Ad Widget

“ಕಲ್ಲು ಹೃದಯವನ್ನೂ ಕರಗಿಸುವಂತಿದೆ ಶಿರೂರು-ವಯನಾಡಿನ ಭೂಕುಸಿತದ ಭೀಕರತೆ”

“ಕಲ್ಲು ಹೃದಯವನ್ನೂ ಕರಗಿಸುವಂತಿದೆ ಶಿರೂರು-ವಯನಾಡಿನ ಭೂಕುಸಿತದ ಭೀಕರತೆ”

ಭೂಕುಸಿತದ ಘಟನೆಗಳನ್ನು ನೋಡಿದಾಗ ನೆನಪಾಗುತ್ತಿದೆ ಹರಿಹರ ಪಲ್ಲತ್ತಡ್ಕ ದಲ್ಲಿ 2 ವರ್ಷಗಳ ಹಿಂದೆ ನಡೆದ ಜಲಸ್ಪೋಟ

ಮತ್ತೆಂದೂ ಎಲ್ಲಿಯೂ ಮರುಕಳಿಸದಿರಲಿ ಈ ರೀತಿಯ ಘಟನೆಗಳು…

✍️ಉಲ್ಲಾಸ್ ಕಜ್ಜೋಡಿ
ಹಿಂದೆಲ್ಲಾ ಮಳೆಗಾಲ ಬಂತೆಂದರೆ ಸಾಕು ಮನಸ್ಸಿನಲ್ಲಿ ಅದೇನೋ ಖುಷಿ-ಸಂತೋಷದ ವಾತಾವರಣವಿರುತ್ತಿತ್ತು. ವರ್ಷದ ಮೊದಲ ಮಳೆ ಭೂಮಿಗೆ ಬಿದ್ದಾಗ ನೆನೆಯುವ ಖುಷಿ ಇವೆಲ್ಲವೂ ಪ್ರತಿಯೊಬ್ಬರ ಬಾಲ್ಯದ ಅಮೂಲ್ಯ ಕ್ಷಣಗಳು. ಆದರೆ “ಸಮಯ ಕಳೆದಂತೆ ಎಲ್ಲವೂ ಬದಲಾಗುತ್ತದೆ” ಎನ್ನುವ ಮಾತಿನಂತೆ ಈಗ ಕಳೆದ ಆ ಅಮೂಲ್ಯವಾದ ಕ್ಷಣಗಳನ್ನು ನೆನೆದಾಗ “ಅದೇಕೋ ಮೊದಲೇ ಚೆನ್ನಾಗಿತ್ತು” ಎಂದೆನಿಸುತ್ತದೆ. ಏಕೆಂದರೆ ಈಗಿನ ಮಳೆಗಾಲದಲ್ಲಿ ಒಂದೆಡೆ ಮಳೆ ಪ್ರಶಾಂತವಾಗಿ ಸುರಿದು ಭೂಮಿಯನ್ನು ತಂಪಾಗಿಸಿದರೆ ಇನ್ನೊಂದೆಡೆ ಭೀಕರವಾಗಿ ಸುರಿದು ಬದುಕೇ ನಾಶವಾಗುವ ಪರಿಸ್ಥಿತಿ ಉಂಟಾಗುತ್ತದೆ.
ಈ ವರ್ಷದ ಮಳೆಗೆ ಕಳೆದ ಕೆಲ ದಿನಗಳ ಹಿಂದೆ “ಕರ್ನಾಟಕದ ಶಿರೂರು ಹಾಗೂ ಕೇರಳದ ವಯನಾಡು ಗುಡ್ಡ ಕುಸಿತ” ಮಳೆಯ ರೌದ್ರ ನರ್ತನಕ್ಕೆ ಸಾಕ್ಷಿಯಾಗಿ ನಿಂತಿವೆ. ಈ ಎರಡು ಘಟನೆಗಳ ಭೀಕರತೆಯನ್ನು ನೋಡಿದಾಗ ಮನಸ್ಸಿನಲ್ಲಿ ದುಃಖ, ನೋವು, ಭಯ ಎಲ್ಲವೂ ಉಮ್ಮಳಿಸಿ ಬರುತ್ತದೆ. ಬದುಕಿನಲ್ಲಿ ನಾಳೆಯ ಬಗ್ಗೆ ಕನಸು ಕಾಣಲೇಬಾರದು ಎಂದೆನಿಸುತ್ತದೆ. ಜೀವನದಲ್ಲಿ ನಾಳೆಯ ಬಗ್ಗೆ ನಂಬಿಕೆಯೇ ಕಳೆದುಹೋಗುತ್ತದೆ. ನಾಳೆ ನಮ್ಮ ಪರಿಸ್ಥಿತಿಯೂ ಹೀಗೆಯೇ ಆಗಬಹುದೇನೋ ಎಂಬ ಭಯ ಕಾಡುತ್ತದೆ.
