ಪ್ರತೀ ವರ್ಷ ನವೆಂಬರ್ 12ರಂದು ವಿಶ್ವ ನ್ಯೂಮೋನಿಯ ದಿನ ಎಂದು ಆಚರಿಸಿ ನ್ಯೂಮೋನಿಯ ರೋಗದ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ನವೆಂಬರ್ 12 , 2009 ರಿಂದ ಈ ಆಚರಣೆ ತರಲಾಯಿತು. ಇದೊಂದು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು, ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ವಿಶ್ವದಾದ್ಯಂತ ಪ್ರತೀ ವರ್ಷ 155 ಮಿಲಿಯನ್ 5 ವರ್ಷದ ಕೆಳಗಿನ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು 1.6 ಮಿಲಿಯನ್ ಮಂದಿ ಸಾವಿಗೀಡಾಗುತ್ತಾರೆ. ಏಡ್ಸ್, ಮಲೇರಿಯ ಮತ್ತು ಮೀಸಿಯಲ್ಸ್ ಒಟ್ಟು ಸೇರಿ ತೆಗೆದುಕೊಳ್ಳುವ ಬಲಿಗಿಂತಲೂ ಜಾಸ್ತಿ ಬಲಿ ಬರೀ ನ್ಯೂಮೋನಿಯ ರೋಗದಿಂದ ಉಂಟಾಗುತ್ತದೆ ಎಂಬುವುದು ಬಹಳ ಆತಂಕಕಾರಿ ವಿಚಾರ. ಈ ರೋಗವನ್ನು ಪರಿಣಾಮಕಾರಿ ತಡೆಗಟ್ಟಬಹುದಾದ ಲಸಿಕೆಗಳು ಇದ್ದರೂ ಈ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿರುವುದು ಸೋಜಿಗದ ವಿಚಾರವಾಗಿದೆ. ಈ ರೋಗದ ಚಿಕಿತ್ಸೆಗೆ ಹೆಚ್ಚು ವೆಚ್ಚವೂ ತಗಲುವುದಿಲ್ಲ. ಅತೀ ಹೆಚ್ಚು ನ್ಯೂಮೋನಿಯಾಗೆ ಕಾರಣವಾಗುವ ಎರಡು ಸಾಮಾನ್ಯ ಬ್ಯಾಕ್ಟೀರಿಯಗಳಾದ ಹೆಚ್ ಇನ್ಪ್ಲುಯಂಜಾ ಮತ್ತು ಸ್ಕ್ರೆಪ್ಟೋಕೋಕಸ್ ನ್ಯೂಮೋನಿಯಾಗಳಿಗೆ ಪರಿಣಾಮಕಾರಿಯಾಗುವ ಲಸಿಕೆಗಳು ಈಗ ಲಭ್ಯವಿದೆ. ಆದರೆ ಬಡತನ, ಅನಕ್ಷರತೆ, ಅಜ್ಞಾನ ಮತ್ತು ಮೂಲ ಸೌಕರ್ಯದ ಕೊರತೆಯಿಂದಾಗಿ ಎಲ್ಲರಿಗೂ ಈ ಲಸಿಕೆ ಸಿಗದಿರುವುದೇ ಬಹಳ ಖೇದನಿಯ ವಿಚಾರವಾಗಿದೆ. ನ್ಯೂಮೋನಿಯಾ (ಪುಪ್ಪುಸ ಜ್ವರ)ನ್ಯೂಮೋನಿಯಾ ಜ್ವರ ಶ್ವಾಸಕೋಶಕ್ಕೆ ಸಂಬಂದಿಸಿದ ಸಾಂಕ್ರಾಮಿಕ ಖಾಯಿಲೆಯಾಗಿರುತ್ತದೆ. ಕನ್ನಡದಲ್ಲಿ ಈ ರೋಗವನ್ನು ಪುಪ್ಪುಸ ಜ್ವರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಖಾಯಿಲೆಯು ಎಲ್ಲಾ ವರ್ಗದ ಜನರಲ್ಲಿಯೂ ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತದೆ. ಅದರಲ್ಲೂ ಮುಖ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಮತ್ತು ವಯೋವೃದ್ಧರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಶ್ವಾಸಕೋಶಗಳಲ್ಲಿ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೋಂಕು ತಗಲಿದಾಗ ಉಂಟಾಗುವ ಉರಿಯೂತವನ್ನು ನ್ಯೂಮೋನಿಯಾ ಎಂದು ಕರೆಯುತ್ತಾರೆ. ಶಾಸ್ವಕೋಶದಲ್ಲಿ ಉರಿಯೂತವಾದಾಗ ಉರಿಯೂತಕ್ಕೊಳಗಾದ ಭಾಗ ಘಣೀಕೃತಗೊಳ್ಳುತ್ತದೆ. (ಗಟ್ಟಿಯಾಗುತ್ತದೆ) ಸ್ಪಂಜಿನಂತೆ ಮೃದುವಾಗಿದ್ದ ಶ್ವಾಸಕೋಶದ ಭಾಗ ಸೇಬಿನಂತೆ ಗಟ್ಟಿಯಾಗುತ್ತದೆ. ಈ ಘನೀಕರಣಗೊಂಡ ಶ್ವಾಸಕೋಶದ ಭಾಗವನ್ನು “ಕನ್ಸಾಲಿಡೇಶನ್” ಎನ್ನುತ್ತಾರೆ. ಎದೆಗೂಡಿನ ಕ್ಷಕಿರಣವನ್ನು ತೆಗೆದು ಈ ರೀತಿಯ ಘನೀಕರಣವನ್ನು ಪತ್ತೆಹಚ್ಚಲಾಗುತ್ತದೆ. ನ್ಯೂಮೋನಿಯ ರೋಗಕ್ಕೆ ಕಾರಣಗಳೇನು? ನ್ಯೂಮೋನಿಯಾ ರೋಗಕ್ಕೆ ಬ್ಯಾಕ್ಟೀರಿಯಾ, ವೈರಾಣುಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿ ಜೀವಿಗಳು ಕಾರಣವಾಗುತ್ತದೆ.
1. ಬ್ಯಾಕ್ಟೀರಿಯಾ : ಸ್ಟೆಪ್ಟೋಕಾಕಸ್ ನ್ಯೂಮೋನಿಯಾ ಎಂಬ ಬ್ಯಾಕ್ಟಿರಿಯಾ ಈ ಖಾಯಿಲೆಯನ್ನು ಉಂಟುಮಾಡುತ್ತದೆ. ಉಸಿರಾಟದ ಮುಖಾಂತರ ಶ್ವಾಸನಾಳದ ಒಳಗೆ ಸೇರಿಕೊಂಡ ಈ ರೋಗಾಣುಗಳು ರಕ್ತನಾಳಗಳ ಮೂಲಕ ಶ್ವಾಸಕೋಶವನ್ನು ಸೇರಿ ಖಾಯಿಲೆಗೆ ಕಾರಣವಾಗುತ್ತದೆ. ಅದೇ ರೀತಿ ನ್ಯೂಮೋಕಾಕಸ್ ಎಂಬ ರೋಗಾಣು ಕೂಡಾ ನ್ಯೂಮೋನಿಯಾ ರೋಗಕ್ಕೆ ಕಾರಣವಾಗುತ್ತದೆ.
