Ad Widget

ವಿಶ್ವ ಬೊಜ್ಜು ಜಾಗೃತಿ ದಿನ – ಅಕ್ಟೋಬರ್ 26

ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್ 26 ರಂದು ವಿಶ್ವ ಬೊಜ್ಜು ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಅಧಿಕ ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆ ಗಳು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಈ ಆಚರಣೆ ಯನ್ನು ವಿಶ್ವ ಆರೋಗ್ಯ ಸಂಸ್ಥೆ 2015 ರಿಂದ ಆರಂಭಿಸಿತ್ತು.

. . . . . . .

ಬದುಕನ್ನು ಹೈರಾಣಾಗಿಸುವ ಬೊಜ್ಜು

ಪ್ರತಿಯೊಬ್ಬ ಮನುಷ್ಯನಿಗೂ ತಾನು ಚೆನ್ನಾಗಿ ಕಾಣಿಸಬೇಕು ಮತ್ತು ತೆಳ್ಳಗೆ ಸ್ಲಿಮ್ ಆಗಿ ಇರಬೇಕು ಎಂದು ಮಹದಾಶೆ ಇರುವುದಂತೂ ಸತ್ಯ. ಆದರೆ ಬಾಯಿಚಪಲ ಬಿಡಬೇಕಲ್ಲ. ನಾಲಗೆಯ ದಾಸನಾಗಿ ಅಗತ್ಯಕ್ಕಿಂತ ಜಾಸ್ತಿ ತಿಂದಾಗ ಹೆಚ್ಚಾಗಿ ಸೇವಿಸಲ್ಪಟ್ಟ ಕ್ಯಾಲರಿ ದೇಹದೆಲ್ಲೆಡೆ ಬೊಜ್ಜು ಅಥವಾ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ. ಒಬ್ಬ ಸಾಮಾನ್ಯ ಮಧ್ಯವಯಸ್ಕ ಪುರುಷನಿಗೆ ದಿನವೊಂದಕ್ಕೆ 2200ರಿಂದ 2300 ಕ್ಯಾಲರಿ ಮತ್ತು ಮಹಿಳೆಗೆ 2000ದಿಂದ 2200 ಕ್ಯಾಲರಿ ಅವಶ್ಯವಿರುತ್ತದೆ. ಅಗತ್ಯಕ್ಕಿಂತ ಜಾಸ್ತಿ ತಿಂದು, ದೈಹಿಕ ಪರಿಶ್ರಮ ಕಡಿಮೆಯಾದಾಗ ಹೆಚ್ಚಾದ ಕ್ಯಾಲರಿ ಕೊಬ್ಬಾಗಿ ಪರಿವರ್ತನೆ ಆಗುತ್ತದೆ. ಕೊಬ್ಬು ಕಡಿಮೆ ಮಾಡಲು ಅತೀ ಸುಲಭ ಮಾರ್ಗ ಎಂದರೆ ನಾವು ಸೇವಿಸಿದ ಆಹಾರದ ಕ್ಯಾಲರಿಯ ಪ್ರಮಾಣಕ್ಕಿಂತ ಹೆಚ್ಚು ದೈಹಿಕ ಪರಿಶ್ರಮ ಮಾಡತಕ್ಕದ್ದು ಪ್ರತಿದಿನ ದೈಹಿಕ ವ್ಯಾಯಾಮ, ಸ್ವಿಮ್ಮಿಂಗ್, ಸೈಕ್ಲಿಂಗ್, ಬಿರುಸು ನಡಿಗೆ ಮುಂತಾದವುಗಳ ಮೂಲಕ ನಾವು ತಿಂದ ಕ್ಯಾಲರಿಗಳನ್ನು ಕರಗಿಸಿದ್ದಲ್ಲಿ ಬೊಜ್ಜು ಶೇಖರಣೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಅಗತ್ಯಕ್ಕಿಂತ ಜಾಸ್ತಿ ತಿಂದು ಅಗತ್ಯಕ್ಕಿಂತ ಕಡಿಮೆ ದೈಹಿಕ ಪರಿಶ್ರಮ ಮಾಡಿದಲ್ಲಿ ಕೊಬ್ಬು ಎಲ್ಲೆಂದರಲ್ಲಿ ಶೇಖರಣೆಯಾಗುವುದರಲ್ಲಿ ಸಂದೇಹವೇ ಇಲ್ಲ.

ಬೊಜ್ಜಿನ ಮಾಪನ ಹೇಗೆ ?

