿಕಾರಿಗಳ ಖಡಕ್ ಎಚ್ಚರಿಕೆಯ ಬಳಿಕ ನೀರಿನ ಸಂಪರ್ಕ ಮರು ಜೋಡಣೆ ನಡೆಸಿದ ಘಟನೆ ಜ.೩ ರಂದು ಅಜ್ಜಾವರದಿಂದ ವರದಿಯಾಗಿದೆ.
ಘಟನೆಯ ಹಿನ್ನಲೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಸರಕಾರಿ ರಜೆಯನ್ನು ಸರಕಾರ ಆದೇಶಿಸಿದ್ದು ಅದರಂತೆ ಸ.ಹಿ.ಪ್ರಾ ಶಾಲೆ ಅಜ್ಜಾವರ ಇಲ್ಲಿಯು ರಜೆಯನ್ನು ನೀಡಲಾಗಿತ್ತು ಅಂದು ಈ ಶಾಲೆಯಲ್ಲಿ ಶಾಲೆಯ ಟ್ಯಾಂಕ್ ತುಂಬಿ ಪೋಲಾಗುತ್ತಿದ್ದು ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ ಎಂದು ಶಾಲೆಯ ಬೋರ್ ಬೋರ್ ವೆಲ್ ನಿಂದ ಶಾಲೆಗೆ ಇರುವ ಸಂಪರ್ಕವನ್ನೆ ಗ್ರಾ.ಪಂ ಕಡಿತ ಗೊಳಿಸಿದ್ದರು.
ಶಾಲೆಯಲ್ಲಿ ಶತಮಾನೋತ್ಸವ ಹಿನ್ನೆಲೆಯಲ್ಲಿ ನೂತನ ಕಟ್ಟಡಗಳ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಈಗ ನೀರಿಗೂ ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದನ್ನು ಮನಗಂಡ ಶಾಲಾಭಿವೃದ್ದಿ ಸಮಿತಿಯು ಗ್ರಾ.ಪಂ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಗೆ ತಿಳಿಸಿದಾಗ ಇಂದು ನಾಳೆ ಎಂದು ನಿರ್ಲಕ್ಷ್ಯಮಾಡತೊಡಗಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಲಾಭಿವೃದ್ದಿ ಸಮಿತಿಯು ಶಿಕ್ಷಣ ಇಲಾಖೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಇವರ ಗಮನಕ್ಕೆ ತಂದರು. ಇಓ ರಾಜಣ್ಣ ಅವರು ಖಡಕ್ ಆಗಿ ಆದೇಶ ನೀಡಿದ್ದರಿಂದ ಪಂಚಾಯತ್ ಸಿಬ್ಬಂದಿಗಳು ಶಾಲಾ ಮೈದಾನಕ್ಕೆ ತೆರಳಿ ಮತ್ತೆ ಸಂಪರ್ಕ ಕಲ್ಪಿಸಿದರು.
ಗ್ರಾ.ಪಂ ಸ್ಥಳೀಯ ಸದಸ್ಯರ ಗಮನಕ್ಕೆ ತಾರದೇ ಈ ರೀತಿಯ ಕೆಲಸವನ್ನು ಮಾಡಿದ್ದಾರೆ. ಅದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶೌಚಾಲಯಕ್ಕೂ ತೆರಳಲು ಕಳೆದ ಒಂದು ವಾರದಿಂದ ನೀರಿಗೆ ಸಮಸ್ಯೆ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗೆ ತಿಳಿಸಿ ಪ್ರಯೋಜನ ಕಾಣದೇ ಇದ್ದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಪ್ರಮುಖರು ತಿಳಿಸಿದ್ದಾರೆ .
ಗ್ರಾ.ಪಂ ಅಧ್ಯಕ್ಷರು , ಅಭಿವೃದ್ಧಿ ಅಧಿಕಾರಿಗಳಿಂದ ಸ್ಪಸ್ಟನೆ .
ಈ ಪ್ರಕರಣದ ಕುರಿತು ಗ್ರಾ.ಪಂ ಅಧ್ಯಕ್ಷರಾದ ದೇವಕಿ ಮೇನಾಲ ಇವರನ್ನು ಸಂಪರ್ಕಿಸಿದಾಗ ನೀರಿನ ಸಂಪರ್ಕ ಕಡಿತ ಗೊಳಿಸಿರುವುದು ಸತ್ಯ. ಆದರೆ ಹೆಚ್ಚಿನ ಮಾಹಿತಿ ನನಗಿಲ್ಲ ಮತ್ತು ಇದೀಗ ಕೆಲವೇ ತಿಂಗಳುಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಇದರ ಕುರಿತಾಗಿ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾತನಾಡುತ್ತಾ ಸರಕಾರಿ ರಜೆ ಇರುವ ದಿನದಂದು ಶಾಲಾ ಮೈದಾನದಲ್ಲಿ ನೀರು ತುಂಬಿ ಹೋಗ್ತಾ ಇದ್ದು ಅದನ್ನು ಸರಿ ಪಡಿಸಿ ಎಂದು ದೂರು ಬಂದ ಹಿನ್ನೆಲೆಯಲ್ಲಿ ಕೊಳವೆ ಬಾವಿಯಿಂದ ನೇರವಾಗಿ ಶಾಲೆಗೆ ನೀಡಿದ್ದ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಅಲ್ಲದೇ ಗ್ರಾ.ಪಂ ಗೆ ಶಾಲಾಭಿವೃದ್ದಿ ಸಮಿತಿಯವರು ಬಂದಿದ್ದು ಅದನ್ನು ಸರಿ ಪಡಿಸಲು ತಿಳಿಸಲಾಗಿದೆ ಹಾಗೂ ಆ ಕೊಳವೆ ಬಾವಿ ಶಾಲೆಯದ್ದು ಆಗಿದ್ದು ಅದಕ್ಕೆ ಪಂಪು ಮಾತ್ರ ಪಂಚಾಯತ್ ಅಳವಡಿಕೆ ಮಾಡಲಾಗಿದೆ ಹಾಗೂ ಇಂದು ಮುಂಜಾನೆ ಶಾಲೆಗೆ ತೆರಳಿ ಸ್ಥಳ ಪರಿಶೀಲನೆ ಮಾಡಿದಾಗ ನೀರು ಹರಿಯುವುದು ಗಮನಕ್ಕೆ ಬಂದಿದೆ ಹಾಗೂ ಅಲ್ಲಿ ಶಾಲೆಗೆ ಯಾವುದೇ ನೀರಿನ ಸಮಸ್ಯೆ ಉದ್ಬವವಾಗಿಲ್ಲಾ ,ಸಾರ್ವಜನಿಕ ಕುಡಿಯುವ ನೀರು ಪೋಲಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಂಪರ್ಕವನ್ನು ಕಡಿತ ಗೊಳಿಸಿದ್ದೇವೆ ಅಲ್ಲದೇ ಅಲ್ಲಿಂದಲೇ ಸಾರ್ವಜನಿಕ ಕುಡಿಯುವ ನೀರು ಕೂಡ ಅದೇ ಕೊಳವೆ ಬಾವಿಯಿಂದ ಪೂರೈಕೆ ಮಾಡುತ್ತಿರುವುದರಿಂದ ಟ್ಯಾಂಕ್ ತುಂಬಲ್ಲ ಎಂದು ಕಡಿತ ಗೊಳಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಶತಮಾನೋತ್ಸವ ಸಂಭ್ರಮದ ಶಾಲೆಯಲ್ಲಿ ಅಭಿವೃದ್ಧಿ ಕೆಲಸಗಳು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ಅನುದಾನ ಬಳಸಿಕೊಂಡು ಭರದಿಂದ ಸಾಗುತ್ತಿದ್ದು ಇದನ್ನು ತಡೆಯಲು ನಡೆಸುವ ಹುನ್ನಾರವಾಗಿ ಈ ರೀತಿಯಲ್ಲಿ ಕೆಲವರು ಶಾಲೆಯ ಅಭಿವೃದ್ಧಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಕೆಲ ಹಳೆ ವಿದ್ಯಾರ್ಥಿಗಳು ದೂರಿದ್ದಾರೆ.