ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ, ಈ ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ 1999 ಮಾರ್ಚ್ ರಂದು ಆರಂಭವಾಗಿ ಜುಲೈ 26 ರಂದು ಅಧಿಕೃತವಾಗಿ ಭಾರತದ ವಿಜಯದೊಂದಿಗೆ ಮುಕ್ತಾಯವಾಯಿತು. ಈ ಯುದ್ಧದಲ್ಲಿ ಭಾರತ ಸಶಸ್ತ್ರ ಪಡೆಗಳ 527 ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದರು. ಈ ಕಾರ್ಗಿಲ್ ಯುದ್ಧದ ಕುರುಹಾಗಿ ಕಾರ್ಗಿಲ್ ಯುದ್ಧ ಸ್ಮಾರಕ ಅಥವಾ ಡ್ರಾಸ್ ಯುದ್ಧ ಸ್ಮಾರಕವನ್ನು ಭಾರತೀಯ ಸೇನೆ ಲಡಾಕ್ ಪ್ರಾಂತ್ಯದ ಕಾರ್ಗಿಲ್ ಜಿಲ್ಲೆಯ ಕಾರ್ಗಿಲ್ ನಗರದ ಹತ್ತಿರದ ಡ್ರ್ರಾಸ್ ಎಂಬ ಪಟ್ಟಣದಲ್ಲಿ ನಿರ್ಮಿಸಿತು. ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಿಂದ 5 ಕಿಲೋ ಮೀಟರ್ ದೂರದಲ್ಲಿರುವ ಡ್ರಾಸ್ ಪಟ್ಟಣದಲ್ಲಿ ಟೈಗರ್ ಹೊಳೆ ಸಮೀಪ ಈ ಸ್ಮಾರಕ ಇದೆ. ಪ್ರತಿ ದಿನ ಸಾವಿರಾರು ಮಂದಿ ಈ ಸ್ಮಾರಕಕ್ಕೆ ಬೇಟಿ ನೀಡಿ ವೀರ ಜವಾನರ ಪ್ರಾಣತ್ಯಾಗದ ಸ್ಮಾರಕವನ್ನು ನೋಡಿ ದೇಶಕ್ಕಾಗಿ ಸಮರ್ಪಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ ಮತ್ತು ದೇಶಭಕ್ತಿಯನ್ನು ಆವಾಹನೆ ಮಾಡಿಕೊಳ್ಳುತ್ತಾರೆ. ಈ ಸ್ಮಾರಕವನ್ನು 108 ಎಂಜಿನಿಯರ್ ರೆಡಿಮೇಡ್ ತುಕಡಿ ಇವರಿಂದ 2000ನೇ ಇಸವಿಯಲ್ಲಿ ನಿರ್ಮಿಸಲಾಯಿತು. ಆ ಬಳಿಕ 2014 ರಲ್ಲಿ ಭಾರತಸೇನೆ ಸರಕಾರದ ನೆರವಿನಿಂದ ಪೂರ್ಣ ಪ್ರಮಾಣದ ಈಗಿನ ಸುಂದರ ಸ್ಮಾರಕವನ್ನು ನಿರ್ಮಿಸಲಾಯಿತು. ಪಿಂಕ್ ಸ್ಯಾಂಡ್ ಸ್ಟೋನ್‍ನಿಂದ ನಿರ್ಮಿಸಲಾದ ಈ ಸ್ಮಾರಕದಲ್ಲಿ ಹಿತ್ತಾಳೆಯ ತಟ್ಟ್ಟೆಯಲ್ಲಿ…ಯುದ್ಧದಲ್ಲಿ ಹುತಾತ್ಮರಾದ ವೀರ ಸೈನಿಕರ ಹೆಸರನ್ನು ಕೆತ್ತಲಾಗಿದೆ. ಈ ಸ್ಮಾರಕವನ್ನು ಯುದ್ಧ ನಡೆದ ಟೋಲೊರಿಂಗ್ ಹೈಟ್ಸ್, ಟೈಗರ್ ಹಿಲ್ಸ್ ಮತ್ತು 4875 ಪಾಯಿಂಟ್ (ಬಾತ್ರಾ ಟಾಪ್) ನಿಂದ ಕಾಣಬಹುದಾಗಿದೆ. ಈ 3 ಜಾಗದಲ್ಲಿ ಕಾರ್ಗಿಲ್ ಕದನ ನಡೆದಿತ್ತು. ಈ ಸ್ಮಾರಕದಲ್ಲಿ ಕ್ಯಾಪ್ಟನ್ ಮನೋಜ್ ಪಾಂಡೆ ಗ್ಯಾಲರಿ ಕೂಡಾ ಇದೆ. ಅವರಿಗೆ ಮರಣೋತ್ತರವಾಗಿ ಕಾರ್ಗಿಲ್‍ನಲ್ಲಿ ಹುತಾತ್ಮರಾದ ಕುರುಹಾಗಿ ಪರಮ ವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. 2012, ಜುಲೈ 26 ರಂದು ಪ್ಲಾಗ್ ಪೌಂಡೇಷನ್ ಆಫ್ ಇಂಡಿಯಾ ಅವರು ಸುಮಾರು 30 ಮೀಟರ್ ಎತ್ತರದ (100 ಫೀಟ್) ಮತ್ತು 15 ಕಿಲೋಗ್ರಾಮ್ ತೂಕದ ಧ್ವಜಸ್ತಂಭವನ್ನು ನಿರ್ಮಿಸಿದರು. ಅದರಲ್ಲಿ 11.4ಘಿ7.6 ಮೀಟರ್ ಉದ್ದಗಲದ ಭಾರತೀಯ ಧ್ವಜವನ್ನು ಅರಳಿಸಲಾಗಿದೆ. ಇದೊಂದು ರಾಷ್ಟ್ರೀಯ ಸ್ಮಾರಕವಾಗಿದ್ದು ವಾರ್ಷಿಕವಾಗಿ 10 ಲಕ್ಷ ಜನ ಈ ಸ್ಮಾರಕವನ್ನು ಭೇಟಿ ಮಾಡಿ ರಾಷ್ಟ್ರ ಭಕ್ತಿಯನ್ನು ಅವಾಹನೆ ಮಾಡಿಕೊಳ್ಳುತ್ತಾರೆ.
3 ಮೇ ಯಿಂದ ಜುಲೈ 26 ರವರೆಗೆ 2 ತಿಂಗಳು, ಮೂರು ವಾರ, 2 ದಿನಗಳ ಕಾಲ ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ (ಈಗಿನ ಲಡಾಕ್) ನಿಯಂತ್ರಣ ರೇಖೆಯ ಸುತ್ತ ನಡೆದ ಈ ಐತಿಹಾಸಿಕ ಯುದ್ಧದಲ್ಲಿ ಭಾರತದ 1363 ಸೈನಿಕರು ಗಾಯಗೊಂಡು 577 ಮಂದಿ ಹುತಾತ್ಮರಾದರು, ಈ ಯುದ್ಧಕ್ಕೆ
“ಆಪರೇಷನ್ ವಿಜಯ” ಎಂಬೂದಾಗಿ ಹೆಸರಿಸಿತು. ಭಾರತದ ಭೂ ಸೇನೆ, ವಾಯು ಸೇನೆಯ ನೆರವಿನಿಂದ ಪಾಪಿ ಪಾಕಿಸ್ತಾನದ ನುಸುಳು ಕೋರರನ್ನು ಹೊಸಕಿಹಾಕಿ, ಹೊರದಬ್ಬಿ ಪಾಕ್ ಆಕ್ರಮಿತ ಕಾರ್ಗಿಲ್ ಪ್ರದೇಶವನ್ನು ಮಗದೊಮ್ಮೆ ತನ್ನ ತೆಕ್ಕೆಗೆ ಸೇರಿಸಿಕೊಂಡ ಸ್ಮರಣಿಕೆ ಯುದ್ಧ ಇದಾಗಿದೆ