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹದ ಬೊಜ್ಜಿನ ಪ್ರಮಾಣವನ್ನು (BMI) ಬಾಡಿ ಮಾಸ್ ಇಂಡೆಕ್ಸ್ ಎಂಬ ಮಾಪನದಿಂದ ಅಳೆಯಲಾಗುತ್ತದೆ. ನಮ್ಮ ದೇಹದ ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ ನಮ್ಮ ದೇಹದ ಇತರ ಅಂಗಾಂಗಗಳು, ಸ್ನಾಯುಗಳು, ಮೂಳೆಗಳು, ದೇಹದ ಕೊಬ್ಬಿನ ಪ್ರಮಾಣ ಎಲ್ಲವೂ ಒಂದೇ ಅನುಪಾತದಲ್ಲಿ ಇರತಕ್ಕದ್ದು. ಇದರಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದಲ್ಲಿ, ಏರುಪೇರು ಉಂಟಾದಲ್ಲಿ ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚುತ್ತದೆ. ಸಾಮಾನ್ಯವಾಗಿ ದೇಹದ ತೂಕವನ್ನು ಕಿಲೋಗ್ರಾಂಗಳಲ್ಲಿ ಅಳೆದು ಅದನ್ನು ದೇಹದ ಎತ್ತರ (ಮೀಟರ್‍ಗಳಲ್ಲಿ)ದ ಎರಡರಷ್ಟರಿಂದ ಭಾಗಿಸಿದಾಗ ಸಿಗುವ ಮೌಲ್ಯವನ್ನು ಬಾಡಿ ಮಾಸ್ ಇಂಡೆಕ್ಸ್ (BMI) ಅಥವಾ ದೇಹದ ಬೊಜ್ಜಿನ ಸಾಂದ್ರತೆಯ ಪ್ರಮಾಣ ಎಂದು ಕರೆಯುತ್ತಾರೆ. ಉದಾಹರಣೆಗೆ ನಿಮ್ಮ ದೇಹದ ತೂಕ 60 ಕಿಲೋಗ್ರಾಂ ಇದಲ್ಲಿ ನಿಮ್ಮ ಎತ್ತರ 1.70 ಮೀಟರ್ ಅಥವಾ 170 ಸೆಂಟಿ ಮೀಟರ್ ಇದಲ್ಲಿ ನಿಮ್ಮBMI, I60/(1.7)2=60/2.89=20.76 ಆಗುತ್ತದೆ. ಸಾಮಾನ್ಯವಾಗಿ 18.5 ರಿಂದ 25ರವರೆಗೆ ನಾರ್ಮಲ್ ಎಂದೂ 18.5ಕ್ಕಿಂತ ಕಡಿಮೆ ಇದ್ದಲ್ಲಿ ಕಡಿಮೆ ತೂಕ ಎಂದೂ 25ರಿಂದ ಮೇಲ್ಪಟ್ಟು 30ರವರೆಗೆ ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ 30ಕ್ಕಿಂತಲೂ ಜಾಸ್ತಿ ಇದ್ದಲ್ಲಿ ಅತ್ಯಂತ ಬೊಜ್ಜು ಇರುವವರು ಎಂದು ಪರಿಗಣಿಸಲಾಗುತ್ತದೆ. ಒಟ್ಟಿನಲ್ಲಿ ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಇರತಕ್ಕದ್ದು ಈ ಮಾಪನದ ಒಂದು ನ್ಯೂನತೆ ಎಂದರೆ ಪುರುಷ ಮತ್ತು ಮಹಿಳೆಯರಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಮತ್ತು ದೇಹದ ಗಾತ್ರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ದೇಹದಾಡ್ರ್ಯ ಪಟುಗಳಲ್ಲಿ ಅತ್ಯಧಿಕ ಮಾಂಸಖಂಡಗಳು ಇದ್ದು (ಕೊಬ್ಬಿನ ಬದಲಾಗಿ) ಅವರಿಗೂ ಕೂಡ ಹೆಚ್ಚಿನ BMI ಬರುವ ಸಾಧ್ಯತೆ ಇದೆ. ಇದೇ ಕಾರಣದಿಂದಾಗಿ ದೇಹದ ಇತರ ಎಲ್ಲಾ ಅಂಶಗಳನ್ನು ಪರಿಗಣಿಸಿ BMI ಜೊತೆ ಹೊಂದಾಣಿಕೆ ಮಾಡಿ ವೈದ್ಯರು ವ್ಯಕ್ತಿಯ ಬೊಜ್ಜಿನ ಪ್ರಮಾಣವನ್ನು ತಿಳಿಯುತ್ತಾರೆ. ಇದರ ಜೊತೆಗೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ, ಟ್ರೈಗಿಸರೈಡ್‍ನ ಪ್ರಮಾಣ ಕಡಿಮೆ ಸಾಂದ್ರತೆ ಮತ್ತು ಹೆಚ್ಚಿನ ಸಾಂದ್ರತೆಯ (HDL) ಲೈಪೋಪ್ರೋಟಿನ್‍ನ ಪ್ರಮಾಣ ಮತ್ತು ಅವುಗಳ ಅನುಪಾತವನ್ನು ನಿರ್ಧರಿಸಿ ಬೊಜ್ಜಿನ ಪ್ರಮಾಣವನ್ನು ನಿಖರವಾಗಿ ಪತ್ತೆ ಹಚ್ಚುತ್ತಾರೆ. ಇನ್ನೊಂದು ಲೆಕ್ಕಾಚಾರದಲ್ಲಿಯೂ ಸಾಮಾನ್ಯವಾಗಿ ಬೊಜ್ಜಿನ ಪ್ರಮಾಣವನ್ನು ಸುಲಭವಾಗಿ ಅಳೆಯುತ್ತಾರೆ. ಆರೋಗ್ಯವಂಥ ವ್ಯಕ್ತಿಯ ದೇಹದ ತೂಕ ಅವರ ಎತ್ತರಕ್ಕೆ ಅನುಗುಣವಾಗಿರಬೇಕು. ನಮ್ಮ ದೇಹದ ಎತರವನ್ನು ಸೆಂಟೀ ಮೀಟರ್‍ಗಳಲ್ಲಿ ಅಳೆದು ಆದರಿಂದ ನೂರನ್ನು ಕಳೆದರೆ ಉಳಿಯುವ ಶೇಷವೇ ನಿಮಗಿರಬೇಕಾದ ನಿಜವಾದ ತೂಕ ಎಂದು ಪರಿಗಣಿಸಲಾಗುತ್ತಿದೆ. ಉದಾಹರಣೆಗೆ ನಿಮ್ಮ ದೇಹದ ಎತ್ತರ 160 ಸೆಂಟೀ ಮೀಟರ್ ಇದ್ದು ನಿಮ್ಮ ನಿಜವಾದ ತೂಕ 160-100=60ಕೆಜಿ ಇರಬೇಕು. ನಿಮ್ಮ ದೇಹದ ತೂಕ ಈ ಪ್ರಮಾಣಕ್ಕಿಂತ ಪ್ರತಿಶತ ಹತ್ತರಷ್ಟು ಹೆಚ್ಚಾಗಿದ್ದರೆ, ಅಂದರೆ 66ಕೆಜಿಗಿಂತ ಜಾಸ್ತಿ ಇದ್ದಲ್ಲಿ ನೀವು ಬೊಜ್ಜಿನವರಾಗಿರುತ್ತೀರಿ ಎಂದು ತಿಳಿಯಲಾಗುತ್ತದೆ.

