ಕಣ್ಣಿನ ಒಳ ಭಾಗದಲ್ಲಿ ಇರುವ ಲೆನ್ಸ್ ಅಥವಾ ಮಸೂರ ನಮ್ಮ ದೃಷ್ಟಿಯ ಸೃಷ್ಟಿಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ಈ ಮಸೂರದ ಒಳಭಾಗದಲ್ಲಿ ಪ್ರೋಟಿನ್ ಒಡೆದುಕೊಂಡು ಉಂಟಾಗುವ ಪೊರೆಯನ್ನು ಕ್ಯಾಟರಾಕ್ಟ್ ಎನ್ನುತ್ತಾರೆ. ಇದರಿಂದ ದೃಷ್ಟಿಯ ಸಮಸ್ಯೆ ಉಂಟಾಗುತ್ತದೆ. ಇದೊಂದು ವಯೋ ಸಹಜ ಕಾಯಿಲೆಯಾಗಿದ್ದು, ನಿಮ್ಮ ವಯಸ್ಸು ಹೆಚ್ಚಾದಂತೆ ಈ ಪೊರೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕ್ಯಾಟರಾಕ್ಟ್ ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಉಂಟಾಗಬಹುದು. ಆದರೆ ಒಂದು ಕಣ್ಣಿನಿಂದ ಇನ್ನೊಂದು ಕಣ್ಣಿಗೆ ಹರಡುವುದಿಲ್ಲ. ಸಾಮಾನ್ಯವಾಗಿ ಮಸೂರ ಪಾರದರ್ಶಕವಾಗಿದ್ದು ಅದರ ಮುಖಾಂತರ ಸುಂದರ ಚಿತ್ರಣ ದೊರಕುತ್ತದೆ. ಆದರೆ ಕ್ಯಾಟರಾಕ್ಟ್ ಉಂಟಾದಾಗ ಮೋಡಮುಸುಕಿದಂತೆ ಅಥವಾ ಮಂಜು ತುಂಬಿದ ಗ್ಲಾಸ್‍ನ ಮುಖಾಂತರ ನೋಡಿದಂತೆ ಬಾಸವಾಗುತ್ತದೆ.
ನಮ್ಮ ಭಾರತ ದೇಶವೊಂದರಲ್ಲಿಯೇ ವಾರ್ಷಿಕವಾಗಿ ಒಂದು ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು ವಿಶ್ವದಲ್ಲಿ 70 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗದಿಂದ ಬಳಲುತ್ತಾರೆ. ಬಹಳ ನಿಧಾನವಾಗಿ ಬೆಳೆಯುವ ಈ ಕಣ್ಣಿನ ಪೊರೆ ಕ್ರಮೇಣವಾಗಿ ಚಲನೆ, ಓದುವಿಕೆ ಅಥವಾ ಮುಖವನ್ನು ಗುರುತಿಸುವಿPಗೆÉ ತೊಂದರೆ ನೀಡುತ್ತದೆ. ಜಾಗತಿಕವಾಗಿ ಕುರುಡುತನಕ್ಕೆ ಕಣ್ಣಿನ ಪೊರೆ 51 ಶೇಕಡಾ ಕಾರಣವಾಗುತ್ತದೆ ಮತ್ತು ದೃಷ್ಟಿಹೀನತೆಗೆ 31 ಶೇಕಡಾ ಪಾಲನ್ನು ನೀಡುತ್ತದೆ.
ಲಕ್ಷಣಗಳು?
1. ಮಸುಕಾದ ಬಣ್ಣಗಳು, ಮಸುಕಾದ ದೃಷ್ಟಿ, ಮಸುಕಾದ ನೋಟ ಕಂಡುಬರುತ್ತದೆ.
2. ಬೆಳಕಿನ ಸುತ್ತಲಿನ ಪ್ರಭಾವಲಯ, ಪ್ರಕಾಶಮಾನವಾದ ದೀಪಗಳಿಂದ ತೊಂದರೆ ಉಂಟಾಗುತ್ತದೆ
3. ರಾತ್ರಿಯಲ್ಲಿ ನೋಡಲು ತೊಂದರೆ ಉಂಟಾಗುತ್ತದೆ
4. ಪದೇ ಪದೇ ಕನ್ನಡಕ ಬದಲಾವಣೆ ಮಾಡಿಸಿಕೊಳ್ಳುವುದು
5. ಅಸ್ಪಷ್ಟವಾದ ದೃಷ್ಟಿ ಅಥವಾ ಕೆಲವೊಮ್ಮೆ ಎರಡು ದೃಷ್ಟಿ ಕಾಣಿಸಬಹುದು
6. ಮುಂದುವರಿದ ಹಂತದಲ್ಲಿ ಕಣ್ಣಿನ ಪೊರೆಯಿಂದ ಖಿನ್ನತೆ ಮತ್ತು ಕುರುಡುತನ ಕೂಡಾ ಕಂಡುಬರುತ್ತದೆ.
ಕಾರಣಗಳು ಏನು?
1. ಮುಂದುವರಿದ ವಯಸ್ಸು, ಹಿರಿಯ ನಾಗರೀಕರಲ್ಲಿ ಹೆಚ್ಚು ಕಂಡುಬರುತ್ತದೆ.
2. ಸೂರ್ಯನ ಪ್ರಖರ ಕಿರಣಗಳಿಗೆ ತೆರೆದುಕೊಳ್ಳುವುದರಿಂದ ಕಣ್ಣಿನ ಪೊರೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
3. ಸೂಕ್ತವಾದ ವಿಟಮಿನ್ ಮತ್ತು ಖನಿಜಾಂಶಗಳ ಕೊರತೆ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಅತೀ ಅಗತ್ಯ
4. ಕಣ್ಣಿಗೆ ಉಂಟಾದ ಆಘಾತ, ಅಪಘಾತಗಳಿಂದಲೂ ಕ್ಯಾಟರಾಕ್ಟ್ ಬರುವ ಸಾಧ್ಯತೆ ಇದೆ.
5. ಅತಿಯಾದ ವಿಕಿರಣಕ್ಕೆ ತೆರೆದುಕೊಂಡಲ್ಲಿ, ಕಣ್ಣಿನ ಪೊರೆ ಬರಬಹುದು
6. ಅನುವಂಶಿಯ ಕಾರಣಗಳಿಂದಲೂ ಕಣ್ಣಿನ ಪೊರೆ ಬರುತ್ತದೆ
7. ಮಧುಮೇಹ ರೋಗ ಇರುವವರಿಗೆ ಇತರರಿಗಿಂತಲೂ 15 ವರ್ಷ ಮೊದಲು ಕ್ಯಾಟರಾಕ್ಟ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ
8. ತಂಬಾಕು ಸೇವನೆಯಿಂದ ಕ್ಯಾಟರಾಕ್ಟ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
9. ಅನಗತ್ಯವಾಗಿ, ಅತಿಯಾದ ಸ್ಟಿರಾಯ್ಡ್ ಮತ್ತು ಇತರ ಕಣ್ಣಿನ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಬಳಸುವವರಿಗೂ ಕ್ಯಾಟರಾಕ್ಟ್ ಬರುವ ಸಾಧ್ಯತೆ ಇದೆ.
10. ಮಧ್ಯಪಾನ ಕೂಡ ಕ್ಯಾಟರಾಕ್ಟ್‍ಗೆ ಕಾರಣವಾಗಬಹುದು
ತಡೆಗಟ್ಟುವುದು ಹೇಗೆ?
