Ad Widget

ಕರ್ನಾಟಕ ಅರೆಭಾಷೆ ಅಕಾಡೆಮಿ ವತಿಯಿಂದ “ಅರೆಭಾಷೆ” ದಿನಾಚರಣೆ

. . . . . . . . .

ಭಾಷೆ ಬೆಳವಣಿಗೆ ಮತ್ತು ವಿಸ್ತರಣೆಗೆ ಸಹಕರಿಸಿದ ವಿವಿಧ ಕ್ಷೇತ್ರದ 6 ಮಂದಿ ಸಾಧಕರಿಗೆ ಸನ್ಮಾನ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನಾ ದಿನದ ಅಂಗವಾಗಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ, ತರುಣ ನಗರ ಘಟಕ ಮತ್ತು ಮಹಿಳಾ ಸಮಿತಿಯ ಸಹಕಾರದಲ್ಲಿ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಅರೆಭಾಷೆ ದಿನಾಚರಣೆ ಡಿ.15ರಂದು ನಡೆಯಿತು.

ನಿವೃತ್ತ ಅರಣ್ಯ ಪಾಲಕ ಅಮೈ ಸುಂದರ ಗೌಡ ಪಿಂಗಾರ ಅರಳಿಸುವುದರ ಮೂಲಕ ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ವಿವಿಧ ತಂಡಗಳಿಂದ ಅರೆಭಾಷೆ ಹಾಡು, ನೃತ್ಯ ಪದರ್ಶನ, ರೂಪಕ, ಮಿಮಿಕ್ರಿ, ಪೊಳ್ಮೆ ಪದ್ಯ ಬಂಡಿ, ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆಯಿತು.

ಸಭಾ ಕಾರ್ಯಕ್ರಮ- ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ವಹಿಸಿದ್ದರು. ಹಿರಿಯ ಇಂಜಿನಿಯರ್ ಡಿ.ಎಂ.ಸುಮಿತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸುಳ್ಯ ತಾ.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಸಾಹಿತಿ ಶೈಲಜಾ ದಿನೇಶ್ ಅವರು ದಿಕ್ಕೂಚಿ ಭಾಷಣ ಮಾಡಿ, ನಮ್ಮ ಹೃದಯ ಭಾಷೆ ಅರೆಭಾಷೆ. ಹಾಗಾಗಿ ನಮ್ಮ ಭಾಷೆ ಮಾತನಾಡಲು ಎಲ್ಲಿಯೂ ಕೂಡ ನಾಚಿಕೆ ಕೀಳರಿಮೆ ಬೇಡ. ಮಕ್ಕಳೊಂದಿಗೆ ನಾವು ಸದಾ ಮನೆಯಲ್ಲಿ ನಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ಜೊತೆಗೆ ಬಿಟ್ಟು ಹೋಗುತ್ತಿರುವ ಪದಗಳ ಬಳಕೆಯನ್ನು ಹೆಚ್ಚಾಗಿ ಭಾಷೆಯಲ್ಲಿ ಬಳಸಿಕೊಂಡು ಮಾತನಾಡಿದಾಗ ನಮ್ಮ ಹೃದಯದ ಭಾಷೆ ಮುಂದೆ ಹೋಗಲು ಸಾಧ್ಯ.

ಇದರೊಂದಿಗೆ ಈಗಿನ ಕಂಪ್ಯೂಟರ್ ಯುಗದಲ್ಲಿ ನಮ್ಮ ಭಾಷೆಯನ್ನು ಹಾಗೂ ಭಾಷೆಯ ಮೇಲೆ ಆಸಕ್ತಿ ಇರುವವರನ್ನು ಜೊತೆಗೂಡಿಸಿಕೊಂಡು ಯುವ ಜನತೆಗೆ ಮಾದರಿಯಾಗುವಂತಹ ಕೆಲಸಗಳನ್ನು ಸೋಶಿಯಲ್ ಮೀಡಿಯ ಮೂಲಕ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದಾನಂದ ಮಾವಜಿ ಮಾತನಾಡಿ ಅರೆಭಾಷೆ ಅಕಾಡೆಮಿ ಪ್ರಾರಂಭವಾಗಲು ಸುಳ್ಯದವರ ಶ್ರಮ ತುಂಬಾ ಇದೆ. ಈ ಹಿಂದೆ ಮಕ್ಕಳು ಅರೆಭಾಷೆ ಮಾತನಾಡಲು ಕಷ್ಟ ಪಡುತ್ತಿದ್ದರು ಆದರೆ ಈಗ ಎಲ್ಲವು ಬದಲಾಗಿದೆ. ಮಕ್ಕಳಿಗೆ ತಮ್ಮ ಭಾಷೆಯ ಮೇಲೆ ಗೌರವ ಬಂದಿದೆ. ಹಾಗೂ ಅರೆ ಭಾಷೆಯಲ್ಲಿ ಹೆಚ್ಚಿನ ಪದ್ಯಗಳು ರಚನೆಯಾಗಬೇಕು ಎಂದರು.

ಇದರೊಂದಿಗೆ ಈ ದಿನ ಡಿ.15 ರಂದು ಅಕಾಡೆಮಿ ವತಿಯಿಂದ ಒಟ್ಟು 5ಕಡೆಗಳಲ್ಲಿ ಏಕಕಾಲದಲ್ಲಿ ಅರೆಭಾಷೆ ದಿನಾಚರಣೆ ನಡೆಯುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ಕೆ.ಸಿ.ಸದಾನಂದ ಕುರುಂಜಿ, ಮೋಹನ್ ರಾಮ್ ಸುಳ್ಳಿ ಮುಖ್ಯ ಅತಿಥಿಗಳಾಗಿದ್ದರು.

ಅರೆಭಾಷೆ ಬೆಳವಣಿಗೆಗೆ ಸಹಕರಿಸಿದ ಉದ್ಯಮಿ ಎಸ್.ಅಬ್ದುಲ್ಲ ಕಟ್ಟೆಕ್ಕಾರ್ಸ್, ಗಾಯಕ ಕೆ.ಆ‌ರ್.ಗೋಪಾಲಕೃಷ್ಣ, ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್‌, ದೈವ ನರ್ತಕ ಜಯರಾಮ ಅಜಿಲ, ಗ್ರಂಥ ಪಾಲಕಿ ಸಾವಿತ್ರಿ ಕಣೆಮರಡ್ಕ, ಯುವ ಸಾಹಿತಿ ಉದಯಭಾಸ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಲತಾ ಪ್ರಸಾದ್ ಕುದ್ಘಾಜೆ, ಕಾರ್ಯಕ್ರಮದ ಸಂಘಟಕರಾದ ದಿನೇಶ್ ಮಡಪ್ಪಾಡಿ, ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಗೌಡ ನಗರ ಸಮಿತಿ ಅಧ್ಯಕ್ಷ ರಾಕೇಶ್ ಕುಂಠಿಕಾನ, ನಗರ ಮಹಿಳಾ ಸಮಿತಿ ಅಧ್ಯಕ್ಷೆ ಹರ್ಷ ಕರುಣಾಕರ, ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ.ವೇದಿಕೆಯಲ್ಲಿದ್ದರು.

ಅಕಾಡೆಮಿ ಸದಸ್ಯೆ, ಸಂಚಾಲಕಿ ಲತಾ ಪ್ರಸಾದ್‌ ಕುದ್ದಾಜೆ ಸ್ವಾಗತಿಸಿ, ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ ಧನ್ಯವಾದಗೈದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಶಿಧರ ಎಂ.ಜೆ. ಹಾಗೂ ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಉಷಾ ಪೇರಾಲು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!