ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಆದಿತ್ಯವಾರದಂದು ಬೆಳಿಗ್ಗೆ ಪುಣ್ಯ ನದಿ ಕುಮಾರಧಾರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು. ಶ್ರೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಕೃತಾರ್ಥರಾದರು.
ಶ್ರೀ ದೇವರ ಅವಭೃತೋತ್ಸವ ಸವಾರಿ ಶ್ರೀ ದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.ನಂತರ ಕುಮಾರಧಾರ ನದಿಯಲ್ಲಿ ಶ್ರೀ ದೇವರ ನೌಕಾವಿಹಾರ ನಡೆಯಿತು. ತದನಂತರ ಕುಮಾರಧಾರೆಯ ಶ್ರೀ ದೇವರ ಜಳಕದಗುಂಡಿಯಲ್ಲಿ ದೇವರ ಅವಭೃತೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ನೇತೃತ್ವದಲ್ಲಿ ಪುರೋಹಿತರು ಮಂತ್ರಘೋಷ ನೆರವೇರಿಸಿದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆನೆ ಯಶಸ್ವಿಯು ಎಲ್ಲರಂತೆ ತಾನೂ ಕೂಡಾ ಸ್ನಾನ ಮಾಡಿ ನೀರಾಟವಾಡಿತು. ಶ್ರೀ ದೇವರ ಅವಭೃತದ ಸಮಯದಲ್ಲಿ ಶ್ರೀ ದೇವರೊಂದಿಗೆ ಸಹಸ್ರಾರು ಭಕ್ತರು ಪುಣ್ಯ ಸ್ನಾನ ನೆರವೇರಿಸಿದರು. ಈ ಮೂಲಕ ಶ್ರೀ ದೇವರ ಜಳಕದೊಂದಿಗೆ ಭಕ್ತಾದಿಗಳು ಕೂಡಾ ಭಕ್ತಿಪರವಶೆಯಿಂದ ಪುಣ್ಯ ತೀರ್ಥದಲ್ಲಿ ಮಿಂದೆದ್ದರು. ಕೆಲವು ಭಕ್ತರು ನೀರಿನಲ್ಲಿ ಪಿರಮಿಡ್ ರಚನೆ ಮಾಡುವ ಮೂಲಕ ನೀರಾಟವಾಡಿ ಸಂಭ್ರಮಿಸಿದರು. ಜಳಕದ ಬಳಿಕ ಕುಮಾರಧಾರ ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಕೆ, ಬ್ರಹ್ಮರಥ ದಾನಿ ಉದ್ಯಮಿ ಅಜಿತ್ ಶೆಟ್ಟಿ ಕಡಬ, ಗ್ಯಾರಂಟಿ ಅನುಷ್ಠಾನ ಯೋಜನೆಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್.ಎಂ.ಡಿ ಸೇರಿದಂತೆ ದೇವಳದ ಸಿಬ್ಬಂಧಿಗಳು, ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ಪುಣ್ಯ ತೀರ್ಥದಲ್ಲಿ ದೇವರ ಜಳಕದ ಸಮಯ ಸ್ನಾನ ಮಾಡಿ ಕೃತಾರ್ಥರಾದರು.
ಡಿ 12ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದ್ದು, ಆ ದಿನ ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಅಲ್ಲದೆ ಗೋಪುರ ನಡಾವಳಿ ನೆರವೇರಲಿದೆ.
- Thursday
- December 12th, 2024