
ಗುತ್ತಿಗಾರು ಗ್ರಾಮದ ವಳಲಂಬೆ ಮಣಿಯಾನ ಪುರಾಳಬದಿ ಶ್ರೀ ಶಂಖಚೂಡ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಜೂ.20 ರಂದು ಶಶಿಧರನ್ ಮಾಂಗಾಡು ದೈವಜ್ಞರು ಮತ್ತು ನೀಲೇಶ್ವರ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾಚಿಂತನೆ ನಡೆಯಿತು. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಜೂ.26 ರಂದು ಬೆಳಿಗ್ಗೆ ಸರ್ಪಸಂಸ್ಕಾರ ನಡೆಯಲಿದೆ. ಜೂ.29. ರಂದು ಬೆಳಿಗ್ಗೆ ಗಣಹೋಮ,ಶಾಂತಿ ಹೋಮ, ಆಶ್ಲೇಷ ಬಲಿ, ಅಷ್ಟ ನಾಗ ಸಮಾರಾಧನೆ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಕ್ಷೇತ್ರದ ಹಿನ್ನೆಲೆ :
ಸಿರಿ ಸೀಮೆ ಕಂದ್ರಪ್ಪಾಡಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿದೆ. ತುಳುನಾಡಿನಲ್ಲಿ ನಾಗಾರಾಧನೆ ರೈತಾಪಿ ಜನವರ್ಗದಲ್ಲಿ ಬದುಕಿನ ಅವಿಭಾಜ್ಯ ಅಂಶವಾಗಿ ಅನಾದಿಕಾಲದಿಂದಲೂ ಅತ್ಯಂತ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರಲಾಗಿದೆ. ಅದರಲ್ಲೂ ಜಿಲ್ಲೆಯ ಈ ಭಾಗದಲ್ಲಿರುವ ವಳಲಂಬೆ, ಯೇನೆಕಲ್ಲು, ಕುಕ್ಕೇ ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಧಾನ ಧಾರ್ಮಿಕ ಕ್ಷೇತ್ರಗಳಾಗಿವೆ. ವಳಲಂಬೆಯ ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರ, ಪೂರಾಳಬದಿ (ಮಣಿಯಾನ) ಮತ್ತು ಕಂದ್ರಪ್ಪಾಡಿಯ ಪುರುಷದೈವ ಸಾನಿಧ್ಯಗಳು ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುವುದಾಗಿ ತಿಳಿದುಬರುತ್ತದೆ.
ಪೂರಾಳಬದಿ – ಸ್ಥಳ ಮಹಿಮೆ :
ಪೂರಾಳಬದಿಯು ಉದ್ಭವ ನಾಗಲಿಂಗ ನೆಲೆಯಾಗಿರುವ ಕ್ಷೇತ್ರವಾಗಿದ್ದು ಇದು ವಳಲಂಬೆ ಸಮೀಪದ ಮಣಿಯಾನ ಪ್ರದೇಶದಲ್ಲಿದೆ. ಋಷಿಮುನಿಗಳಿಂದ ಅಭಿಷೇಕ ನಡೆಯುತ್ತಿದ್ದು ಹಿಂದೊಮ್ಮೆ ಉಚ್ಚಾಯ ಸ್ಥಿತಿಯಲ್ಲಿದ್ದು ಕ್ರಮೇಣ ಚೈತನ್ಯ ಕ್ಷೇತ್ರವಾದರೂ ವಿಶೇಷ ಕಾರಣಿಕದ ಸ್ಥಳವಾಗಿಯೇ ಉಳಿದುಕೊಂಡಿದೆ. ಈ ಹಿನ್ನೆಲೆಯ ಕಾಲ ಸಮಯದಲ್ಲಿ ಕುಮಾರಧಾರ ಎಂಬಲ್ಲಿ ಉದ್ಭವಗೊಂಡಿರುವ ಶಂಖಪಾಲ ಎಂಬ ಶಂಖಚೂಡನು ಕಂದ್ರಪ್ಪಾಡಿಯ ಶ್ರೀ ಪುರುಷದೈವ-ರಾಜ್ಯದೈವಗಳ ಸನ್ನಿಧಿಗೆ ಬಂದಾಗ ಅಲ್ಲಿ ರಕ್ತಮುಖೇನ ದುರ್ನಿಮಿತ್ತಗಳು ಸಂಭವಿಸಿದಾಗ ಇದೇ ಪೂರಾಳಬದಿಗೆ ಬಂದು ನೆಲೆನಿಂತನು. ಕಾಲಾಂತರದಲ್ಲಿ ಗುಹಾಮಾರ್ಗವಾಗಿ ವಳಲಂಬೆಗೆ ಬಂದು ಹುತ್ತದಲ್ಲಿ ನೆಲೆಯಾದನು. ಅದೇ ಮುಂದೆ ಚೈತನ್ಯ ಶಕ್ತಿಯಾಗಿ ಬೆಳಗಿ ಆರಾಧನೆಗೆ ಒಳಗಾಯಿತು. ಬಳಿಕ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರವಾಗಿ ಬೆಳೆಯಿತು.
ಪ್ರಕೃತ ಸನ್ನಿವೇಶ :
ಇದೀಗ ಮಣಿಯಾನ ಮನೆ ತರವಾಡಿನ ಶ್ರೀ ಮಣಿಯಾನ ಪುರುಷೋತ್ತಮರಿಗೆ ಅನುವಂಶೀಯ ಆಸ್ತಿಯಾಗಿ ಸ್ವಾಧೀನಕ್ಕೆ ಬಂದ ಈ ಪೂರಾಳಬದಿ ಸನ್ನಿಧಿಯಲ್ಲಿ ಶಂಖಪಾಲ ಶಕ್ತಿಯ ಆರಾಧನೆ ನಡೆಯುತ್ತದೆ. ಈ ಹಿಂದೆ ಸದ್ರಿ ಸಾನಿಧ್ಯದ ಪೂರ್ವದಿಕ್ಕಿನಲ್ಲಿ ಒಂದು ಅಶ್ವತ್ಥ ಕಟ್ಟೆಯಿದ್ದು ಇಲ್ಲಿ ