ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಅರ್ಧ ಸಮಸ್ಯೆ ಪರಿಹಾರವಾದಂತೆ- ಮಂಜುನಾಥ ಭಂಡಾರಿ
ಸಮಸ್ಯೆಗಳನ್ನು ತಿಳಿಸಿದ್ದು ಪರಿಹಾರ ಮಾರ್ಗವನ್ನು ತಿಳಿಸಿ ಸದನದಲ್ಲಿ ಪ್ರಶ್ನಿಸಿ ಪರಿಹಾರಕ್ಕೆ ಒತ್ತು – ಭಂಡಾರಿ.
ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದರೆ ಗ್ರಾಮಗಳ ಅರ್ಧದಷ್ಟು ಸಮಸ್ಯೆ ಪರಿಹಾರ ಮಾಡಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚಾಯತ್ ರಾಜ್ ಸಮಾವೇಶದಲ್ಲಿ ಭಾಗವಹಿಸಿದ ಅವರು ಸದಸ್ಯರು ಮಂಡಿಸಿದ ವಿವಿಧ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಗ್ರಾ.ಪಂ.ಸದಸ್ಯರ ಗೌರವ ಧನ ಹೆಚ್ಚಿಸುವ ಬಗ್ಗೆ ಹಾಗೂ ಇತರ ವಿವಿಧ ಸಮಸ್ಯೆಗಳ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಇಂದು ಸಮಾವೇಶದಲ್ಲಿ ಸದಸ್ಯರು ಮಂಡಿಸಿದ ವಿವಿಧ ಸಮಸ್ಯೆಗಳು ಹಾಗೂ ಪರಿಹಾರ ಸೂತ್ರಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಮಾತನಾಡುತ್ತೇನೆ ಎಂದರು.
ಸಮಾವೇಶದಲ್ಲಿ ಗ್ರಾಮ ಪಂಚಾಯತ್‌ಗಳ ವಿವಿಧ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಮಂಡಿಸಲಾಯಿತು.
ಗ್ರಾ.ಪಂ. ಎಸುರಿಸುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನರೇಗಾದ ಸಮಸ್ಯೆಗಳು ಮತ್ತು ಗ್ರಾ.ಪಂ.ಗಳ ಸಿಬ್ಬಂದಿ ಕೊರತೆ ಬಗ್ಗೆ ಅರಂತೋಡು ಗ್ರಾ.ಪಂ.ಅಧ್ಯಕ್ಷ ಹಾಗೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆ ವಿಷಯ ಮಂಡಿಸಿದರು. ನರೇಗಾದಲ್ಲಿ ಅವೈಜ್ಞಾನಿಕವಾಗಿ ಗುರಿಯನ್ನು ನೀಡಲಾಗುತ್ತದೆ. ಮಾನವ ದಿನಗಳ ಸೃಜನೆಯ ತರಾತುರಿಯಲ್ಲಿ ಯೋಜನೆಯ ನಿಯಮ ಪಾಲಿಸುವುದು ಕಷ್ಟಕರವಾಗಿದೆ. 15ನೇ ಹಣಕಾಸಿನ ಯೋಜನೆಯ ಮತ್ತು ನರೇಗಾ ಯೋಜನೆಗಳ ಕಾಮಗಾರಿಗಳ ಶೆಡ್ಯೂಲ್ ಬೇರೆಯಾಗಿರುವುದರಿಂದ ಎರಡು ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿಗಳ ಕೊರತೆಯಿಂದ ಸಮಸ್ಯೆ ಸೃಷ್ಠಿಯಾಗಿದೆ. ಸಿಬ್ಬಂದಿಗಳ ಆಯ್ಕೆ ಅಧಿಕಾರವನ್ನು ತಾಲೂಕು ಪಂಚಾಯತ್‌ಗೆ ನೀಡಬೇಕು. ಸುಳ್ಯ ತಾಲೂಕಿನ 25 ಗ್ರಾ.ಪಂ.ಗಳಿಗೆ ಕೇವಲ ಒಬ್ಬರೇ ತಾಂತ್ರಿಕ ಇಂಜಿನಿಯರ್ ಇದ್ದು ನಿಗದಿತ ಕಾಲಕ್ಕೆ ಕಾಮಗಾರಿ ನಡೆಸಲು ಕಷ್ಟ ಆಗುತಿದೆ. ಆದುದರಿಂದ ಖಾಲಿ ಇರುವ ಸಿಬ್ಬಂದಿ ಹಾಗೂ ಇಂಜಿನಿಯರ್‌ಗಳ ಹುದ್ದೆ ಭರ್ತಿ ಮಾಡಬೇಕು ಎಂದು ಹೇಳಿದರು.
