ಸುಳ್ಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹಾಗೂ ಸುರಕ್ಷತೆಯ ಉದ್ದೇಶದಿಂದ ಪೊಲೀಸ್ ಇಲಾಖೆ, ತುರ್ತು ಸಹಾಯವಾಣಿ ಸೇರಿದಂತೆ ವಿವಿಧ ಇಲಾಖೆಗಳ ಸಹಾಯವಾಣಿಗಳನ್ನು ದೊಡ್ಡದಾಗಿ ಕಡ್ಡಾಯವಾಗಿ ಅಳವಡಿಸಬೇಕು. ಹಾಗೂ ಸಲಹಾ ಪೆಟ್ಟಿಗಳನ್ನೂ ಅಳವಡಿಸಿಡಬೇಕು. ಅದರಲ್ಲಿ ಸಲ್ಲಿಕೆಯಾಗುವ ಸಲಹೆಗಳ ಬಗ್ಗೆ ಸಮಾಲೋಚನೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಗಳಲ್ಲಿ ಹಾಗೂ ಹಾಸ್ಟೇಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಶಾಲಾ ವಾಹನದಲ್ಲೂ ಸುರಕ್ಷತೆ ಕಡೆಗೆ ಗಮನ ನೀಡಬೇಕು. ವಾಹನದ ಚಾಲಕರ ಬಗ್ಗೆ ಗಮನ ವಹಿಸಿ ಎಂದು ಸಲಹೆ ನೀಡಿದರು.
ಸಮಿತಿಗಳ ಸಭೆ ನಡೆಸಿ:
ಮಕ್ಕಳ ಹಕ್ಕುಗಳ ರಕ್ಷಣಾ ಸಂಬಂಧಿಸಿದ ತಾಲೂಕು ಮಟ್ಟದ ಸಮಿತಿಗಳ ಸಭೆಯನ್ನು ಎರಡು ತಿಂಗಳಿಗೊಮ್ಮೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಿ, ತಾಲೂಕಿನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಬೇಕು. ತಾಲೂಕು ಮಟ್ಟದ ಸಭೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಪೂರಕವಾಗಲಿದೆ ಎಂದ ಅವರು ಗ್ರಾಮ ಮಟ್ಟದ ಮಕ್ಕಳ ಕಾವಲು ಪಡೆಯನ್ನು, ಮಕ್ಕಳ ಗ್ರಾಮ ಸಭೆಯನ್ನು ಸಮರ್ಪಕವಾಗಿ ನಡೆಸುವಂತೆ ಸೂಚಿಸಿ, ಈ ಭಾಗದಲ್ಲಿ ಸಭೆ ನಡೆಸಲಾಗಿದೆಯಾ ಎಂದು ಅಧಿಕಾರಿಗಳಲ್ಲಿ ಮಾಹಿತಿ ಪಡೆದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ದೂರುಗಳು ಸಲ್ಲಿಕೆಯಾದರೂ ಆ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಬಾಲ್ಯ ವಿವಾಹ ನಡೆಯದಂತೆ ತಡೆಯಬೇಕು. ಬಾಲ್ಯ ವಿವಾಹವನ್ನು ಕಾರ್ಯಕ್ರಮ ದಿನವೇ ತಡೆಯುವ ಬದಲು, ಅದಕ್ಕೂ ಮೊದಲೇ ಸಂಬಂಧಿಸಿದವರ ಮನೆ ಭೇಟಿ ಮಾಡಿ, ಅವರಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು. ಶಾಲೆ, ಹಾಸ್ಟೇಲ್‌ಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪೋಕ್ಸೋ, ಸೈಬರ್ ಕ್ರೈಮ್, ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಗಾರವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
೧೪ ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಅಂತಹ ಮಕ್ಕಳು ಕಂಡುಬಂದಲ್ಲಿ ಅವರ ಮನೆಗೆ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಭೇಟಿ ಮಾಡಿ, ಶಾಲೆಗೆ ಬರಲು ಸೂಚಿಸಬೇಕು. ಈ ವೇಳೆ ತರಗತಿ ನಡೆಸಲು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು. ವಿದ್ಯಾರ್ಥಿ ನಿಲಯಗಳಲ್ಲಿ ನಿಲಯದ ಅಧಿಕಾರಿಗಳು ಆಡಳಿತಾತ್ಮಕ ಕೆಲಸ ಮಾಡುವ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ, ಕಲಿಕಾ ಗುಣಮಟ್ಟದ ಬಗ್ಗೆಯೂ ಗಮನ ಹರಿಸಬೇಕು ಎಂದರು.
೧೪ ವರ್ಷದೊಳಗಿನ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸುತ್ತದೆ. ಆದರೆ ೧೫ ವರ್ಷದ ಬಳಿಕ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹೆಚ್ಚಿನ ಕಡೆ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಮನೆಯಲ್ಲಿಯೇ ಇರುವ ಹೆಣ್ಣು ಮಕ್ಕಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಮಾತನಾಡಿದ ನಾಗಣ್ಣ ಅವರು, ೧೫ ವರ್ಷದ ಬಳಿಕವೂಅವರಿಗೆ ಶಿಕ್ಷಣ ನೀಡಬೇಕು, ಇದಕ್ಕೆ ಪೂರಕವಾಗಿ ಡಿಡಿಪಿಐ ಮಟ್ಟದಲ್ಲಿ ಗಮನ ಹರಿಸುವ ಕೆಲಸ ಆಗಬೇಕು ಎಂದ ಅವರು, ಮಕ್ಕಳಿಗೆ ಸರಕಾರದಿಂದ ತಲುಪಬೇಕಾದ ಸೌಲಭ್ಯಗಳನ್ನು ಅವರಿಗೆ ತಲುಪುವಂತೆ ಅಧಿಕಾರಿಗಳು ಮಾಡಬೇಕು ಎಂದರು.
ಮಕ್ಕಳ ಹಕ್ಕುಗಳ ರಕ್ಷಣಾ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಾಯವಾಣಿ ವಿಭಾಗದ ಜಸ್ಮಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್, ವಾಸೀರ್, ಸುಳ್ಯ ತಹಶೀಲ್ದಾರ್ ಗ್ರೇಡ್ ೨ ಮಂಜುನಾಥ್, ಸಿಡಿಪಿಒ ಶೈಲಜಾ, ಬಿಇಒ ಕಛೇರಿಯ ಸಂದ್ಯಾ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ., ತಾ.ಪಂ. ಪ್ರಭಾರ ಸಹಾಯಕ ನಿರ್ದೇಶಕ ರವಿಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಜಯ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ, ಪ್ರವೀಣ್ , ಕ್ರೈ ಎಸೈ ಸರಸ್ವತಿ ಬಿ.ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.