ಶಿರೂರು ಗುಡ್ಡ ಕುಸಿತದ ಭೀಕರತೆಗೆ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತಿದ್ದ ಚಿಕ್ಕ ಚಿಕ್ಕ ಮಕ್ಕಳು, ಆ ಪರಿಸರದಲ್ಲಿ ವಾಸಿಸುತ್ತಿದ್ದವರು, ಜೀವನ ನಿರ್ವಹಣೆಗಾಗಿ ಹೋಟೇಲ್ ನಡೆಸುತ್ತಿದ್ದ ಕುಟುಂಬ, ತಮ್ಮ ಕುಟುಂಬದ ಜೀವನ ನಿರ್ವಹಣೆಗಾಗಿ ಮತ್ತೆ ಮನೆಗೆ ಹಿಂದಿರುಗುತ್ತೇವೆ ಎಂಬ ನಂಬಿಕೆಯಿಂದ ತಮ್ಮ ಮನೆ, ಮನೆಯವರನ್ನು ಬಿಟ್ಟು ಬಂದವರು ಸೇರಿದಂತೆ ಹಲವಾರು ಜನರು ಮಣ್ಣಿನಡಿಗೆ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಂಡರೆ ಹಲವಾರು ಜನರು ತಮ್ಮ ಮನೆಯನ್ನು ಕಳೆದುಕೊಂಡರು, ಹಲವಾರು ಕುಟುಂಬಗಳು ತಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡವು.
ಕರ್ನಾಟಕದ ಶಿರೂರಿನ ಗುಡ್ಡ ಕುಸಿತದ ಘಟನೆ ನಡೆದ ಕೆಲವೇ ದಿನಗಳಲ್ಲಿ ಕೇರಳದ ವಯನಾಡು ಎಂಬಲ್ಲಿ ಮತ್ತೊಂದು ಭೀಕರ ಭೂಕುಸಿತ ಸಂಭವಿಸಿ ನೂರಾರು ಜನರು ಮಣ್ಣಿನಡಿಗೆ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಕಣ್ಮರೆಯಾದ ಹಾಗೂ ಮಣ್ಣಿನಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡಿನ ಭೂಕುಸಿತದಲ್ಲೂ ನಾಳೆಗಳ ಬಗ್ಗೆ ಅದೆಷ್ಟೋ ಕನಸುಗಳನ್ನು ಕಂಡಿದ್ದ, ಬದುಕಿನ ಬಗ್ಗೆ ಅದೆಷ್ಟೋ ಭರವಸೆಗಳನ್ನು ಇಟ್ಟಿದ್ದ ನೂರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರೆ, ಹಲವಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಲವಾರು ಸಾಕು ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಕಲ್ಲು ಹೃದಯವನ್ನೂ ಕರಗಿಸುವಂತಿರುವ ಶಿರೂರು ಹಾಗೂ ವಯನಾಡಿನಲ್ಲಿ ಸಂಭವಿಸಿದ ಈ ಭೀಕರ ಭೂಕುಸಿತದ ಘಟನೆ ಪ್ರತಿಯೊಬ್ಬರ ಮನಸ್ಸಿಗೂ ನೋವುಂಟುಮಾಡಿದೆ. ಏಕೆಂದರೆ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿದ್ದ ಜನರು ಮಳೆಯ ರುದ್ರ ನರ್ತನಕ್ಕೆ ಬಲಿಯಾಗಿರುವುದು ಹಾಗೂ ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವುದನ್ನು ನೋಡಿದಾಗ ನಮಗೆ ಈ ಬದುಕು ಬೇಕಾ…? ಎಂದೆನಿಸುತ್ತದೆ.