ಜಲಜೀವನ್ ಮಿಷನ್ ಯೋಜನೆ ಸಮಸ್ಯೆಯ ಬಗ್ಗೆ ಮಾತನಾಡಿದ ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಹಾಗೂ ಒಕ್ಕೂಟದ ಸಂಚಾಲಕ ಮಹೇಶ್ ಕುಮಾರ್ ಕರಿಕ್ಕಳ ಹಲವು ಗ್ರಾ.ಪಂ.ಗಳಲ್ಲಿ ಜೆಜೆಎಂ ಕಾಮಗಾರಿ ಕ್ರಮ ಬದ್ಧವಾಗಿ ನಡೆಯುತ್ತಿಲ್ಲ ಎಂದರು.ಗ್ರಾ.ಪಂ.ಅವಗಾಹನೆಗೆ ತಾರದೆ ಟೆಂಡರ್ ಮಾಡಿದ್ದು ಸಮಸ್ಯೆಯಾಗಿದೆ. ಜೆಜೆಎಂ ನಿರ್ವಹಣೆಗೆ ಏಜೆನ್ಸಿ ಫಿಕ್ಸ್ ಮಾಡಬೇಕು.ಗ್ರಾ.ಪಂ.ನ ಕುಡಿಯುವ ನೀರಿನ ವಿದ್ಯುತ್ ಬಿಲ್ ಉಚಿತ ಮಾಡಬೇಕು ಅಥವಾ ಕನಿಷ್ಠ ದರ ನಿಗದಿ ಮಾಡಬೇಕು, ಹೆಚ್ಚುವರಿ ಕೊಳವೆ ಬಾವಿ ಕೊರೆಯಲು ಅವಕಾಶ ನೀಡಬೇಕು ಎಂದರು.
ಸಂಜೀವಿನಿ ಒಕ್ಕೂಟದ ಸಮಸ್ಯೆಗಳ ಬಗ್ಗೆ ಉಬರಡ್ಕ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆ ಕುರಿತು ಪೆರುವಾಜೆ ಗ್ತಾ.ಪಂ.ಸದಸ್ಯ ಸಚಿನ್‌ರಾಜ್ ಶೆಟ್ಟಿ, ಗ್ರಾಮ ಪಂಚಾಯತ್ ಅನುದಾನದ ಕೊರತೆ ಬಗ್ಗೆ ಹರೀಶ್ ರೈ ಉಬರಡ್ಕ ವಿಷಯ ಮಂಡಿಸಿದರು.
ಬಳಿಕ ಸಂವಾದ ನಡೆಯಿತು. ಜಿ.ಕೆ.ಹಮೀದ್, ಎಸ್.ಕೆ.ಹನೀಫ, ವಿನುತಾ ಪಾತಿಕಲ್ಲು, ಇಬ್ರಾಹಿಂ ಖಾಸಿಂ, ಪಿಡಿಒ ಶ್ಯಾಮ್ ಪ್ರಸಾದ್ ಸಂವಾದದಲ್ಲಿ ಭಾಗವಹಿಸಿದ್ದರು.ಸಮಾವೇಶವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಸುಳ್ಯ ತಾಲೂಕು ಗ್ರಾಮಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ದ.ಕ.ರಾಜೀವ್‌ಗಾಂಧಿ ಪಂಚಾಯತ್ ಸಂಘನೆಯ ಅಧ್ಯಕ್ಷರಾದ ಶುಭಾಶ್ಚಂದ್ರ ಕೊಳ್ನಾಡು ಅತಿಥಿಗಳಾಗಿದ್ದರು.
ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಸ್ವಾಗತಿಸಿದರು, ಮಡಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಉಷಾ ಜಯರಾಮ ವಂದಿಸಿದರು. ರವೀಂದ್ರ ರೈ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಮತ್ತು ಅನುದಾನದ ಕೊರತೆಗಳಿಗಾಗಿ ಪಂಚಾಯಿತಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳು ಸದಸ್ಯರು ಭಾಗವಹಿಸಿದ್ದರು. ಗ್ರಾ.ಪಂಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಜನಪ್ರತಿನಿಧಿಗಳೊಂದಿಗೆ ಮಂಡಿಸಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವಿಸಿ ಬಗೆಹರಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.
ಗ್ರಾಮ ಪಂಚಾಯಿತಿಗಳಲ್ಲಿ, ಜಲಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಲೋಪದೋಷಗಳು, ಸಾಮಾಜಿಕ ಪರಿಶೋದನೆಯ ಬಗ್ಗೆ ಮತ್ತು ಪಂಚಾಯತ್‌ಗಳಲ್ಲಿ ಕೇರಳ ಮಾದರಿಯ ಯೋಜನೆ ರೂಪಿಸಲು ಕ್ರಮ, ಸಿಬ್ಬಂದಿ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ತಾಲೂಕಿನ ಅರ್ಧಕ್ಕಿಂತ ಹೆಚ್ಚಿನ ಗ್ರಾಮಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿರುವುದು ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿಗಳ ಕೊರತೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸಹಾಯಕ ಅಭಿಯಂತರರ ಕೊರತೆ, ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ, ಕುಡಿಯುವ ನೀರಿನ ವಿದ್ಯುತ್ ಬಿಲ್ಲುಗಳಿಗೆ ವಿನಾಯಿತಿ ಮತ್ತು ಗ್ರಾಮಪಂಚಾಯತ್ ಸದಸ್ಯರುಗಳು ಎದುರಿಸುತ್ತಿರುವ ಸಮಸ್ಯೆಗಳು ಸೇರಿ ಹಲವು ಸಮಸ್ಯೆಗಳನ್ನು ಮಂಡಿಸಲಾಯಿತು. ಈ ಸಭೆಯಲ್ಲಿ ಪ್ರತಿ ಗ್ರಾಮಗಳ ಪಂಚಾಯತ್ ಸದಸ್ಯರುಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.