2. ವೈರಾಣುಗಳು : ವೈರಾಣುಗಳು ಸಾಮಾನ್ಯವಾಗಿ ಬಾಯಿ ಮತ್ತು ಮೂಗಿನ ಮುಖಾಂತರ ಉಸಿರಾಟದ ಮೂಲಕ ದೇಹದೊಳಗೆ ಸೇರಿಕೊಳ್ಳುತ್ತದೆ. ಕ್ರಮೇಣ ಈ ವೈರಾಣುಗಳು ಶ್ವಾಸಕೋಶದಲ್ಲಿರುವ ಜೀವ ಕೋಶಗಳನ್ನು ನಿಷ್ಕ್ರೀಯಗೊಳಿಸಿ ತನ್ನ ಸಾಮ್ರಾಜ್ಯವನ್ನು ಶ್ವಾಸಕೋಶದೊಳಗೆ ಸ್ಥಾಪಿಸುತ್ತದೆ. ಅಡಿನೋವೈರಸ್, ರೈನೋವೈರಸ್ ಇನ್ಪ್ಲೂಯೆಂಜಾ ವೈರಸ್ ಇತ್ಯಾದಿ ವೈರಾಣುಗಳು ನ್ಯೂಮೋನಿಯಾ ರೋಗವನ್ನು ತರಬಲ್ಲದು.
3. ಶಿಲೀಂಧ್ರಗಳು : ಫಂಗಸ್ ರೋಗಾಣುಗಳು ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳನ್ನು ಕಾಡುವುದು ಕಡಿಮೆ. ಮಧುಮೇಹ, ಏಡ್ಸ್, ಮುಂತಾದ ರೋಗ ನಿರೋಧಕ ಶಕ್ತಿ ಕಳೆದುಕೊಂಡ ರೋಗಿಗಳು ಸಾಮಾನ್ಯವಾಗಿ ಶಿಲೀಂಧ್ರಗಳ ಸೋಂಕಿಗೆ ಕುತ್ತಾಗುತ್ತಾರೆ.
4. ಪರಾವಲಂಬಿ ಜೀವಿಗಳು : ಕೆಲವೊಂದು ಪರಾವಲಂಬಿ ಜೀವಿಗಳು ಕೂಡಾ ರೋಗ ನಿರೋಧಕ ಶಕ್ತಿ ಕಳೆದು ಕೊಂಡ ವ್ಯಕ್ತಿಗಳಲ್ಲಿ ನ್ಯೂಮೋನಿಯಾ ರೋಗವನ್ನು ತರಬಲ್ಲದು. ಉದಾ : ಟ್ಯಾಕ್ಸೋ ಪ್ಲಾಸ್ಮೋಸಿಸ್ನ್ಯೂಮೋನಿಯಾದ ವಿಧಗಳು
1. ತೀವ್ರ ನ್ಯೂಮೋನಿಯಾ
2. ಧೀರ್ಘಕಾಲಿಕ ನ್ಯೂಮೋನಿಯಾ
3. ಆಸ್ಪತ್ರೆಗಳಿಂದ ಹರಡುವ ನ್ಯೂಮೋನಿಯಾ
4. ರಾಸಾಯನಿಕ ವಸ್ತುಗಳಿಂದ ಹರಡುವ ನ್ಯೂಮೋನಿಯಾ
5. ವೈರಾಣು ನ್ಯೂಮೋನಿಯಾ
ತೀವ್ರ ನ್ಯೂಮೋನಿಯಾ ಸಾಮಾನ್ಯವಾಗಿ ಉಗ್ರ ರೂಪದ ರೋಗದ ಲಕ್ಷಣಗಳನ್ನು ಹೊಂದಿರುತ್ತದೆ. ರೋಗಾಣುಗಳು ದೇಹವನ್ನು ಆಕ್ರಮಿಸಿಕೊಂಡ ಬಳಿಕ ತೀವ್ರ ತರವಾದ ರೋಗವನ್ನು ಉಂಟು ಮಾಡುತ್ತದೆ. ದೀರ್ಘ ಕಾಲದ ನ್ಯೂಮೋನಿಯಾದಲ್ಲಿ ರೋಗಾಣು ದೇಹದಲ್ಲಿ ಸೇರಿ ಬಹುಕಾಲದವರೆಗೆ ಇರುತ್ತದೆ. ರೋಗಾಣುಗಳು ದೇಹದೊಳಗಿದ್ದರೂ ತೀವ್ರ ತರವಾದ ಪರಿಣಾಮಗಳು ಇರುವುದಿಲ್ಲ. ರೋಗದ ಲಕ್ಷಣಗಳು ಸಾಮಾನ್ಯವಾಗಿ ಕಡಿಮೆ ಸ್ಪರೂಪವಾಗಿರುತ್ತದೆ. ಆಸ್ಪತ್ರೆಯಿಂದ ಹರಡುವ ನ್ಯೂಮೋನಿಯಾ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾದ ವ್ಯಕ್ತಿಗಳು ಆಸ್ಪತ್ರೆಗೆ ತೆರಳಿದಾಗ ಇತರ ರೋಗಿಗಳಿಂದ ಬರುವಂತಹಾ ನ್ಯೂಮೋನಿಯಾ ಆಗಿರುತ್ತದೆ. ರಾಸಾಯನಿಕ ವಸ್ತುಗಳ ಸೇವನೆಯಿಂದ ಉಂಟಾಗುವ ನ್ಯೂಮೋನಿಯಾ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ಉಸಿರಾಟದ ಮೂಲಕ ಸೇವಿಸುವುದರಿಂದ ಬರಬಹುದು. ಸಾಮಾನ್ಯವಾಗಿ ಗಿಡಗಳಿಗೆ ರೋಗ ಬರದಂತೆ ಸಿಂಪಡಿಸಿದ ರಾಸಾಯನಿಕಗಳು ಈ ರೀತಿಯ ನ್ಯೂಮೋನಿಯಾ ರೋಗಕ್ಕೆ ಕಾರಣವಾಗುತ್ತದೆ. ವೈರಾಣು ನ್ಯೂಮೋನಿಯಾ ಸಾಮಾನ್ಯವಾಗಿ ಕರೋನಾ ವೈರಾಸ್ನಿಂದ ಬರುತ್ತದೆ. ಸಾಮಾನ್ಯವಾಗಿ ಈ ಖಾಯಿಲೆ ಬಹಳ ಶೀಘ್ರವಾಗಿ ಹರಡುತ್ತದೆ. ಬಹಳ ಸಾಂಕ್ರಾಮಿಕ ರೋಗವಾಗಿರುವ ಈ ರೋಗವನ್ನು ಸಾರ್ಸ್ ಎಂದೂ ಕರೆಯಲಾಗುತ್ತದೆ. ಈ ರೀತಿಯ ನ್ಯೂಮೋನಿಯಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ವಿಶೇಷ ಮುತುವರ್ಜಿ ವಹಿಸಬೇಕಾಗುತ್ತದೆ. ರೋಗ ಹೇಗೆ ಹರಡುತ್ತದೆ ?ಸಾಮಾನ್ಯವಾಗಿ ರೋಗಗ್ರಸ್ಥ ವ್ಯಕ್ತಿಯ ಜೀವರಸಗಳಿಂದ ರೋಗ ಹರಡುತ್ತದೆ. ಸಾಂಕ್ರಾಮಿಕ ರೋಗವಾದ ನ್ಯೂಮೋನಿಯಾ, ಕೆಮ್ಮಿದಾಗ, ಸೀನಿದಾಗ ಮತ್ತು ಮೂಗಿನ ಸಿಂಬಳದಿAದ ಇತರರಿಗೆ ಹರಡಬಹುದು. ಜೊಲ್ಲುರಸದ ಮುಖಾಂತರವೂ ಜೀವಕಣಗಳು ಹರಡಬಹುದು. ರೋಗಿ ಬಳಸಿದ ತಟ್ಟೆ., ಬಟ್ಟಲು, ಲೋಟ ಚಮಚ, ಕರವಸ್ತ್ರ, ಟವೆಲ್, ಉಡುಪುಗಳಿಂದಲೂ ರೋಗ ಹರಡುವ ಸಾಧ್ಯತೆ ಇರುತ್ತದೆ. ರೋಗದ ಲಕ್ಷಣಗಳು ವಿಪರೀತ ಜ್ವರ, ಚಳಿಯಾಗುವುದು, ಉಸಿರುಗಟ್ಟುವುದು, ಕೆಮ್ಮು ಕಫ, ಕಫದಲ್ಲಿ ರಕ್ತ, ಮೈ ಕೈ ನೋವು ಸುಸ್ತು ವಾಕರಿಕೆ, ವಾಂತಿ, ಸಂಧಿವಾತ, ಸ್ನಾಯು ಎಳೆತ ಇವೆಲ್ಲವೂ ನ್ಯೂಮೋನಿಯಾ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.
