ಮರ್ಕಂಜ ಗ್ರಾಮ ಮಿತ್ತಡ್ಕ ನಿವಾಸಿ ಮೋಹನರವರ ಪತ್ನಿ ಶೋಭಾಲತಾ ಎಂಬವರು ಸೆ.೨೪ರಂದು ನಾಪತ್ತೆಯಾದ ಹಿನ್ನಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿಯನ್ನು ಅಗೆದು ನೋಡುವ ಕಾರ್ಯಾಚರಣೆ ಸೆ.೨೭ರಂದು ಆರಂಭವಾಗಿದ್ದು, ಇದೀಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಶೋಭಾಲತಾರವರು ಸೆ.೨೪ರ ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನದಿಂದ ಅವರ ಮನೆಯ ಬಳಿಯ ಬಾವಿಯಲ್ಲಿ ಹುಡುಕಲಾಗಿತ್ತು. ಆರಂಭದಲ್ಲಿ ನೀರು ಆರಿಸಿ ಹುಡುಕುವ ಪ್ರಯತ್ನ ಮಾಡಿದಾಗ ಒಳ¨ಬಾಗದಲ್ಲಿ ಮಣ್ಣು ಜರಿಯತೊಡಗಿತು. ಹೀಗಾಗಿ ಹುಡುಕುವ ಪ್ರಯತ್ನ ನಿಲ್ಲಿಸಲಾಯಿತು. ಬಳಿಕ ಅಗ್ನಿಶಾಮಕ ದಳದವರು ಬಂದು ಕೊಕ್ಕೆ ಹುಡುಕತೊಡಗಿದರು. ಕ್ಯಾಮರ ಇಳಿಸಿಯೂ ಶೋಧಿಸಲಾಯಿತು. ಆದರೆ ಮೃತದೇಹ ಇರುವ ಕುರುಹು ಸಿಕ್ಕಿರಲಿಲ್ಲ.
ಆದರೂ ಬಾವಿಯಲ್ಲೇ ಇರುವ ಸಂಶಯ ಧೃಡವಾದ ಹಿನ್ನೆಲೆಯಲ್ಲಿ ಸುಳ್ಯ ಪೋಲೀಸರ ಸಹಕಾರದಿಂದ ಸುಳ್ಯ ತಹಶೀಲ್ದಾರರ ಸೂಚನೆಯಂತೆ ಬಾವಿಯನ್ನು ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕಾರ್ಯಚರಣೆ ಸೆ,೨೭ರಂದು ಬೆಳಿಗ್ಗೆಯಿಂದ ಆರಂಭಿಸಲಾಯಿತು. ಇದೀಗ ಮಣ್ಣು ತೆಗೆದ ಬಳಿಕ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದವರು ಬಾವಿಯೊಳಗೆ ಇಳಿದು ಹುಡಕುವ ಕಾರ್ಯಾಚರಣೆ ಆರಂಭಿಸಿದಾಗ ಮೃತದೇಹ ಪತ್ತೆಯಾಯಿತು ಎಂದು ತಿಳಿದು ಬಂದಿದೆ. ಇದೀಗ ಬಾವಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸುಳ್ಯಕ್ಕೆ ಕರೆತರುತ್ತಿರುವುದಾಗಿ ತಿಳಿದು ಬಂದಿದೆ.