ಬೊಬ್ಬಿನಿಂದಾಗುವ ತೊಂದರೆಗಳು

ಹೃದಯಾಘಾತವಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗುತ್ತದೆ.
ಅಧಿಕ ರಕ್ತದೂತ್ತಡ ಮತ್ತು ಮಧುಮೇಹ ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗುತ್ತದೆ.
ದೇಹದ ಬಾರ ಹೊರುವ ಕಾಲಿನ ಗಂಟುಗಳ ನೋವು, ಮಂಡಿನೋವು ಬರುವ ಸಾಧ್ಯತೆ ಇಮ್ಮಡಿಯಾಗುತ್ತದೆ. ಸಂಧಿವಾತ, ಗಂಟು ನೋವು ಕೂಡಾ ಬರುವ ಸಾಧ್ಯತೆ ಇರುತ್ತದೆ.
ಉಸಿರಾಟ ಸಂಬಂಧಿ ರೋಗಗಳು, ಅಸ್ತಮಾ ಮುಂತಾದ ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗುವುದರಿಂದ ಹರ್ನಿಯೂ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿಯಾಗಿ, ಪಾಶ್ರ್ವವಾಯು ಅಥವಾ ಸ್ಟ್ರೋಕ್ ಉಂಟಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ
ಕಾಲುಗಳಲ್ಲಿ ವೆರಿಕೋಸಿಟಿ ಎಂಬ ರಕ್ತನಾಳಗಳ ರೋಗ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ
ಮಹಿಳೆಯರಲ್ಲಿ ಹೆಚ್ಚಿನ ಕೊಬ್ಬಿನ ಮತ್ತು ದೇಹದ ತೂಕ ಹೆಚ್ಚಾಗಿ, ಮಕ್ಕಳಾಗದಿರುವುದು, ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆಗಳ ಸಾಧ್ಯತೆಯೂ ಹೆಚ್ಚಾಗುತ್ತದೆ.

