ಸುಬ್ರಹ್ಮಣ್ಯ ಡಿ.6: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ರಥಬೀದಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸುಳ್ಯ ಇವುಗಳ ಆಶ್ರಯದಲ್ಲಿ ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನಡೆಯಿತು.
ದೇವಳದ ಆಡಳಿತಾಧಿಕಾರಿಗಳಾದ ಎ.ಸಿ ಜುಬಿನ್ ಮೊಹಪಾತ್ರ ಅವರು ಚಿಕಿತ್ಸಾ ಹಾಗೂ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ “ಜಾತ್ರೆಗೆ ಆಗಮಿಸುವ ಭಕ್ತರ ಆರೋಗ್ಯದ ಮೇಲಿನ ಕಾಳಜಿ ವಹಿಸುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಹಾಗೂ ಮಾಹಿತಿ ಕೇಂದ್ರವನ್ನು ತಾತ್ಕಾಲಿಕವಾಗಿ ತೆರಯಲಾಗಿದೆ. ಈ ಮೂಲಕ ಜಾತ್ರೆಗೆ ಬರುವ ಭಕ್ತರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಕ್ರಮ ವಹಿಸುವ ಕಾರ್ಯ ನಡೆಸಲಾಗಿದ್ದು, ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದರು.
ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ನಂದಕುಮಾರ್, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ತ್ರಿಮೂರ್ತಿ, ತಾ.ಪಂ. ನಿಕಟಪೂರ್ವ ಸದಸ್ಯರಾದ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸದಸ್ಯರಾದ ಪವನ್, ವಿಮಲ ರಂಗಯ್ಯ, ವಿಶ್ವನಾಥ ನಡುತೋಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಾ.ನಂದಕುಮಾರ್ ಸ್ವಾಗತಿಸಿ, ಪ್ರಮೀಳಾ ವಂದಿಸಿದರು.
- Thursday
- December 12th, 2024