1. ಸೂರ್ಯನ ಪ್ರಖರ ಬೆಳಕಿಗೆ ಹೋಗುವಾಗ ತಂಪು ಕನ್ನಡಕ ಬಳಸಬೇಕು
2. ಮಧ್ಯಪಾನ, ದೂಮಪಾನ ವರ್ಜಿಸಬೇಕು
3. ಅನಗತ್ಯವಾಗಿ ಕಣ್ಣಿನ ಔಷಧಿ ಬಳಸಬಾರದು ಸ್ವಯಂ ಮದ್ದುಗಾರಿಕೆ ಬೇಡವೇ ಬೇಡ. ಕಣ್ಣಿನ ವೈದ್ಯರ ಸಲಹೆ ಇಲ್ಲದೆ ಯಾವುದೇ ಪ್ರಯೋಗಾತ್ಮಕ ಔಷಧಿ ಬಳಸಬಾರದು
4. ವಿಟಮಿನ್, ಖನಿಜಾಂಶ, ಪೊಷಕಾಂಶ ಮತ್ತು ಸಮತೋಲಿತ ಆಹಾರ ಸೇವಿಸತಕ್ಕದ್ದು
5. ಮಧುಮೇಹ ರೋಗ ಮತ್ತು ಅನುವಂಶಿಯ ಕಣ್ಣಿನ ಸಮಸ್ಯೆ ಇದ್ದಲ್ಲಿ ವೈದ್ಯರ ಬಳಿ ಸೂಕ್ತ ಸಮಾಲೋಚನೆ ಅತೀ ಅಗತ್ಯ. ಹಸಿ ತರಕಾರಿ ಮತ್ತು ತಾಜಾ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ.
6. ಓಮೆಗಾ-3 ಪ್ಯಾಟಿ ಆಸಿಡ್ ಇರುವ ಆಹಾರ ಪದಾರ್ಥ ಹೆಚ್ಚು ಸೇವಿಸಬೇಕು. ಅಗಸೆ ಬೀಜಗಳು ಅತೀ ಉತ್ತಮ
7. ವಿಟಮಿನ್ ಸಿ, ಗ್ರೀನ್ ಟೀ, ಬ್ರೊಕೋಲಿ, ಅವಕಾಡೋ ಮುಂತಾದ ಆಹಾರ ಉತ್ತಮ ಎಂದು ತಿಳಿದು ಬಂದಿದೆ
ಪತ್ತೆ ಹಚ್ಚುವುದು ಹೇಗೆ:
1. ನುರಿತ ನೇತ್ರ ತಜ್ಞದಿಂದ ಕಣ್ಣಿನ ತಪಾಸಣೆ ಕಾಲಕಾಲಕ್ಕೆ ಮಾಡಿಸಬೇಕು. 40 ವರ್ಷ ಕಳೆದ ಬಳಿಕ ವಾರ್ಷಿಕವಾಗಿ ಕಣ್ಣಿನ ತಪಾಸಣೆ ಅತೀ ಅಗತ್ಯ
2.ವಿಶೇಷ ಕಂಪ್ಯೂಟರ್ ಯಂತ್ರದ ಮುಖಾಂತರ ಕಣ್ಣಿನ ಭಾಗವನ್ನು ಪರಿಶೀಲಿಸಿ ಕಣ್ಣಿನ ಪೊರೆಗಳನ್ನು ಪತ್ತೆಹಚ್ಚುತ್ತಾರೆ.
ಚಿಕಿತ್ಸೆ ಹೇಗೆ?
ಒಮ್ಮೆ ಕಣ್ಣಿನ ಪೊರೆ ಬಂದ ಮೇಲೆ ಯಾವುದೇ ಔಷಧಿಯಿಂದ ಸರಿಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಕನ್ನಡಕ ಧರಿಸಿ ಮಂಜಾದ ದೃಷ್ಟಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಕೇವಲ ಸರ್ಜರಿ ಮಾತ್ರ ಮಾಡಬೇಕು.
