ಒಂದು ಗಂಟೆಗು ಅಧಿಕ ಸಮಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾಕಾರರ ಆಕ್ರೋಶ.
ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಗ್ರಾಮಗಳ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಕಡಬ ತಾಲೂಕಿನ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಶುಕ್ರವಾರ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ನಾಯಕರಿಂದ ಜಂಟಿ ಸರ್ವೆಗೆ ಆಗ್ರಹ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅರಣ್ಯ ಇಲಾಖೆಯವರು ತಮ್ಮಲ್ಲಿರುವ ಅರಣ್ಯ ಪ್ರದೇಶದಲ್ಲಿ ಗಿಡ ನೆಟ್ಟು ಕಾಡು ಬೆಳೆಸಲಿ. ಅದು ಬಿಟ್ಟು ಕೃಷಿಕರ ಜಮೀನನ್ನು ಪಡೆಯುವ ಕೆಲಸಕ್ಕೆ ಕೈ ಹಾಕುವುದು ಖಂಡನೀಯ. ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ಗಡಿ ಗುರುತು ಮಾಡುವ ಕೆಲಸ ಮಾಡಲಿ ಎಂದ ಅವರು ಮುಂದಿನ ಅಧಿವೇಶನದಲ್ಲಿ ಈ ಭಾಗದ ಶಾಸಕರು ಇದರ ವಿರುದ್ಧ ಧ್ವನಿ ಎತ್ತುತ್ತೇವೆ ಹಾಗೂ ಕಸ್ತೂರಿ ರಂಗನ್ ವಿರುದ್ಧ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಸಕಲೇಶಪುರ ಶಾಸಕ ಮಂಜುನಾಥ್ ಮಾತನಾಡಿ, ಅರಣ್ಯ, ಪರಿಸರದ ಉಳಿವು ಮಲೆನಾಡಿನ ಜನರಿಂದ ಆಗಿದೆ. ಅರಣ್ಯ ಇಲಾಖೆ ಕೃಷಿಕರಿಗೆ ನಿರಂತರ ಕಿರುಕುಳವನ್ನು ನೀಡುತ್ತಿದೆ. ಕಸ್ತೂರಿ ರಂಗನ್ ವರದಿಯನ್ನೂ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡವುದಿಲ್ಲ, ಇದೇ ಹಕ್ಕೋತ್ತಾಯವನ್ನು ಅರಣ್ಯ ಸಚಿವರಲ್ಲೂ ಸಲ್ಲಿಸಿದ್ದೇವೆ, ಮುಂದಿನ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ ನಮ್ಮ ಜೀವ ಇರುವ ತನಕ ಈ ವರದಿ ಜಾರಿಯಾಗಲು ಬಿಡುವುದಿಲ್ಲಾ ಎಂದು ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕಸ್ತೂರಿ ರಂಗನ್ ವರದಿ ಕೈಬಿಡಲು ಇಲ್ಲೂ ಕೇರಳ ಮಾದರಿಯ ವರದಿ ಸಿದ್ಧಪಡಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ವಕೀಲರು ಇಂತಹ ವರದಿಯನ್ನು ಶೀಘ್ರ ಸಿದ್ಧಪಡಿಸುವ ಕೆಲಸ ಮಾಡುವಂತೆ ಸಲಹೆ ನೀಡಿದ ಅವರು, ಅಧಿಕಾರಿಗಳು ಈ ಭಾಗದಲ್ಲಿ ಮ್ಯಾನ್ಯುವಲ್ ಸರ್ವೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಬೇಕು. ಕಸ್ತೂರಿ ರಂಗನ್ ವಿರುದ್ಧದ ನಿಮ್ಮೆಲ್ಲಾ ಹೋರಾಟಕ್ಕೂ ನಾವು ಕೈಜೋಡಿಸುತ್ತೇವೆ ಎಂದರು.
ಜ.೧೫ರೊಳಗೆ ಗಡಿ ಗುರುತು ಮಾಡಿ – ಕಿಶೋರ್ ಕುಮಾರ್ ಶಿರಾಡಿ.
ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದು ನಾವು ಸರಕಾರಕ್ಕೆ ಕಸ್ತೂರಿ ರಂಗನ್ ವರದಿ ಕೈ ಬಿಡಲು ಮನವಿ ಸಲ್ಲಿಸುತ್ತಿದ್ದೇವೆ. ಜತೆಗೆ ಜ.೧೫ರ ಮೊದಲು ಈ ಭಾಗದಲ್ಲಿ ಜಂಟಿ ಸರ್ವೆ ನಡೆಸಿ ಗಡಿ ಗುರುತು ಮಾಡುವ ಕೆಲಸವನ್ನು ಮಾಡಬೇಕು ಇಲ್ಲವೇ ಗುಂಡ್ಯದಲ್ಲಿ ರಸ್ತೆ ತಡೆ ನಡೆಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ನಾವು ಪ್ರಜಾಪ್ರಭುತ್ವದ ಅಡಿಯಲ್ಲಿ ಹೋರಾಟ ಮಾಡುತ್ತೇವೆ. ಉನ್ನತ ಅಧಿಕಾರಿಗಳ ತಪ್ಪಿನಿಂದ ಇಂದು ಕೃಷಿಕರು, ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಚರ್ಚ್ ಧರ್ಮಗುರುಗಳಾದ ಆದರ್ಶ ಗುತ್ತಿಗಾರು, ಶಿಬಿ ಮುಂಡಾಜೆ, ಜೋಸೆಫ್ ಶಿರಾಡಿ, ನಾಯಕರುಗಳಾದ ವೆಂಕಪ್ಪ ಗೌಡ ಸುಳ್ಯ, ಎ.ವಿ.ತೀರ್ಥರಾಮ, ಸಯ್ಯದ್ ಮೀರಾ ಸಾಹೇಬ್, ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ ಗೌಡ, ಮಹ್ಮದ್ ಆಲಿ, ಸುಧೀರ್ ಕುಮಾರ್, ವೆಂಕಟ್ ವಳಲಂಬೆ, ಸಂಜೀವ ಮಠಂದೂರು, ಪಿ ಪಿ ವರ್ಗೀಸ್, ಸೋಯಿ ವರ್ಗೀಸ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನಂಜಯ ಕೋಡಂಗೆ ಸ್ವಾಗತಿಸಿದರು. ಹರಿಣಿ ಪುತ್ತೂರಾಯ, ವಿನಯಕುಮಾರಿ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.
೧ ಗಂಟೆಗೂ ಅಽಕ ಸಮಯ ರಾಷ್ಟ್ರೀಯ ಹೆದ್ದಾರಿ ತಡೆ
ಸಭಾ ಕಾರ್ಯಕ್ರಮ ಮುಗಿದು ಮನವಿ ಸ್ವೀಕರಿಸಲು ತಹಶೀಲ್ದಾರ್ ಮೇಲಿನ ಅಧಿಕಾರಿಗಳು ಬಾರದೇ ಇರುವ ಬಗ್ಗೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಮೇಲಾಧಿಕಾರಿಗಳು ಬರಬೇಕು ಇಲ್ಲವೇ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಇತರೆ ನಾಯಕರು, ಪ್ರತಿಭಟನಾಕಾರರು ನೇರವಾಗಿ ಸುಬ್ರಹ್ಮಣ್ಯ ಹೆದ್ದಾರಿಗೆ ಬಂದು ಅಲ್ಲಿಂದ ಘೋಷಣೆ ಕೂಗುತ್ತ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಜಂಕ್ಷನ್‌ಗೆ ಬಂದು ಹೆದ್ದಾರಿಯಲ್ಲಿ ಕುಳಿತು ಹೆದ್ದಾರಿ ತಡೆ ನಡೆಸಿದರು. ಪೊಲೀಸರು ಹೆದ್ದಾರಿ ತಡೆ ನಡೆಸದಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಲೆಕ್ಕಿಸದೇ ಹೆದ್ದಾರಿಯಲ್ಲೇ ಕುಳಿತು ಕಸ್ತೂರಿ ರಂಗನ್ ವರದಿ ಕೈ ಬಿಡುವಂತೆ ಹಾಗೂ ವರದಿ ವಿರುದ್ಧ ಘೋಷಣೆ ಕೂಗಿದರು. ಸುಮಾರು ೧ ಗಂಟೆಗೂ ಅಧಿಕ ಸಮಯ ಬೆಂಗಳೂರ-ಮಂಗಳೂರು ಹಾಗೂ ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಇಂದೇ ಮನವಿಯನ್ನು ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿ, ಬೇಡಿಕೆಗಳನ್ನು ಸರಕಾರಕ್ಕೆ ತಿಳಿಸುವುದಾಗಿ ತಿಳಿಸಿದರು. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಜತೆಗಿದ್ದರು. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹಾಗೂ ಪೊಲೀಸ್ ಅಧಿಕಾರಿಗಳು, ಪೊಲೀಸರು ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿತ್ತು. ಸುಮಾರು ೫ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.