ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ..? ಮನುಷ್ಯತ್ವವ ಮರೆತು ಬದುಕಿದರೆ ಆ ಬದುಕಿಗೆ ಅರ್ಥವಾದರೂ ಉಂಟೇ…!?
ಜೀವನಪರ್ಯಂತ ಬರೀ ಹಣ, ಆಸ್ತಿ-ಅಂತಸ್ತನ್ನು ಗಳಿಸಿಕೊಂಡರೆ ಸಾಕೇ..? ನಾವು ಸತ್ತ ನಂತರವೂ ನಮ್ಮ ಹೆಸರನ್ನು ಉಳಿಸುವ ಮಾನವೀಯ ಮೌಲ್ಯಗಳಿಗಿಂತ ದೊಡ್ಡ ಆಸ್ತಿ ಬೇಕೇ…!?
ಸಮಾಜದಲ್ಲಿ ಎಲ್ಲರೆದುರು ತಲೆ ಎತ್ತಿ ಬದುಕಬೇಕು ಎಂದುಕೊಂಡರಷ್ಟೇ ಸಾಕೇ..? ಹಿರಿಯರೆದುರು ತಲೆ ತಗ್ಗಿಸಿ, ಕಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ಗುಣವಿಲ್ಲದಿದ್ದರೆ ಸಮಾಜದ ಮುಂದೆ ತಲೆ ಎತ್ತಿ ನಿಲ್ಲುವ ಯೋಗ್ಯತೆ ಬರುವುದಾದರೂ ಹೇಗೆ…!?
ನಮಗೆ ಕಷ್ಟ ಬಂದಾಗ ಎಲ್ಲರೂ ಸ್ಪಂದಿಸಬೇಕು ಎಂದು ಬಯಸಿದರೆ ಸಾಕೇ..? ನಮ್ಮಲ್ಲಿ ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣವಿಲ್ಲದಿದ್ದರೆ ನಾವು ಬದುಕಿದ್ದೂ ಸತ್ತಂತೆ…!!
ಬದುಕಿನುದ್ದಕ್ಕೂ ನಾನು-ನನ್ನದು, ನಾನೊಬ್ಬನೇ ಚೆನ್ನಾಗಿರಬೇಕು ಎನ್ನುವ ಸ್ವಾರ್ಥದಿಂದ ಬದುಕುವುದಾದರೂ ಏಕೆ..? ಸ್ವಾರ್ಥದ ಪರದೆಯನ್ನು ಸರಿಸಿ ನಿಸ್ವಾರ್ಥದ ಕಡೆಗೆ ಬಂದು ಇನ್ನೊಬ್ಬರ ಬದುಕಿನಲ್ಲಿ ನಗು ತರಿಸಿದಾಗ ಸಿಗುವ ಆತ್ಮತೃಪ್ತಿಗಿಂತ ಬೇರೆ ಬೇಕೇ…!?
✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024