Ad Widget

ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಜಲಪಾತಗಳ ಬಳಿ ಹುಚ್ಚಾಟ ಮಾಡದಿರಿ…



ಒಂದು ಕ್ಷಣದ ಖುಷಿಗಾಗಿ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರಿ…

ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಚರಾಚರಗಳ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುವ ಮಳೆಯಲ್ಲಿಯೇ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿದ್ದೇವೆ.
ಹೌದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಮನೆಗಳು, ಕಟ್ಟಡಗಳು ಹಾಗೂ ವಾಹನಗಳ ಮೇಲೆ ಗುಡ್ಡಗಳು ಜರಿದು ಜನರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಈ ರೀತಿ ಪ್ರಾಕೃತಿಕ ವಿಕೋಪದಿಂದ ಉಂಟಾಗುತ್ತಿರುವ ಸಾವುಗಳು ಒಂದೆಡೆಯಾದರೆ ಸೋಷಿಯಲ್ ಮೀಡಿಯಾ ಲೈಕು, ಶೇರುಗಳ ಹುಚ್ಚಾಟದಲ್ಲಿ ಹಾಗೂ ಪ್ರವಾಸದ ಹೆಸರಿನಲ್ಲಿ ತುಂಬಿ ಹರಿಯುತ್ತಿರುವ ನದಿ-ಜಲಪಾತಗಳಲ್ಲಿ ಮೋಜು-ಮಸ್ತಿ ಮಾಡುತ್ತಾ ಒಂದು ಕ್ಷಣದ ಖುಷಿಗಾಗಿ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿರುವವರು ಇನ್ನೊಂದೆಡೆ.
ಈ ಭೂಮಿಯಲ್ಲಿ ಯಾರೂ ಶಾಶ್ವತವಲ್ಲ, ಸಾವು ಯಾವತ್ತೂ ಹೇಳಿ ಕೇಳಿ ಬರುವುದಿಲ್ಲ. ಕಾಲನ ಕರೆ ಬಂದಾಗ ಪ್ರತಿಯೊಬ್ಬರೂ ಈ ಭೂಮಿಯನ್ನು ಬಿಟ್ಟು ಹೋಗಲೇಬೇಕು. ಆದ್ದರಿಂದ ಬದುಕಿರುವಷ್ಟು ದಿನ ಖುಷಿಯಿಂದ ಬದುಕುವುದು ಬಿಟ್ಟು ಒಂದು ಕ್ಷಣದ ಖುಷಿಗಾಗಿ ತುಂಬಿ ಹರಿಯುತ್ತಿರುವ ನದಿ-ಜಲಪಾತಗಳ ಬಳಿ ಅಪಾಯವಿದೆ ಎಂದು ತಿಳಿದಿದ್ದರೂ ಕೂಡ ಕೆಲವು ಜನರು ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿರುವುದು ಎಷ್ಟು ಸರಿ…? ಜೋರಾಗಿ ಮಳೆ ಸುರಿಯುತ್ತಿರುವಾಗ ನದಿ-ಹಳ್ಳ, ಜಲಪಾತಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುತ್ತವೆ ಎಂದು ತಿಳಿದಿದ್ದರೂ ಕೂಡ ಪ್ರಾಣ ಕಳೆದುಕೊಳ್ಳುವ ಮಟ್ಟಿಗೆ ಹುಚ್ಚಾಟ ಮಾಡುವುದಾದರೂ ಏಕೆ…? ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುವುದಾದರೂ ಏಕೆ…?
ನಾವೆಲ್ಲರೂ ಕೂಡ ಮನೆಯಿಂದ ಹೊರಗೆ ಹೊರಟಾಗ ಮತ್ತೆ ಮನೆ ಸೇರುತ್ತೇವೆ ಎನ್ನುವ ನಂಬಿಕೆಯಿಂದಲೇ ಹೊರಡುತ್ತೇವೆ. ಕೆಲವೊಮ್ಮೆ ನಮ್ಮ ಗ್ರಹಚಾರ ಕೆಟ್ಟಾಗ ನಮಗೆ ಏನಾದರೂ ಅಪಾಯ ಸಂಭವಿಸಬಹುದು. ಆದರೆ ಯಾರೂ ಕೂಡ ತಿಳಿದೂ ತಿಳಿದೂ ಅಪಾಯವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವುದಿಲ್ಲ, ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುವುದಿಲ್ಲ. ಮಳೆಗಾಲದ ಸಂದರ್ಭದಲ್ಲಿ ಒಂದು ಸ್ಥಳದಲ್ಲಿ ನೀರಿನ ಹರಿವು ಹೆಚ್ಚಿದೆ ಎಂದು ತಿಳಿದಿದ್ದರೂ ಕೂಡ ನಾವು ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದೇವೆ ಎಂದರೆ ಅದು ಹುಚ್ಚಾಟವಲ್ಲದೇ ಮತ್ತೇನೂ ಅಲ್ಲ…
ತುಂಬಿ ಹರಿಯುತ್ತಿರುವ ನದಿ, ಜಲಪಾತಗಳಂಥಹ ಅಪಾಯಕಾರಿ ಸ್ಥಳಗಳಲ್ಲಿ ಮೋಜು-ಮಸ್ತಿ ಅಥವಾ ಸೋಷಿಯಲ್ ಮೀಡಿಯಾ ಲೈಕು, ಶೇರು ಗಳಿಗೋಸ್ಕರ ವಿಡಿಯೋಗಳನ್ನು ಮಾಡುವ ಮುಂಚೆ ಒಂದು ಮಾತು ನೆನಪಿರಲಿ “ನೀವು ಮನೆಯಿಂದ ಹೊರಗೆ ಹೊರಟರೆ ಮತ್ತೆ ನೀವು ಮನೆ ಸೇರುವವರೆಗೂ ನಿಮ್ಮ ಮನೆಯವರು ನಿಮ್ಮ ಬರುವಿಕೆಗಾಗಿ ಕಾಯುತ್ತಿರುತ್ತಾರೆ, ಒಂದು ವೇಳೆ ನಿಮ್ಮ ಜೀವಕ್ಕೆ ಏನಾದರೂ ತೊಂದರೆ ಆದರೆ ಅವರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.” ಆದ್ದರಿಂದ ನಿಮಗಾಗಿ ಅಲ್ಲದಿದ್ದರೂ ನಿಮ್ಮವರಿಗಾಗಿ ಎಚ್ಚರದಿಂದಿರಿ. ಈ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಜಲಪಾತಗಳಂಥಹ ಅಪಾಯಕಾರಿ ಸ್ಥಳಗಳಿಗೆ ಹೋಗದಿರಿ, ಒಂದು ಕ್ಷಣದ ಖುಷಿಗಾಗಿ ನಿಮ್ಮ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರಿ…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!