ಅಜ್ಜಾವರ :ಪ್ರಕೃತಿಯಲ್ಲಿ ಹಲವಾರು ವಿಸ್ಮಯಗಳು ಕಾಣಸಿಗುತ್ತಿದ್ದು ಅಂತಹದೇ ಒಂದು ವಿಸ್ಮಯಕಾರಿ ಬಾವಿ ಆಲೇಟ್ಟಿ ಅರಣ್ಯ ವ್ಯಾಪ್ತಿಯ ನೂರಾರು ಎಕ್ರೆ ಪ್ರದೇಶಗಳಿಂದ ಹರಿದು ಬರುವ ಮಳೆ ನೀರು ಮತ್ತು ಒರತೆ ನೀರು ಒಂದೆಡೆ ಸೇರುತ್ತಿದ್ದು ಇದೀಗ ಈ ನೀರು ಸೇರುವ ಜಾಗ ಮತ್ತು ಈ ನೀರು ಯಾವ ಕಡೆಗೆ ಹೋಗುತ್ತಿದೆ ಎಂಬುದು ಮಾತ್ರ ವಿಸ್ಮಯವಾಗಿದೆ.
ಅಜ್ಜಾವರ ಗ್ರಾಮದ ನಾರ್ಕೋಡು- ಅಜ್ಜಾವರ ರಸ್ತೆಯ ಮೇನಾಲದ ಮೇದಿನಡ್ಕ ಅರಣ್ಯ ಪ್ರದೇಶದಲ್ಲಿ ಈ ವಿಸ್ಮಯವನ್ನು ಕಾಣಬಹುದಾಗಿದೆ. ಈ ವಿಸ್ಮಯಕಾರಿ ಬಾವಿಯನ್ನು ಮಳೆಗಾಲದಲ್ಲಿ ಮಾತ್ರ ಕಾಣಬಹುದಾದ ಒಂದು ಕುತೂಹಲದ ಸ್ಥಳವಾಗಿದೆ. ಮೇದಿನಡ್ಕ ಅರಣ್ಯ ಪ್ರದೇಶದ ಸುಮಾರು 200 ಎಕ್ರೆ ಪ್ರದೇಶದ ಒರತೆ ನೀರು ಮಳೆಗಾಲದಲ್ಲಿ ಚಿಕ್ಕ ತೊರೆಯಾಗಿ ಹರಿದು ಬಂದು ಆರಣ್ಯದೊಳಗಿನ ಈ ಬಾವಿ ಆಕೃತಿಯ ಗುಂಡಿಗೆ ಸೇರುತ್ತಿದೆ. ಇದೇ ಪರಿಸರದಲ್ಲಿ ವಿಶಾಲವಾದ ಮೈದಾನದಂತಿರುವ ಜಾಗವಿದ್ದು ನಿಖರವಾಗಿ ತಿಳಿದುಬಾರದಿದ್ದರೂ ಒಂದು ರೀತಿಯ ವಿವಿಧ ಆಕೃತಿಗಳು ಗೋಚರಿಸುತ್ತಿವೆ ಒಟ್ಟಿನಲ್ಲಿ ಮೆದಿನಡ್ಕ ಪ್ರದೇಶದ ಈ ವಿಸ್ಮಯ ಬಾವಿ, ವಿಸ್ಮಯ ವಿಶಾಲ ಮೈದಾನವು ಕುತೂಹಲದಂತಿದ್ದು, ಜತೆಗೆ ಈ ಭಾಗದಲ್ಲೇ ಮಾಡ ಎಂಬಲ್ಲಿ ಬಿಲ್ಲಿನ್ನು ಬಿಟ್ಟು ನೀರು ಹೊರತೆಗೆದ ಮಾದರಿ ಮತ್ತು ಹಂದಿಯ ಅವತಾರಗಳ ಆಕೃತಿಗಳು ಇವೆ ಎಂದು ಹೇಳಲಾಗುತ್ತಿದೆ.