ಶಸ್ತ್ರ ಚಿಕಿತ್ಸೆ ಮುಖಾಂತರ ಮಂಜಾದ ಮಸೂರವನ್ನು ತೆಗೆಯಲಾಗುತ್ತದೆ. ಹಿಂದಿನ ಸಾಂಪ್ರದಾಯಿಕ ಶಸ್ತ್ರ ಚಿಕಿತ್ಸೆಯಲ್ಲಿ ದೊಡ್ಡದಾದ ಗಾಯ ಇರುತ್ತಿತ್ತು. ಸುಮಾರು 10 ರಿಂದ 12 mm ಉದ್ದದ ಗಾಯದ ಮುಖಾಂತರ ಮಸೂರವನ್ನು ತೆಗೆಯಲಾಗುತ್ತದೆ. ಬಳಿಕ ವಾರಗಳ ಕಾಲ ವಿಶ್ರಾಂತಿ ಇರುತ್ತಿತ್ತು. ನಂತರ ದಿನಗಳಲ್ಲಿ ಗಾಯದ ಗಾತ್ರ 6 ರಿಂದ 8 mm ಗೆ ಇಳಿದು ಕಣ್ಣಿನ ಹೊರ ಒಳ ಭಾಗದಲ್ಲಿ ಸರ್ಜರಿ ಮಾಡಲು ಆರಂಭಿಸಿದರು.
ಈಗ ಶಬ್ದಾತೀತ ತರಂಗಗಳ ಮುಖಾಂತರ ಗಾಯವಿಲ್ಲದೆ ದೋಷಪೂರಿತ ಮಸೂರವನ್ನು ತೆಗೆದು ಕೃತಕ ಮಸೂರವನ್ನು ನೀಡಲಾಗುತ್ತದೆ. ಈ ಸರ್ಜರಿಗೆ ಒಳರೋಗಿಯಾಗಿ ಆಸ್ಪತ್ರೆಯಲ್ಲಿ ವಾರಗಟ್ಟಲೆ ಇರಬೇಕಾಗಿಲ್ಲ ಡೇ ಕೇರ್ ಸರ್ಜರಿ ಮುಖಾಂತರ ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ಸಂಜೆ ಮನೆಗೆ ಬರಬಹುದು
ಸಾಂಪ್ರದಾಯಿಕ ಸರ್ಜರಿಗಿಂತ ಶಬ್ದಾತೀತ ತರಂಗಗಳ ಸರ್ಜರಿ ಹೇಗೆ ಬಿನ್ನವಾಗಿರುತ್ತದೆ
1. ಅತೀ ಕಡಿಮೆ ನೋವು ಮತ್ತು ಉರಿಯೂತ
2. ಕಣ್ಣಿಗೆ ಯಾವುದೇ ಸ್ಥಳಿಯ ಅರಿವಳಿಕೆ ಚುಚ್ಚು ಮದ್ದಿನ ಅಗತ್ಯವಿರುವುದು ಕೇವಲ ಅರಿವಳಿಕೆ ಮದ್ದನ್ನು ಕಣ್ಣಿನ ಮುಂಭಾಗಕ್ಕೆ ಸವರಿ ಸರ್ಜರಿ ಮಾಡುತ್ತಾರೆ.
