ವರದಿ:ಮಿಥುನ್ ಕರ್ಲಪ್ಪಾಡಿ ಸುಳ್ಯ.
ಮಂಡೆಕೋಲು : ಗಣೇಶೋತ್ಸವದ ಉದ್ದೇಶ ಇಡೇರಿಸಲು ಮುಂದಾದ ಸಮಿತಿ – ಪುಟಾಣಿ ಮಕ್ಕಳ ಪ್ರತಿಭೆ ಬೆಳಗಲು ಪ್ರಥಮ ಪ್ರಾಶಸ್ತ್ಯ – ಅಂಗನವಾಡಿ ಮಕ್ಕಳ ಜತೆ ಕುಣಿದ ಮಗು
ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಗ್ರಾಮವಾಗಿದ್ದು ಈ ಹಿಂದೆ ಈ ಗ್ರಾಮವು ಕುಗ್ರಾಮ ಎಂದೆ ಹಣೆಪಟ್ಟಿ ಕಟ್ಟಿಕೊಂಡಿದ್ದು ಇದೀಗ ಅಭಿವೃದ್ಧಿಯ ಶಕೆಯನ್ನೆ ಆರಂಭಿಸಿ ಅಭಿವೃದ್ಧಿ ಮೂಲಕವೇ ಇಡೀ ದೇಶವೇ ಹಿಂತುರುಗಿ ನೋಡುವಂತೆ ಮಾಡಿದ ಗ್ರಾಮವಿದು.
ಮಂಡೆಕೋಲು ಗ್ರಾಮವೆಂದರೆ ರಾಜಕೀಯ ಸಾಮಾಜಿಕ ಧಾರ್ಮಿಕ ಹಾಗು ಕಲೆ ಸಂಸ್ಕೃತಿಗಳ ತವರು ಗ್ರಾಮವೆಂದೇ ಇದೀಗ ಹೇಳಬಹುದು. ಗ್ರಾಮದಲ್ಲಿ ಪ್ರತೀ ವರ್ಷವೂ ಗ್ರಾಮದೇವರ ಜಾತ್ರೋತ್ಸವ ಹಾಗು ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದ್ದು, ಗ್ರಾಮದ 2 ನೇ ಜಾತ್ರೆಯಾಗಿ ಈ ಗಣೇಶೋತ್ಸವ ನಡೆಯುತ್ತಾ ಬರುತ್ತಿದ್ದು ಇಲ್ಲಿ ಯಾವುದೇ ರಾಜಕೀಯ , ಜಾತಿ ಬೇಧಗಳಿಲ್ಲದೇ ಸುಸೂತ್ರವಾಗಿ ಊರವರು ಮಕ್ಕಳ ಜೊತೆಗೂಡಿ ಹಬ್ಬವನ್ನು ಆಚರಿಸುತ್ತಿದ್ದು ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮಕ್ಕಳಿಗೆ ಅವಕಾಶಗಳನ್ನು ಮೊದಲ ಪ್ರಾಶಸ್ತ್ಯ ನೀಡುತ್ತಿದ್ದು ಮಕ್ಕಳು ತಮ್ಮ ವಿವಿಧ ಪ್ರತಿಭೆಯನ್ನು ಹೊರಸೂಸಲು ಅವಕಾಶ ಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಗಣೇಶೋತ್ಸವ ಸಮಿತಿಯು ಮುಂದಡಿಯಿಡುತಿದ್ದು ಈ ಗ್ರಾಮದ ಮಕ್ಕಳಿಗೆ ಇದೀಗ ವೇದಿಕೆಯ ಭಯವೇ ಇಲ್ಲದಂತೆ ಮಾಡುವ ಉದ್ದೇಶ ಹೊಂದಿದೆ. ಪುಟ್ಟ ಪುಟ್ಟ ಕಂದಮ್ಮ ಗಳಿಂದ ಪ್ರಾರಂಭಿಸಿ ಮಕ್ಕಳು ಮಹಿಳೆಯರು ವೇದಿಕೆ ಅನ್ನುವ ಭಯವೇ ಇಲ್ಲದೇ ಅವಕಾಶಗಳನ್ನು ಉಪಯೋಗ ಪಡಿಸಿಕೊಳ್ಳಲು ಆರಂಭಿಸಿದ್ದಾರೆ.
ಗಣೇಶೋತ್ಸವ ಸಭಾ ವೇದಿಕೆಯಲ್ಲಿ ಅಂಗನವಾಡಿ ಮಕ್ಕಳ ಜೊತೆಗೆ ಪುಟಾಣಿ ಹೆಜ್ಜೆಯನ್ನಿಟ್ಟು ಕುಣಿದ ಕೂಸು !
ಸೆ.06 ರಂದು ರಾತ್ರಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಗಳ ಅಂಗನವಾಡಿ ಮಕ್ಕಳ ನೃತ್ಯ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಎಳೆಯ ಮಗು ಅಂಗನವಾಡಿ ಮಕ್ಕಳ ಜೊತೆಗೆ ವೇದಿಕೆಯಲ್ಲಿ ತನ್ನದೇ ರೀತಿಯಲ್ಲಿ ಕುಣಿದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು .
ಪ್ರತಿಯೊಂದು ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಇಂತಹ ಸ್ಥಳೀಯ ಪುಟಾಣಿ ಮಕ್ಕಳನ್ನು ತಯಾರುಗೊಳಿಸುವ ಮೂಲಕ ಗಣೇಶೋತ್ಸವ ಆರಂಭವಾದ ಉದ್ದೇಶ ಈಡೇರಿದಂತಾಗುವುದು. ಅಂದು ಗಣೇಶೋತ್ಸವದ ಹೆಸರಿನಲ್ಲಿ ನಾಡನ್ನೆ ಸೇರಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಯಾವ ರೀತಿಯಲ್ಲಿ ಭಾರತೀಯರು ಒಗ್ಗಟ್ಟಾದರೋ, ಇಂದು ಭಾರತದ ಧರ್ಮ, ಸಂಸ್ಕೃತಿ ಉಳಿಸಲು ಗಣೇಶೋತ್ಸವ ಸಮಿತಿಗಳು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಮಂಡೆಕೋಲು ಗ್ರಾಮ ಹೆಜ್ಜೆ ಇಟ್ಟಿದೆ. ಮೊಳಕೆಯ ಸಿರಿಗಳಿಗೆ ಬೆಳೆಯಲು ಅವಕಾಶ ನೀಡಿ, ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ರೂಪಿಸೋಣ.