ಹೇಗಿದೆ ಬಾವಿ?: ಅರಣ್ಯ ಪ್ರದೇಶದೊಳಗೆ ಈ ಪುರಾತನ ರೀತಿಯ ಬಾವಿಯಿದೆ. ಅರಣ್ಯ ಪ್ರದೇಶದ ಎತ್ತರದ ಪ್ರದೇಶದಿಂದ ನೀರು ಹರಿದು ಬಂದು ಈ ಬಾವಿಗೆ ಸೇರುತ್ತಿದೆ. ಮೆದಿನಡ್ಕದ ಅರಣ್ಯ ಪ್ರದೇಶದಲ್ಲಿ ವಿವಿಧ ಭಾಗದ ನೀರು ಈ ಬಾವಿಗೆ ಸೇರುತ್ತದೆ. ಈ ಬಾವಿ ವೃತ್ತಾಕಾರದಲ್ಲಿದ್ದು, ಬಂಡೆ ಕಲ್ಲು, ಮುರ ಕಲ್ಲಿನಿಂದ ಕೆತ್ತಿ ನಿರ್ಮಿಸಿದಂತೆ ಕಾಣುತ್ತದೆ. ಸುಮಾರು 20-25 ಅಡಿ ಆಳವಿರುವ ಈ ಬಾವಿಯ ಅಡಿ ಭಾಗದಲ್ಲಿ ಸೆಳೆಯಂತಿದೆ.
ವಿಶೇಷವೆಂದರೆ ಮಳೆಗಾಲದಲ್ಲಿ ನಿರಂತರವಾಗಿ ಹರಿಯುವ ಇಷ್ಟೊಂದು ಪ್ರಮಾಣದ ನೀರು ಸೇರುತ್ತಿದ್ದರೂ, ಈ ಬಾವಿ ಮಾತ್ರ ತುಂಬುತ್ತಿಲ್ಲ. ಬಾವಿಯೊಳಗಿನಿಂದ ನೀರು ಬೇರೆಡೆಗೆ ಹರಿದು ಸಾಗುತ್ತಿದ್ದು, ಎಲ್ಲಿಗೆ ಸೇರುತ್ತದೆ ಎಂಬ ಸ್ಪಷ್ಟ ಮಾಹಿತಿ ಯಾರಲ್ಲೂ ಇಲ್ಲ. ಬಾವಿಗೆ ಸೇರುವ ನೀರು ತುದಿಯಡ್ಕ ಬೈಲು ಎಂಬಲ್ಲಿಗೆ ಸೇರುತ್ತದೆ ಎಂದು ಕೆಲವರು ತಿಳಿಸಿದರೆ, ಪಯಸ್ವಿನಿ ನದಿಗೆ ಸೇರುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಆದರೆ ಸ್ಪಷ್ಟತೆ ಇಲ್ಲ. ಬೇಸಿಗೆಯಲ್ಲಿ ಈ ಬಾವಿ ಹಾಗೂ ಸುತ್ತ ಮುತ್ತಲ ಪ್ರದೇಶ ನೀರೇ ಇಲ್ಲದೆ ಬರಡಾಗಿರುತ್ತದೆ. ಇದೀಗ ಈ ಮಾಹಿತಿಗಳು ಹೊರಜಗತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿದ್ದಂತೆ ಈ ವಿಸ್ಮಯಕಾರಿ ಬಾವಿ ಮತ್ತು ಕೆತ್ತನೆಗಳನ್ನು ವೀಕ್ಷಿಸಲು ಯುವ ಜನತೆ ಬರುತ್ತಿದ್ದು ಈ ಬಾವಿಯ ಮತ್ತು ಕೆತ್ತನೆಗಳ ಕುರಿತು ವೈಜ್ಞಾನಿಕವಾಗಿ ವಿಶೇಷ ಅಧ್ಯಯನ ಸಂಶೋಧನೆಗಳು ನಡೆದಲ್ಲಿ ಜನರ ಸಂಶಯ, ನಿಗೂಢತೆಗಳಿಗೆ ಉತ್ತರ ಸಿಗಬಹುದು ಎಂದು ರಾಜೇಶ್ ಶೆಟ್ಟಿ ಮೇನಾಲ ಹೇಳುತ್ತಾರೆ.
ಮುಂದುವರೆಯುವುದು…..