1971 ರ ಭಾರತ ಪಾಕ್ ಯುದ್ಧದ ಬಳಿಕ ಭಾರತ ಮತ್ತು ಪಾಕ್ ಸಂಬಂಧ ಮತ್ತಷ್ಟು ಅದಗೆಟ್ಟಿತು. ಸೋಲಿನಿಂದ ಅತಾಶವಾಗಿದ್ದ ಪಾಕಿಸ್ತಾನ ಕಾಲುಕೆರೆದು ಜಗಳವಾಡಲು ತುದಿಗಾಲಲ್ಲಿ ನಿಂತಿತ್ತು. ಏನಾದರೂ ಕುಂಟು ನೆಪಮಾಡಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇತ್ತು. 1980 ರ ಸಮಯದಲ್ಲಿ ನಿಯಂತ್ರಣ ರೇಖೆಯ ಸುತ್ತ ವ್ಯಾಪಿಸಿದ ಮಿಲಿಟರಿ ಹೊರ ಠಾಣೆಗಳ ಕಾರಣದಿಂದ ಹಲವಾರು ಬಾರಿ ಮಿಲಿಟರಿ ಚಕಮಕಿಗಳು ಭಾರತ ಪಾಕ್ ನಡುವೆ ನಡೆಯುತ್ತಲೇ ಇತ್ತು. 1990 ರ ದಶಕದಲ್ಲಿ ಪಾಕ್ ಪ್ರಚೋದಿತ ಕಾಶ್ಮೀರದ ಪ್ರತ್ಯೇಕವಾದಿ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಲೇ ಇತ್ತು. ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಮತ್ತು ಘರ್ಷಣೆಗಳು ಉಲ್ಬಣಗೊಳ್ಳುತ್ತಲೇ ಇದ್ದವು. ಅದೇ ಸಮಯದಲ್ಲಿ 1998 ರಲ್ಲಿ ಭಾರತ ಮತ್ತು ಪಾಕ್ ಪರಮಾಣು ಪರೀಕ್ಷೆ ನಡೆಸಿ ತಮ್ಮ ಮಿಲಿಟರಿ ಸಾಮಥ್ರ್ಯವನ್ನು ಹೆಚ್ಚಿಸಲು ಮತ್ತು ಜಗತ್ತಿಗೆ ಸಾಬೀತು ಪಡಿಸಿದ್ದು ಉರಿಯುವ ಬೆಂಕಿಗೆ ತುಪ್ಪ ಸವರಿದಂತಾಯಿತು.
ಭಾರತದ ಆಗಿನ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಮತ್ತು ಪಾಕ್ ನಡುವಿನ ಸಂಬಂಧ ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಮಾರ್ಚ್ ತಿಂಗಳು ಭಾರತೀಯರು ಲಾಹೋರಿಗೆ ಬಸ್ ಸಂಚಾರವನ್ನು ಆರಂಭಿಸಿದ್ದರು. ಆದರೆ ಪಾಪಿ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿತ್ತು. ಆಗಿನ ಪಾಕ್ ಪ್ರಧಾನಿ ಪರ್ವೆಜ್ ಮುಶಾರಫ್ ಒಳಗೊಳಗೆ ಕುದಿಯುತ್ತಲೇ ಇದ್ದರು. ಸ್ನೇಹಿತನ ಸೋಗಿನಲ್ಲಿ ಬೆನ್ನಿಗೆ ಚೂರಿಹಾಕಲು ಹೊಂಚುಹಾಕಿ ಪಾಕಿಸ್ತಾನ ಅವಕಾಶಕ್ಕಾಗಿ ಕಾದು ಕುಳಿತಿತ್ತು. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಶ್ಮೀರ ಸಂಘರ್ಷ ಶಾಂತಿಯುತ ಮತ್ತು ದ್ವಿಪಕ್ಷೀಯ ಪರಿಹಾರ ಒದಗಿಸುವ ಭರವಸೆಯೊಂದಿಗೆ ಫೆಬ್ರವರಿ 1999 ರಲ್ಲಿ ಎರಡೂ ದೇಶಗಳು ಲಾಹೋರ್ ಮಾಷನ್ ಸಹಿ ಹಾಕಿದರು. ಆದರೆ ಪಾಕಿಸ್ತಾನ ನಂಬಿಕೆ ದ್ರೋಹ ಮಾಡಿ ಹೊರಗಿನಿಂದ ಸ್ನೇಹಿತನಂತೆ ನಟಿಸಿ ಆಪರೇಷನ್ ಬದ್ರಿ ಎಂಬ ಹೆಸರಿನಿಂದ ತನ್ನ ಪಡೆಗಳನ್ನು ಮತ್ತು ಅರೆ ಸೇನಾ ಪಡೆಗಳನ್ನು ಭಾರತ ನಿಯಂತ್ರಣಾ ರೇಖೆಯ ಭಾಗದಲ್ಲಿ ಕಳುಹಿಸಿದ್ದರು. ನಿಧಾನವಾಗಿ ಕಾರ್ಗಿಲ್ ಪ್ರದೇ±ವನ್ನು ತನ್ನ ನಿಯಂತ್ರಣಕ್ಕೆ ಪಡೆದು ಕಾಶ್ಮೀರವನ್ನು ಕಾರ್ಗಿಲ್ ನಿಂದ ಬೇರ್ಪಡಿಸುವ ಹುನ್ನಾರ ಈ ನುಸುಳುವಿಕೆಯಲ್ಲಿತ್ತು. ಆದರೆ ಭಾರತದ ಸೈನಿಕರಿಗೆ ಇದಾವುದರ ಮಾಹಿತಿಯೇ ಇರಲಿಲ್ಲ. ಆರಂಭದಲ್ಲಿ ಒಳ ನುಸುಳುವಿಕೆಯ ಪ್ರಮಾಣ ಮತ್ತು ವ್ಯಾಪ್ತಿಯ ಬಗ್ಗೆ ಅಲ್ಪ ಜ್ಞಾನದಿಂದ ನುಸುಳುಕೋರರು ಜೀಹಾದಿ ಬಯೋತ್ಪಾದಕರು ಎಂದು ತಿಳಿದಿದ್ದರು. ಆದರೆ ನುಸುಳುಕೋರರು ಬಳಸಿದ ತಂತ್ರಜ್ಞಾನ ಆಯುಧಗಳ ಬಳಕೆ ಮತ್ತು ಪ್ರಮಾಣವನ್ನು ಕಂಡು ಇದೊಂದು ವ್ಯವಸ್ಥಿತ ಪಾಕ್ ಸೇನೆಯ ಪಿತೂರಿ ಎಂದು ಅರಿತು ತಕ್ಷಣವೇ ಭಾರತ ಸರಕಾರ 2,00,000 ಭಾರತೀಯ ಸೈನಿಕರನ್ನು ಸಜ್ಜುಗೊಳಿಸಿ ಆಪರೇಷನ್ ವಿಜಯ ಮುಖಾಂತರ ಪ್ರತಿಕ್ರಿಯಿಸಿತು ಮತ್ತೆ ಮುಂದೆ ನಡೆದದ್ದು ಇತಿಹಾಸ.