ಪತ್ತೆ ಹಚ್ಚುವುದು ಹೇಗೆ ?
ಸಾಮಾನ್ಯವಾಗಿ ನುರಿತ ವೈದ್ಯರು ರೋಗದ ಲಕ್ಷಣಗಳನ್ನು ಅಭ್ಯಸಿಸಿ ರೋಗವನ್ನು ನಿರ್ಧರಿಸುತ್ತಾರೆ. ಎದೆಗೂಡಿನ ಚಲನೆ, ಎದೆಗೂಡಿನಲ್ಲಿ ಗಾಳಿಯ ಸಂಚಲನೆಗಳನ್ನು ಸ್ಟೆತೋಸ್ಕೋಪ್ ಮುಖಾಂತರ ಪರೀಕ್ಷಿಸುತ್ತಾರೆ. ಸಾಮಾನ್ಯವಾಗಿ ನ್ಯೂಮೋನಿಯಾ ಆದ ಎದೆಯ ಭಾಗದಲ್ಲಿ ಉಸಿರಾಟದ ಕ್ಷಣಿಸುವಿಕೆ ಕಂಡು ಬರುತ್ತದೆ. ಶ್ವಾಸಕೋಶದ ಒಳಗೆ ನೀರು ತುಂಬಿದಾಗ, ಕೀವು ತುಂಬಿದಾಗ ಅತಿಯಾದ ಉಸಿರಾಟದ ತೊಂದರೆ ಉಂಟಾಗಬಹುದು. ದೇಹದ ಪರೀಕ್ಷೆಯ ಜೊತೆಗೆ ಎದೆಗೂಡಿನ ಕ್ಷ ಕಿರಣ, ರಕ್ತ ಪರೀಕ್ಷೆ, ಕಫ ಪರೀಕ್ಷೆ ಮುಂತಾದ ಪರೀಕ್ಷೆಗಳ ಮುಖಾಂತರ ಯಾವ ಕಾರಣಕ್ಕಾಗಿ ನ್ಯೂಮೋನಿಯಾ ಉಂಟಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾ ನ್ಯೂಮೋನಿಯಾವನ್ನು ಅಂಟಿ ಬಯೋಟಿಕ್ಗಳ ನೆರವಿನಿಂದ ಗುಣಪಡಿಸಲಾಗುತ್ತದೆ. ಆದರೆ ವೈರಾಣುಗಳಿಂದಾಗುವ ನ್ಯೂಮೋನಿಯಾವನ್ನು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಅತೀ ಅವಶ್ಯಕ. ತಡೆಗಟ್ಟುವುದು ಹೇಗೆ?
1. ರೋಗಿಗಳು ಬಳಸಿದ ಕರವಸ್ತ್ರ ಟವೆಲುಗಳನ್ನು ಬಳಸಬಾರದು.
2. ಕೆಮ್ಮ, ಜೊಲ್ಲುರಸ, ಸಿಂಬಳ, ಸೀನು ಇತ್ಯಾದಿಗಳಿಂದ ಜೀವಕಣಗಳು ಹರಡುವ ಸಾಧ್ಯ್ಯತೆ ಹೆಚ್ಚಾಗಿರುತ್ತದೆ ಇವುಗಳಿಂದ ದೂರವಿರಬೇಕು
3. ರೋಗಿಗಳು ಬಳಸಿದ ಬಟ್ಟೆ, ತಟ್ಟೆ, ಲೋಟ, ಬಟ್ಟಲು, ಚಮಚ ಇತ್ಯಾದಿಗಳನ್ನು ಬಳಸಬಾರದು.