ಈ ಎರಡು ಘಟನೆಗಳನ್ನು ನೋಡಿದಾಗ ಕಳೆದ 2 ವರ್ಷಗಳ ಹಿಂದೆ ನಮ್ಮೂರಿನಲ್ಲಿ ಅಂದರೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಸೇರಿದಂತೆ ಸುತ್ತಮುತ್ತಲಿನ ಬಾಳುಗೋಡು,ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಕಡಬ ತಾಲೂಕಿನ ಐನೆಕಿದು ಗ್ರಾಮಗಳಲ್ಲಿ ಸುರಿದ ಭಾರೀ ಮಳೆಗೆ ಈ ನಾಲ್ಕೈದು ಗ್ರಾಮಗಳು ಅಕ್ಷರಶಃ ನಲುಗಿ ಹೋಗಿದ್ದ ಘಟನೆ ನೆನಪಾಗುತ್ತದೆ. ಏಕೆಂದರೆ ಅಂದು ಸುರಿದ ಆ ಮಹಾಮಳೆಗೆ ಈ ಗ್ರಾಮಗಳ ಹಲವು ಕಡೆಗಳಲ್ಲಿ ಭೂಕುಸಿತಗಳು ಸಂಭವಿಸುವುದರೊಂದಿಗೆ ಹೊಳೆಗಳಲ್ಲಿ ನೀರು ಉಕ್ಕಿ ಹರಿದಿತ್ತು. ಕಡಮಕಲ್ಲು ಎಸ್ಟೇಟ್ ಭಾಗದಲ್ಲಿ ಭೂಕುಸಿತ ಸಂಭವಿಸಿ ಆಪಾರ ಪ್ರಮಾಣದ ಮಣ್ಣು ಹಾಗೂ ಮರಗಳು ನೀರಿನಲ್ಲಿ ಕೊಚ್ಚಿ ಬಂದಿದ್ದವು. ಹರಿಹರ ಪಲ್ಲತ್ತಡ್ಕ ಸೇತುವೆಯ ಕೆಳಗೆ ಮರಗಳು ಸಿಲುಕಿ ಪೇಟೆ ಜಲಾವೃತ್ತಗೊಂಡು 2 ಅಂಗಡಿಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದವು. ಹಲವು ಅಂಗಡಿಗಳಿಗೆ, ಮನೆಗಳಿಗೆ, ಕೃಷಿ ಭೂಮಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಹಲವಾರು ಕಡೆಗಳಲ್ಲಿ ಮನೆಗಳಿಗೆ, ತೋಟಗಳಿಗೆ ಸಂಪರ್ಕ ಕೊಂಡಿಯಂತಿದ್ದ ಚಿಕ್ಕಪುಟ್ಟ ಪಾಲಗಳು ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಘಟನೆ ನಡೆದು 2 ವರ್ಷಗಳಾದರೂ “ಶಿರೂರು ಹಾಗೂ ವಯನಾಡಿನ” ಭೀಕರ ಭೂಕುಸಿತದ ಘಟನೆಗಳನ್ನು ನೋಡಿದಾಗ ನಮ್ಮೂರಿನಲ್ಲಿ ನಡೆದ ಈ ಘಟನೆ ನೆನಪಾಗುತ್ತದೆ, ಮನಸ್ಸಿನಲ್ಲಿ ಭಯ ಉಂಟಾಗುತ್ತದೆ.
ಇಂತಹ ಭೂಕುಸಿತದ ಘಟನೆಗಳನ್ನು ನೋಡಿದಾಗ ನೊಂದ ಮನಸ್ಸುಗಳು ಬೇಡಿಕೊಳ್ಳುವುದೊಂದೇ “ಇನ್ನು ಮುಂದೆ ಬರುವ ಮಳೆ ಎಲ್ಲಿಯೂ ಜನಜೀವನವನ್ನು ಅಸ್ತವ್ಯಸ್ತಗೊಳಿಸದಿರಲಿ, ಯಾರ ಕಣ್ಣೀರಿಗೂ ಕಾರಣವಾಗದಿರಲಿ, ಯಾರ ಪ್ರಾಣವನ್ನೂ ಕಿತ್ತುಕೊಳ್ಳದಿರಲಿ, ನೆಮ್ಮದಿಯ ಬದುಕು ಎಲ್ಲರಿಗೂ ಸಿಗಲಿ…”

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!