ಬೊಜ್ಜು ಕರಗಿಸುವುದು ಹೇಗೆ ?

ಅಗತ್ಯವಿದ್ದಷ್ಟೆ ತಿನ್ನಿ, ಅಗತ್ಯಕ್ಕಿಂತ ಜಾಸ್ತಿ ತಿನ್ನಬೇಡಿ ದಿನವೊಂದಕ್ಕೆ 2500ಕ್ಕಿಂತ ಜಾಸ್ತಿ ಕ್ಯಾಲರಿ ತಿನ್ನಲೇಬಾರದು
ಜಾಸ್ತಿ ನಾರುಯುಕ್ತ ತರಕಾರಿ, ಆಹಾರ, ಹಣ್ಣು ಹಂಪಲು ತಿನ್ನಿ. ಜಾಸ್ತಿ ದ್ರವಾಹಾರ ಸೇವಿಸಿ. ದಿನವೊಂದಕ್ಕೆ 2ರಿಂದ 3ಲೀಟರ್ ನೀರು ಕುಡಿಯಿರಿ.
ಬಿರುಸು ನಡಿಗೆ, ಸೈಕ್ಲಿಂಗ್, ದೈಹಿಕ ವ್ಯಾಯಾಮ, ಡಯಟಿಂಗ್, ಸ್ಪಿಮ್ಮಿಂಗ್, ಜಾಗಿಂಗ್ ಮಾಡಿ ಬೊಜ್ಜು ಶೇಖರಣೆಯಾಗದಂತೆ ನೋಡಿಕೊಳ್ಳಿ
ಕರಿದ ತಿಂಡಿಗಳು, ಸಿದ್ಧ ಆಹಾರಗಳನ್ನು ವರ್ಜಿಸಿ ಕೊಬ್ಬು ಜಾಸ್ತಿ ಇರುವ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ವರ್ಜಿಸಿ ಹಿತಮಿತವಾಗಿ ನೈಸರ್ಗಿಕ ಆಹಾರವನ್ನು ಸೇವಿಸತಕ್ಕದ್ದು.

ಕೊನೆ ಮಾತು :
“ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದು ನಮ್ಮ ಹಿರಿಯರು ಹೇಳಿದ ಮಾತು ನೂರಕ್ಕೆ ನೂರರಷ್ಟು ನಿಜ. ಯಾಕೆಂದರೆ ನಮ್ಮ ಎಲ್ಲಾ ರೋಗಗಳಿಗೆ ಮೂಲಕಾರಣ ನಾವು ತಿನ್ನುವ ಆಹಾರ ಮತ್ತು ನಮ್ಮ ಪರಿಶ್ರಮರಹಿತ ಮೋಜಿನ ಜೀವನ ಶೈಲಿ ಹಾಗೂ ನಮ್ಮ ಧೂಮಪಾನ, ಮಧ್ಯಪಾನ ಮುಂತಾದ ಚಟಗಳು. ಚಟಗಳು ನಮ್ಮನ್ನು ಚಟ್ಟ ಹತ್ತಿಸುವ ಮೊದಲೇ ನಾವು ಎಚ್ಚೆತುಕೊಂಡು ಆರೋಗ್ಯಕರ ಜೀವನ ಶೈಲಿ ಮತ್ತು ಆರೋಗ್ಯಪೂರ್ಣ ಆಹಾರ ಪದ್ಧತಿ ಅಳವಡಿಸಿಕೊಳ್ಳತಕ್ಕದ್ದು, ಇಲ್ಲವಾದಲ್ಲಿ ಎಲ್ಲೆಂದರಲ್ಲಿ ದೇಹದೆಲ್ಲೆಡೆ ಬೊಜ್ಜು ಶೇಖರಣೆಯಾಗಿ ನಮ್ಮ ದೇಹ ರೋಗಗಳ ಹಂದರವಾಗಿ ಮೂವತ್ತು ನಲವತ್ತರ ಅಸುಪಾಸಿನಲ್ಲಿಯೇ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಮುಂತಾದ ಆಧುನಿಕ ಜೀವನ ಶೈಲಿನ ಶಾಪಗ್ರಸ್ತ ರೋಗಗಳು ಸೇರಿಕೊಂಡು ಮನುಕುಲವನ್ನು ನುಂಗಿ ನೀರು ಕುಡಿಯುವ ದಿನಗಳು ದೂರವಿಲ್ಲ. ಇಂತಹ ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಂಡು ಆರೋಗ್ಯ ಪೂರ್ಣ ಆಹ್ಲಾದಕರ ಜೀವನ ಶೈಲಿ ಅಳವಡಿಸಿಕೊಳ್ಳುವುದಲ್ಲಿಯೇ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!