ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದುದು ನಮ್ಮ ಕರ್ತವ್ಯ. ದೇವಾಲಯಗಳು ಸಂಸ್ಕಾರ, ಸಂಸ್ಕೃತಿ ಸಾರುವ ಪ್ರಧಾನ ಕೇಂದ್ರ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಯುವಜನತೆಯಲ್ಲಿ ಧಾರ್ಮಿಕ ಶ್ರದ್ಧೆ ಕುಂಠಿತವಾಗುತ್ತಿದೆ. ಇಂದಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅನಿವಾರ್ಯವಾಗಿದ್ದು, ಇಲ್ಲಿನ ಮಕ್ಕಳು ಧಾರ್ಮಿಕ ಶಿಕ್ಷಣ ಪಡೆಯುತ್ತಿರುವುದು ಮೆಚ್ಚವಂತಹದ್ದು. ನಾವು ಧಾರ್ಮಿಕ ಕೇಂದ್ರಗಳಲ್ಲಿ ತೊಡಗಿಸಿಕೊಂಡಾಗ ಧಾರ್ಮಿಕತೆ, ಸಂಸ್ಕಾರ ಬರಲು ಸಾಧ್ಯವಿದೆ. ಧಾರ್ಮಿಕ ನಂಬಿಕೆ ಜಾಗೃತವಾದಾಗ ನಮ್ಮ ಸಂಸ್ಕೃತಿ, ಧರ್ಮ ಉಳಿಯಲಿದೆ. ಆ ಮೂಲಕ ಊರು ಸುಭಿಕ್ಷೆಯಾಗಲಿದೆ ಎಂದರು.
ಕೇಂದ್ರ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ಊರಿನ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಬೇಕೆಂಬುದು ಪ್ರತಿಯೊಬ್ಬರ ಆಶಯ ಆಗಿರುತ್ತದೆ. ಯಾವ ಊರಿಗೆ ಹೋದರೂ, ಆ ಊರಿನ ದೇವಸ್ಥಾನ, ಶಾಲೆ, ಆಸ್ಪತ್ರೆ ಹೇಗಿರುತ್ತದೆಯೋ ಅದಾಗಲೇ ಆ ಊರು ಹೇಗಿದೆ ಎಂಬುದನ್ನು ನಾವು ತಿಳಿಯಬಹುದು ಎಂದು ಹಿರಿಯರು ಹೇಳುತ್ತಿದ್ದರು. ಇದು ಸತ್ಯ ವಿಚಾರ ಎಂದರು. ನಮ್ಮ ಸಂಸ್ಕೃತಿ ಉಳಿಸಲು ಅದಕ್ಕೆ ಕೇಂದ್ರ ದೇವಸ್ಥಾನ. ಕೇವಲ ಪುಸ್ತಕದ ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣ ಮಕ್ಕಳಿಗೆ ನೀಡುವುದರಿಂದ ಅವರಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯವಿದೆ ಎಂದರು. ನಮ್ಮ ಧಾರ್ಮಿಕತೆ, ನಮ್ಮ ದೇಶ, ನಮ್ಮ ವಿಚಾರ, ನಮ್ಮ ವ್ಯವಸ್ಥೆಯನ್ನು ಉಳಿಸುವುದು ಅನಿವಾರ್ಯವಾಗಿದೆ.
೨೦೪೭ರಲ್ಲಿ ವಿಕಸಿತ ಭಾರತ ಗುರಿ;
೨೦೪೭ಕ್ಕೆ ಭಾರತ ೧೦೦ನೇ ಸ್ವಾತಂತ್ರ್ಯೋತ್ಸವ ಆಚರಿಸುವುದನ್ನು ನೋಡುವ ಸಮಯ ನಮ್ಮ ಮುಂದಿದೆ. ಆ ವೇಳೆಗೆ ನಮ್ಮ ಭಾರತ ವಿಕಸಿತ ಭಾರತ ಆಗಬೇಕು ಎಂಬುದು ನಮ್ಮ ಪ್ರಧಾನಿಗಳ ಅಪೇಕ್ಷೆ. ಇಂದು ನಮ್ಮ ದೇಶ ಆರ್ಥಿಕ ಬೆಳವಣಿಗೆಯಲ್ಲಿ ಪ್ರಪಂಚದಲ್ಲಿ ೫ನೇ ಸ್ಥಾನದಲ್ಲಿದೆ. ಇದು ಹೆಮ್ಮೆಯ ವಿಚಾರ. ಭಾರತೀಯರಾದ ನಮ್ಮಿಂದ ವಿಕಸಿತ ಭಾರತ ಸಾಧ್ಯವಿದೆ. ಅದಕ್ಕಾಗಿ ನಾವು ಏನು ಕೆಲಸ ಮಾಡುತ್ತಿದ್ದೇವೋ ಅದನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡಿದಾಗ ವಿಕಸಿತ ಭಾರತ ಆಗಲಿದೆ ಎಂದು ಅವರು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಸೀತಾರಾಮಯ್ಯ ಕೇಂಜೂರು, ದೆಹಲಿ ತುಳು ಸಂಘದ ಅಧ್ಯಕ್ಷ ವಸಂತ ರೈ ಬೆಳ್ಳಾರೆ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸದಸ್ಯ ವೆಂಕಪ್ಪ ಗೌಡ ಆಲಾಜೆ ವಂದಿಸಿದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.
ತಂತ್ರಿಗಳಿಗೆ ಸ್ವಾಗತ:
ಬುಧವಾರ ಕೇತ್ರಕ್ಕೆ ಆಗಮಿಸಿದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಬಳಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಾಸಾದಶುದ್ಧಿ, ಅಂಕುರಾರೋಪಣ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.