ಕಾಶ್ಮೀರದಲ್ಲಿರುವ ಕಾರ್ಗಿಲ್ ಹಿಮಾಲಯದ ಬೆಟ್ಟ ಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್ ಕಾಶ್ಮೀರದ ರಾಜಧಾನಿ ಶ್ರೀನಗರದ 705 ಕಿ.ಮೀ ದೂರದಲ್ಲಿದೆ. ಲೇಹ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ಕಾರ್ಗಿಲ್ ಮುಖಾಂತರ ಹಾದು ಹೋಗುತ್ತದೆ. ಈ ಪ್ರದೇಶದಿಂದ ಪಕ್ಕದ ಹೆದ್ದಾರಿ ಇದಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರವಾದ ಯುದ್ಧ ಭೂಮಿ ಸಿಯಾಚಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಹಿಂದ ಕಾಶ್ಮೀರ ಮತ್ತು ಕಾರ್ಗಿಲ್ ಸಂಪರ್ಕ ಕಡಿದು ಹಾಕಿದ್ದಲ್ಲಿ ಸಿಯಾಚಿನ್ ಹಿಮ ನದಿಯಿಂದ ಭಾರತ ತನ್ನ ಸೇನೆಯನ್ನು ಹಿಂಪಡೆಯುವಂತೆ ಮಾಡುತ್ತದೆ. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿವಾದಕ್ಕೆ ಹೆಚ್ಚಿನ ಒತ್ತಡ ಹಾಕಿ ಬೇಗನೆ ಪರಿಹಾರ ಮಾಡಿ ಇತ್ಯರ್ಥವಾಗುವಂತೆ ಮಾಡಬಹುದು ಎಂದು ಪಾಕ್ ಸೇನೆ ಬಲವಾಗಿ ನಂಬಿತ್ತು, ಈ ಎಲ್ಲಾ ಪೂರ್ವ ಸಿದ್ಧತೆಯೊಂದಿಗೆ, ದುರಾಲೋಚನೆಯೊಂದಿಗೆ ಪಾಕ್ ಪ್ರಾಯೋಜಿತ ಸೈನಿಕರು ನುಸುಳುಕೋರರ ವೇಷದಲ್ಲಿ ಒಳ ನುಗ್ಗಿ ಕಾರ್ಗಿಲ್ ಕದನಕ್ಕೆ ನಾಂದಿ ಹಾಡಿದರು. ಆದರೆ ಭಾರತದ ವಿವಿಧ ಸೈನಿಕರ ಮುಂದೆ ಪಾಕ್ ಸೈನಿಕರ ಆಟ ನಡೆಯಲಿಲ್ಲ ಮತ್ತೆ ದೊಣ್ಣೆ ಕೊಟ್ಟು ಪೆಟ್ಟು ತಿಂದು ಬಾಲ ಸುಟ್ಟ ಬೆಕ್ಕಿನಂತೆ ಸೋತು ಸುಣ್ಣವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡು ಇದ್ದ ಮರ್ಯಾದಿಯನ್ನು ಹರಾಜುಹಾಕಿಕೊಂಡಿತು ಎಂದರೆ ಅತಿಶಯೋಕ್ತಿಯಾಗಲಾರದು.