ರೋಗಿಗಳು ಬಳಸಿದ ಈ ಪರಿಕರಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯತಕ್ಕದ್ದು.ಸಾಮಾನ್ಯವಾಗಿ ವೈರಸ್ ನ್ಯೂಮೋನಿಯ ಅತಿಯಾದ ಸಾಂಕ್ರಾಮಿಕ ರೋಗವಾಗಿದ್ದು ರೋಗಿಯನ್ನು ಬೇರೆಯಾದ ಕೋಣೆಯಲ್ಲಿರಿಸಿ ಇತರರಿಗೆ ರೋಗ ಹರಡದಂತೆ ಮುಂಜಾಗರೂಕತೆ ವಹಿಸಲಾಗುತ್ತದೆ.ಮುಕ್ತಾಯಕ್ಕೆ ಮುನ್ನನ್ಯೂಮೋನೀಯ ಬಹಳ ಸಾಮಾನ್ಯವಾದ ಖಾಯಿಲೆ ಎಂದು ಮೂಗು ಮುರಿಯುವುದು ತಪ್ಪಾಗುತ್ತದೆ. ರೋಗಿಯ ದೇಹ ಪ್ರಕೃತಿ ರೋಗ ನಿರೋಧಕ ಶಕ್ತಿ ಯಾವ ರೋಗಾಣು ಕಾರಣದಿಂದಾಗಿ ನ್ಯೂಮೊನೀಯ ಉಂಟಾಗಿದೆ ಎಂಬುದನ್ನು ತಿಳಿದು ಕೊಂಡು ಸೂಕ್ತ ಚಿಕ್ಸಿತೆ ನೀಡಬೇಕಾಗುತ್ತದೆ. ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿದಲ್ಲಿ ರೋಗವನ್ನು ಅಲಕ್ಷಿದಲ್ಲಿ ಅಪಾಯ ಕಟ್ಟಿಟ ಬುತ್ತಿ. ಎಲ್ಲಾ ರೀತಿಯ ನ್ಯೂಮೋನಿಯ ಮಾರಣಾಂತಿಕವಲ್ಲದಿದ್ದರೂ ಕೆಲವೊಮ್ಮೆ ಮಾರಣಾಂತಿಕವಾಗುವ ಸಾಧ್ಯತೆ ಇಲ್ಲವೆಂದಿಲ್ಲ. ಚಿಕಿತ್ಸೆ ಸರಿಯಾಗಿ, ಸರಿಯಾದ ಸಮಯದಲ್ಲಿ ನೀಡದಿದ್ದಲ್ಲಿ ಶ್ವಾಸಕೋಶದೊಳಗೆ ಕೀವು ತುಂಬಿಕೊಂಡು ಘನೀಕರಣಗೊಂಡು ಶ್ವಾಸಕೋಶದ ಆ ಭಾಗ ಜಡಗೊಂಡು ನಿಷ್ಕ್ರಿಯವಾಗಬಹುದು ಮತ್ತು ಶ್ವಾಸಕೋಶದ ಆ ಭಾಗ ಶಾಶ್ವತವಾಗಿ ಶಿಥಿಲವಾಗಬಹುದು ಮತ್ತು ಇದರಿಂದಾಗಿ ಉಸಿರಾಟದ ತೊಂದರೆ ಮತ್ತಷ್ಟು ಉಲ್ಬಣವಾಗಬಹುದು. ಆರಂಭಿಕ ಹಂತದಲ್ಲಿಯೇ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ನ್ಯೂಮೋನಿಯ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಡಾ|| ಮುರಲೀ ಮೋಹನ್ ಚೂಂತಾರು