ಗುತ್ತಿಗಾರು: ನ.21: ಅಂಗನವಾಡಿ ಬಾಲ ವಿಕಾಸ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ವತಿಯಿಂದ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನ. 20ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಸಾದ್ ಹೂವನ ವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ಉದ್ಘಾಟಿಸಿದರು. ವೇದಿಕೆಯಲ್ಲಿ ಸುಳ್ಯ ತಾ| ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಮಹಿಳಾ ಮಂಡಲ ಅಧ್ಯಕ್ಷೆ ಸರೋಜಿನಿ ಮುಳುಗಾಡು, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ದೀಪಿಕಾ, ವಳಲಂಬೆ ಶಾಲಾ ಮುಖ್ಯಗುರು ಕು. ತೃಪ್ತಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪುರ್ಲುಮಕ್ಕಿ, ಅಂಗನವಾಡಿ ಕೇಂದ್ರದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ ಕಾಜಿಮಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಚಂದ್ರಾವತಿ ಹೆಚ್, ಸಹಾಯಕಿ ವಿಮಲಾ ಸುಂದರನಾಯ್ಕ ಹಾಗೂ ನಾಟಿವೈದ್ಯೆ ವಿಜಯಲಕ್ಷ್ಮಿ ಕರುವಜೆಯವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಲಯನ್ಸ್ ಕ್ಲಬ್ ವತಿಯಿಂದ ಅಗ್ನಿಬಂಧಕವನ್ನು ಸರೋಜಿನಿ ಗಂಗಯ್ಯ, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ನಟಿ ಹೇಮಾ ಮೋಟ್ನೂರು, ವಾಟರ್ ಪಿಲ್ಟರ್ ಅನ್ನು ಜಯಂತ ಕಾಜಿಮಡ್ಕ ಕೊಡುಗೆಯಾಗಿ ಅಂಗನವಾಡಿಗೆ ನೀಡಿದರು.
ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ವಿತರಿಸಲಾಯಿತು. ಚೈತನ್ಯ ವಳಲಂಬೆ ಸ್ವಾಗತಿಸಿ, ಹಸೈನಾರ್ ವಳಲಂಬೆ ವಂದಿಸಿದರು. ಸರೋಜಿನಿ ಗಂಗಯ್ಯ, ಸರಸ್ವತಿ ಕಾಜಿಮಡ್ಕ, ನವ್ಯ ಕೋಲ್ಚಾರ್ ಸನ್ಮಾನ ಪತ್ರ ವಾಚಿಸಿದರು. ಯೋಗೀಶ್ ಹೊಸೊಳಿಕೆ ನಿರೂಪಿಸಿದರು. ಜೀವನ್ ದಂಬೆಕೋಡಿ, ಸಚಿನ್ ಮೊಟ್ಟೆಮನೆ, ಶುಭಕರ ಅಂಜೇರಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾಭಿಮಾನಿಗಳು ಪಾಲ್ಗೊಂಡಿದ್ದರು.