ಈ ಕಾರ್ಗಿಲ್ ಯುದ್ಧ ನಡೆಯಲು ಮುಖ್ಯ ಕಾರಣ ಪಾಕಿಸ್ತಾನದ ಮೋಸದ ಆಟ ಮತ್ತು ನರಿ ಬುದ್ಧಿ. ಹೊರಗೆ ಸ್ನೇಹಿತನಂತೆ ನಟಿಸಿ ಒಳಗಿನಿಂದಲೇ ಕತ್ತಿ ಮಸೆದು ಕಾಲ್ಕೆರೆದು ಜಗಳಕ್ಕೆ ಕಾರಣವಾಗಿ ಕೊನೆಗೆ ಸೋತು ಸುಣ್ಣವಾಗಿ ಇದ್ದ ಸ್ವಲ್ಪ ಮರ್ಯಾದಿಯನ್ನು ಮಣ್ಣು ಪಾಲು ಮಾಡಿಕೊಂಡಿತು. ಕಾರ್ಗಿಲ್ ಪ್ರದೇಶದ ನಿಯಂತ್ರಣ ರೇಖೆಯಲ್ಲಿ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್‍ಗೆ ಇಳಿಯತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಬಹಳ ಸವಾಲಿನ ಕೆಲಸ. ಈ ಕಾರಣದಿಂದ ಎರಡು ಭಾಗದ ಸೈನಿಕರು ಸ್ಥಳಾಂತರಗೊಳ್ಳುವುದು ವಾಡಿಕೆ. ಇದೇ ಅವಕಾಶವನ್ನು ದುರ್ಬಳಕೆಮಾಡಿ, ಮೋಸದಿಂದ ಒಳ ನುಗ್ಗಿ, ಯುದ್ಧಕ್ಕೆ ಕಾರಣವಾದ ಪಾಕ್ ಸೈನಿಕರ ದುರ್ಬುದ್ಧಿಗೆ ಹಿಡಿದ ಕೈಗನ್ನಡಿ. ಪಾಕ್ ಮೋಸದಾಟ ತಿಳಿಯದ ಭಾರತದ ಸೈನಿಕರು ಯಾವುದೇ ಸಂದೇಶ ಪಡದೆ ತಮ್ಮ ಕರ್ತವ್ಯದಲ್ಲಿ ಮಗ್ನರಾಗಿದ್ದರು. ಕೆಲವು ಕುರಿಗಾಯಿ ಜನರು ಭಾರತದ ಸೈನಿಕರಿಗೆ ವಿಷಯ ತಿಳಿಸಿದ ಬಳಿಕವಷ್ಟೇ ಸತ್ಯ ಹೊರಗೆ ಬಂತು. ವಿಚಾರ ಸತ್ಯಾಸತ್ಯತೆ ತಿಳಿಯಲು ಹೋದ ಭಾರತದ ಜನರ ಸೈನಿಕರನ್ನು ಹಿಡಿದು ಚಿತ್ರಹಿಂಸೆ ನೀಡಿ ಕೊಂದರು. ಇದನ್ನೇ ಗಂಭೀರವಾಗಿ ಪರಿಗಣಿಸಿ ಭಾರತ ತಕ್ಷಣವೇ ತನ್ನ ಸೈನ್ಯವನ್ನು ಸಜ್ಜುಗೊಳಿಸಿ ಮೇ 3 ರಂದು ಆಪರೇಷನ್ ವಿಜಯ ಆರಂಭಿಸಿತು. ಮುಂದೆ ನಡೆದದ್ದು ಭಾರತ ಸೈನಿಕರ ರೋಷವೇಷ ಮತ್ತು ಕಿಚ್ಚೆದೆಯ ಹೋರಾಟ ಭಾರತದ ಭೂ ಸೇನೆ ಪಿರವಿ, ವಾಯು ಸೇನೆಯ ವಿಂಗ್-29 ಯುದ್ಧ ವಿಮಾನಗಳ ಮುಂದೆ 5000 ಸಂಖ್ಯೆಯ ಪಾಕ್ ಸೈನಿಕರ ಆರ್ಭಟ ಜಾಸ್ತಿ ದಿನ ಸಾಗಲಿಲ್ಲ. ಆಪರೇಷನ್ ಸಫೇದ್ ಸಾಗರ ಮತ್ತು ಆಪರೇಷನ್ ತಲ್ವಾರ್ (ನೌಕಾ ಪಡೆ) ಮುಖಾಂತರ ಪಾಕಿಸ್ತಾನ ಸೇನೆಯನ್ನು ಭಾರತೀಯ ಸೇನೆ ಬಗ್ಗುಬಡಿಯಿತು. ಜುಲೈ 24 ರಂದೇ ಯುದ್ಧ ಕೊನೆಗೊಂಡು ಭಾರತ ಕಾರ್ಗಿಲ್ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆದರೆ ಪ್ರಧಾನಿ ವಾಜಪೇಯಿ ಅಧಿಕೃತವಾಗಿ ಜುಲೈ 26 ರಂದು ಯುದ್ಧ ಮುಕ್ತಾಯವನ್ನು ಘೋಷಿಸಿದರು.
