

ಬದುಕೊಂದು ಅಂತೆ-ಕಂತೆಗಳ ಸಂತೆ, ಇಲ್ಲಿ ನಿನ್ನೆ-ನಾಳೆಗಳ ಬಗ್ಗೆಯೇ ಎಲ್ಲರಿಗೂ ಚಿಂತೆ, ಈ ದಿನ-ಈ ಕ್ಷಣದಲ್ಲಿ ಯಾರೂ ಬದುಕುತ್ತಿಲ್ಲವಂತೆ…
ಇಲ್ಲಿ ಎಲ್ಲರೂ ನಿನ್ನೆಯ ತಪ್ಪುಗಳ ನೆನೆದು ದುಃಖಿಸುವರಂತೆ, ನಾಳೆ ಏನಾಗಬಹುದೋ ಎಂಬ ಭಯದಲ್ಲೇ ಬದುಕುವರಂತೆ…
ಇಲ್ಲಿ ಜನರು ಅವರಿವರ ಬಗ್ಗೆಯೇ ಹೆಚ್ಚು ಯೋಚಿಸುವರಂತೆ, ಇತರರ ಬದುಕಿನಲ್ಲಿ ಮೂಗು ತೂರಿಸದಿದ್ದರೆ ತಮ್ಮ ಬದುಕು ನಡೆಯುವುದೇ ಇಲ್ಲ ಎಂಬಂತೆ…
ಇಲ್ಲಿ ಜನರು ಇತರರ ಏಳಿಗೆಯನ್ನು ನೋಡಿ ಸಹಿಸದವರಂತೆ, ಇತರರ ಬದುಕಿನ ಬಗ್ಗೆ ಯೋಚಿಸುತ್ತಾ ಮರೆತುಬಿಡುವರು ತಮ್ಮ ಬದುಕಿನ ಚಿಂತೆ…
ಇಲ್ಲಿ ಜನರು ಇನ್ನೊಬ್ಬರ ಬಗ್ಗೆಯೇ ಮಾತನಾಡುತ್ತಾ ಸಮಯ ವ್ಯರ್ಥ ಮಾಡುವರಂತೆ, ಇನ್ನೊಬ್ಬರ ಬದುಕಿನ ಮೇಲೆ ಇರುವ ಆಸಕ್ತಿ ಇವರಿಗೆ ತಮ್ಮ ಬದುಕಿನ ಮೇಲೆ ಇಲ್ಲವಂತೆ…
ಇಲ್ಲಿ ಗುಸು-ಗುಸು, ಪಿಸು-ಪಿಸು ಮಾತುಗಳೇ ಹೆಚ್ಚು ಓಡಾಡುವುದಂತೆ, ಅದು ಸತ್ಯವೋ-ಸುಳ್ಳೋ ಎಂದು ಜನರು ಯೋಚಿಸುವುದೇ ಇಲ್ಲವಂತೆ…
ಒಟ್ಟಿನಲ್ಲಿ ಈ ಬದುಕು ಅಂತೆ-ಕಂತೆಗಳ ಸಂತೆಯಂತೆ, ಇಲ್ಲಿ ಯಾರ ಬಗ್ಗೆಯೂ ಚಿಂತಿಸದೇ ತಮ್ಮ ಬದುಕಿನ ಬಗ್ಗೆ ಮಾತ್ರ ಯೋಚಿಸುತ್ತಾ ಈ ದಿನ-ಈ ಕ್ಷಣವನ್ನು ಖುಷಿಯಿಂದ ಬದುಕುವವರೇ ನಿಜವಾದ ಸಾಹುಕಾರರಂತೆ…✍️ಉಲ್ಲಾಸ್ ಕಜ್ಜೋಡಿ