3. ಬಹಳ ಚಿಕ್ಕದಾದ, ಕಣ್ಣಿಗೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗದ ಚಿಕ್ಕ ಗಾಯದ ಮುಖಾಂತರ ಸರ್ಜರಿ ಮಾಡಲಾಗುತ್ತದೆ
4. ಈ ಶಬ್ದಾತೀತ ತರಂಗಗಳ ಸರ್ಜರಿ ಬಳಿಕ 2 ವಾರಗಳಲ್ಲಿ ಓದುವ ಕನ್ನಡಕ ಅಥವಾ ದೈನಂದಿನ ಬಳಕೆಯ ಕನ್ನಡಕ ಬಳಸಲಾಗುತ್ತದೆ
ಶಸ್ತ್ರ ಚಿಕಿತ್ಸೆ ನಂತರದ ಜವಾಬ್ದಾರಿಗಳು
ಶಸ್ತ್ರ ಚಿಕಿತ್ಸೆ ನಡೆಸಿ ದೋಷಪೂರಿತ ಮಸೂರವನ್ನು ತೆಗೆದು ಹೊಸ ಮಸೂರವನ್ನು ಕಣ್ಣಿನಲ್ಲಿ ಕೂರಿಸಲಾಗುತ್ತದೆ
1. ಸರ್ಜರಿ ಬಳಿಕ ಸ್ಟಿರಾಯ್ಡ್ ಕಣ್ಣಿನ ಡ್ರಾಪ್ಸ್‍ಗಳನ್ನು 4 ರಿಂದ 6 ವಾರಗಳವರೆಗೆ ಬಳಸಲು ವೈದ್ಯರು ಸೂಚಿಸುತ್ತಾರೆ. ಇದರ ಜೊತೆ ಆಂಟಿಬಯೋಟಿಕ್ ಔಷಧಿ ಕೂಡ ನೀಡಲಾಗುತ್ತದೆ
2. ಕನಿಷ್ಠ 10 ದಿನಗಳ ಕಾಲ ತಲೆಗೆ ಸ್ನಾನ ಮಾಡಬಾರದು. ಕಣ್ಣು ಒದ್ದೆಯಾದಂತೆ ವಿಶೇಷ ಮುತುವರ್ಜಿ ವಹಿಸಬೇಕು
3. ನಿರಂತರವಾಗಿ ವೈದ್ಯರ ಬೇಟಿ ಸಲಹೆ ಮಾರ್ಗದರ್ಶನ ಅತೀ ಅಗತ್ಯ. ವೈದ್ಯರ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಬೇಕು
4. ಯಾವುದೇ ರೀತಿಯ ಆಹಾರದ ನಿರ್ಭಂದವಿರುವುದಿಲ್ಲ. ಆದರೆ ಮಧುಮೇಹ ರೋಗವಿದ್ದಲ್ಲಿ ಅದಕ್ಕೆ ಪೂರಕವಾದ ಆಹಾರ ತೆಗೆದುಕೊಳ್ಳತಕ್ಕದ್ದು
5. ಈ ಸರ್ಜರಿ ಬಳಿಕ ಓದುವಿಕೆ ಮತ್ತು ಇತರ ಸಾಮಾನ್ಯ ದೈನಂದಿನ ಚಟುವಟಿಕೆ ಮುಂದುವರಿಸಬಹುದಾಗಿದೆ
.
ಕೊನೆಮಾತು:
ಕ್ಯಾಟರಾಕ್ಟ್ ಸರ್ಜರಿ ಈಗ ಬಹಳ ಸರಳ ಮತ್ತು ಅತ್ಯಂತ ಮುಂದುವರಿದ ತಂತ್ರಜ್ಞಾನ ಮತ್ತು ಯಂತ್ರಗಳ ಮೂಲಕ ಬಹಳ ಸುರಕ್ಷಿತವಾಗಿ ಮತ್ತು ನಿಖರವಾಗಿ ಮಾಡಲು ಸಾಧ್ಯವಿದೆ. ಯಾವುದೇ ಹಿಂಜರಿಕೆ ಇಲ್ಲದೆ, ನುರಿತ ತಜ್ಞ ವೈದ್ಯರಿಂದ ಈ ಚಿಕಿತ್ಸೆ ಪಡೆದಲ್ಲಿ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಸುಧಾರಿಸಿ ಮರಳಿ ಮೊದಲಿನಂತೆ ಬಾಹ್ಯ ಸೌಂದರ್ಯವನ್ನು ಆಸ್ಪಾದಿಸಿ, ಆನಂದಿಸಿ ಬದುಕನ್ನು ಬಂಗಾರವಾಗಿಸಲು ಸಾಧ್ಯವಾಗಬಹುದು.
ಡಾ|| ಮುರಲೀ ಮೋಹನ್‍ಚೂಂತಾರು MDS,DNB,MOSRCSEd(U.K), FPFA, M.B.A
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು.
ಮೊ : 9845135787 drmuraleechoontharu@gmail.com
- Tuesday
- December 3rd, 2024