ಕೊನೆ ಮಾತು
ಪಾಕ್ ಸೇನಾ ದಂಡ ನಾಯಕ ಜನರಲ್ ಪರ್ವೆಸ್ ಮುಶರಫ್ ಮಹತ್ವಾಂಕಾಂಕ್ಷೆಯ ಕಾರಣದಿಂದಾಗಿ ಈಗಿನ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ಗೊತ್ತಿಲ್ಲದೆ ಆರಂಭವಾಗಿ ಈ ಕಾರ್ಗಿಲ್ ಕದನ ಸಮುದ್ರ ಮಟ್ಟದಿಂದ 18000 ಅಡಿ ಎತ್ತರದಲ್ಲಿ ನಡೆಯಿತು. ಪೂರ್ಣಪ್ರಮಾಣದ ಅಗ್ನಿ ಪರೀಕ್ಷೆ ನಡೆಸಿದ ಎರಡೂ ರಾಷ್ಟ್ರಗಳ ನಡುವೆ ನಡೆದ ಈ ಯುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರಿ ಸದ್ದು ಮಾಡಿತು. ಅತೀ ದುರ್ಗಮವಾದ ಕಡಿದಾದ ಪ್ರದೇಶ ಶ್ರೇಣಿ ಮತ್ತು ಮೈನಸ್‍ಗೂ ಕೆಳಗಿಳಿದ ಮತ್ತು ಪದೇ ಪದೇ ಬದಲಾಗುವ ವಾತವರಣದಲ್ಲಿ ನಡೆದ ಈ ಕದನದಲ್ಲಿ ಭಾರದ ಸೈನಿಕರು ಕೆಚ್ಚೆದೆಯಿಂದ ಹೋರಾಡಿದರು. ಭಾರತದ 500ಕ್ಕೂ ಹೆಚ್ಚು ಸೈನಿಕರು ಮರಣ ಹೊಂದಿದರು ಮತ್ತು ಪಾಕ್ ನ 700ಕ್ಕೂ ಹೆಚ್ಚು ಸೈನಿಕರು ಮಡಿದರು. ಸಾವಿರಾರು ಮಂದಿ ಪಾಕ್ ಸೈನಿಕರು ಯುದ್ಧ ಕೈದಿಗಳಾಗಿ ಸೆರೆ ಸಿಕ್ಕರು. ಆದರೆ ಪಾಕ್ ರೀತಿಯಂತೆ ಅಮಾನುಶವಾಗಿ ಚಿತ್ರಹಿಂಸೆ ನೀಡದೆ ಯುದ್ಧದ ರಾಜಧರ್ಮವನ್ನು ಪಾಲಿಸಿತು. ಈ ಯುದ್ಧದಲ್ಲಿ ಬಲಿದಾನ ಗೈದ ನಾಯಕರಿಗೆ ಸೇನೆಯ ಪರಮೋಚ್ಚ ಪ್ರಶಸ್ತಿ ಪರಮ ವೀರ ಚಕ್ರವನ್ನು ರೈಫಲ್ ಮ್ಯಾನ್ ಸಂಜಯ್ ಕುಮಾರ್ ಗ್ರೆನೇಡಿಯಲ್ ಯುಗೇಂದ್ರ ಸಿಂಗ್ ಯಾದವ್, ಕ್ಯಾ. ಮನೋಜ್ ಕುಮಾರ್ ಪಾಂಡೇ ಮತ್ತು ಕ್ಯಾ. ವಿಕ್ರಮ್ ಬಾತ್ರ ಅವರಿಗೆ ನೀಡಲಾಗಿದೆ. ಈ ವರ್ಷ 2024 ರ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸದ 24ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಹುತಾತ್ಮರಾದ ಎಲ್ಲಾ ಸೈನಿಕರಿಗೆ ನಮಿಸುತ್ತಾ ನಾವೆಲ್ಲರೂ ನಾವು ದೇಶಕ್ಕೆ ನಮ್ಮಿಂದಾದ ಸೇವೆ ಸಲ್ಲಿಸೋಣ ಎಂದು ಶಪಥ ಮಾಡೋಣ. ಅದುವೇ ನಾವು ಈ ಹುತಾತ್ಮ ಸೈನಿಕರಿಗೆ ಮತ್ತು ದೇಶಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಾಗಲಾರದು.
ಬರಹ : ಡಾ.ಮುರಲೀ ಮೋಹನ್ ಚೂಂತಾರು