ಸುಳ್ಯದ ನಗರ ವ್ಯಾಪ್ತಿಯ ಅಂಗಡಿಗಳಲ್ಲಿ ಪ್ರತಿನಿತ್ಯ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದು ಅದೇ ರೀತಿಯಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ತರಕಾರಿ ಅಂಗಡಿಗೆ ಕಳ್ಳ ನುಗಿದ್ದು, ಚಿಲ್ಲರೆ ಹಣವನ್ನು ಎಗರಿಸಿ, ತಾನು ತಂದಿದ್ದ ಮದ್ಯದ ಪ್ಯಾಕೆಟ್ ಅಲ್ಲಿಯೇ ಬಿಟ್ಟು ಹಿಂತಿರುಗಿದ ಘಟನೆ ವರದಿಯಾಗಿದೆ.
ಕಳೆದ ಒಂದು ವಾರದಲ್ಲಿ ಸುಳ್ಯ, ಪೈಚಾರು, ಅಡ್ಕಾರ್, ಬೆಳ್ಳಾರೆ ಮುಂತಾದ ಕಡೆಗಳಲ್ಲಿ ಅಂಗಡಿಗಳಿಗೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಪ್ರಕರಣಗಳು ನಡೆಯುತ್ತಿದೆ.
ಕಳ್ಳರು ಸಣ್ಣ ಪುಟ್ಟ ಅಂಗಡಿ, ಹೊಟೇಲ್ ಗಳನ್ನು ಟಾರ್ಗೆಟ್ ಮಾಡಿ ರಾತ್ರಿ ವೇಳೆ ಅಂಗಡಿಗಳಿಗೆ ನುಗ್ಗಿ ಇರುವ ಚಿಲ್ಲರೆ ಹಣವನ್ನು ಕೂಡ ಬಿಡದೆ ದೋಚಿಕೊಂಡು ಹೋಗುತ್ತಿರುವ ಘಟನೆಗಳು ನಡೆಯುತ್ತಿದೆ.
ನ 3೦ ರಂದು ಸುಳ್ಯದ ಪೈಚಾರ್ ನಲ್ಲಿ ಹೊಟೇಲ್ ಒಂದಕ್ಕೆ ನುಗ್ಗಿರುವ ಕಳ್ಳ ಸುಮಾರು 2೦ ಸಾವಿರ ರೂ ದೋಚಿ ಪರಾರಿಯಾಗಿದ್ದು, ಅದೇ ದಿನ ತಡ ರಾತ್ರಿ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಮಾತಾ ವೆಜಿಟೇಬಲ್ ಅಂಗಡಿಯಲ್ಲೂ ಕಳ್ಳತನದ ಘಟನೆ ನಡೆದಿದೆ.
ಆದರೆ ಈ ಅಂಗಡಿಗೆ ನುಗ್ಗಿದ ಕಳ್ಳನಿಗೆ ಹೆಚ್ಚು ನಗದು ಸಿಗಲಿಲ್ಲ. ಅಲ್ಲಿ ಕ್ಯಾಶ್ ಡಬ್ಬದಲ್ಲಿ ಇದ್ದ 120 ರೂಪಾಯಿ ಮಾತ್ರ ಸಿಕ್ಕಿದ್ದು ಅದನ್ನು ಕೊಂಡೊಯ್ದ ಕಳ್ಳ ತಾನು ಕದಿಯಲು ಬಂದ ವೇಳೆ ಕೈಯಲ್ಲಿದ್ದ ಮಧ್ಯದ ಪ್ಯಾಕೆಟ್ ಅಲ್ಲಿಯೇ ಬಿಟ್ಟು ತೆರಳಿದ್ದಾನೆ.
ಈ ಎಲ್ಲಾ ಕಳ್ಳತನದ ರೀತಿಯನ್ನು ಗಮನಿಸಿದರೆ ಇತ್ತೀಚಿಗೆ ನಡೆದ ಅಷ್ಟೂ ಕಳ್ಳತನಕ್ಕೆ ಒಂದೇ ಖದೀಮನೇ ಕಾರಣನಾಗಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಅಲ್ಲದೇ ಈ ರೀತಿಯಲ್ಲಿ ಕಳ್ಳತನ ನಡೆಸುವವರನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಒಕ್ಕೊರಲ ಧ್ವನಿಯಾಗಿ ಕೇಳಿಸುತ್ತಿದ್ದು ಪೋಲಿಸ್ ಇಲಾಖೆಯು ಆದಷ್ಟು ಬೇಗ ಕಳ್ಳತನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ನಾಡಿನಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.