✍️ರವೂಫ್ ಪೈಂಬೆಚ್ಚಾಲ್
ಮಳೆರಾಯ ಹೇಳುತ್ತಾನೆ
ಅಡೆತಡೆ ಇಲ್ಲದೆ
ಹಿಂದೆಯೂ ನಾನು ಬಹಳಷ್ಟು ಸುರಿದಿದ್ದೆ.
ಇಂದು ನೀವು ನನ್ನ ದಾರಿಗೆ
ಅಡ್ಡವಾಗಿದ್ದೀರಿ.
ನಾ ಹೇಗೆ ಚಲಿಸಲಿ.
ನದಿ ಹೇಳುತ್ತಿದೆ
ಹಿಂದೆಯೂ ನಾನು
ತುಂಬಿ ಹರಿಯುತ್ತಿದ್ದೆ.
ಇಂದು ನೀವು ನನ್ನ ಒಡಲನ್ನು
ಕಟ್ಟಿಹಾಕಿದಿರಿ.
ನಾ ಹೇಗೆ ಹರಿಯಲಿ?
ಭೂಮಿತಾಯಿ ಹೇಳುತ್ತಾಳೆ
ಹಿಂದೆ ನಾನು ಬಹಳಷ್ಟು ನೀರ
ಹೀರುತ್ತಿದ್ದೆ.
ಇಂದು ನೀವು ನನ್ನ ಬಾಯಿಗೆ
ಕಾಂಕ್ರೀಟ್ ಹಾಕಿ ಮುಚ್ಚಿದಿರಿ
ನಾನು ನೀರು ಸಂಗ್ರಹಿಸುತ್ತಿದ್ದ
ಗದ್ದೆ,ಕೆರೆಗಳನ್ನೆಲ್ಲಾ ಮಣ್ಣುಹಾಕಿ
ಸಮತಟ್ಟು ಮಾಡಿದ್ದೀರಿ.
ನಾನೇನು ಮಾಡಲಿ.
ಪರ್ವತ ಹೇಳುತ್ತಿದೆ
ನಾನು ಯಾವುದೇ ಪ್ರಳಯಕ್ಕೂ ಜಗ್ಗದೆ,ಬೀಳದೆ ಗಟ್ಟಿಯಾಗಿ ನಿಂತಿದ್ದೆ.
ಇಂದು ನೀವು ನನ್ನ ಕಾಲುಗಳನ್ನು ತುಂಡರಿಸಿದ್ದೀರಿ.
ನಾ ಹೇಗೆ ನಿಲ್ಲಲಿ.
ಮಳೆರಾಯ ಇಂದು ಕೇಳುತ್ತಿದ್ದಾನೆ
ಒತ್ತುವರಿಯಾದ ನದಿ,ತೊರೆಗಳನ್ನೆಲ್ಲಾ ಬಿಟ್ಟುಕೊಡುವಿರಾ?
ನದಿಯೂ ಕೇಳುತ್ತಿದೆ
ನನಗೆ ಹಾಯಾಗಿ ಹರಿಯಲು ದಾರಿ ಮಾಡಿಕೊಡುವಿರಾ?
ಭೂಮಿತಾಯಿಯೂ ಕೇಳುತ್ತಿದ್ದಾಳೆ ನಾನು ನೀರು ಸಂಗ್ರಹಿಸುತ್ತಿದ್ದ
ನನ್ನ ಗದ್ದೆ, ಕೆರೆಗಳನ್ನೆಲ್ಲಾ ಮತ್ತೆ
ನನಗೆ ಹಿಂದಿರುಗಿಸುವಿರಾ?
ಪರ್ವತವೂ ಕೇಳುತ್ತಿದೆ
ಇನ್ನಾದರೂ ನನ್ನ ಕಾಲು ತುಂಡರಿಸುವುದನ್ನು
ನಿಲ್ಲಿಸುವಿರೇ?
ನಾನು ಒಂದು ಕಾಲಲ್ಲಾದರೂ ನಿಲ್ಲುವೆನು.
ನಾವು ಮನುಜರು
ಪ್ರಕೃತಿಗೆ ಒಡೆಯರಲ್ಲ,
ಕಾವಲುಗಾರರಷ್ಟೆ.
ಪ್ರಕೃತಿಯ ಬಗ್ಗೆ ನಾವು ಅರಿಯದಿದ್ದರೆ, ತನ್ನ ವಿಕೋಪದ ಮೂಲಕ ಪ್ರಕೃತಿ ಏನೆಂದು ಅದು ತೋರಿಸಿಕೊಡುತ್ತಲೇ ಇರುತ್ತದೆ.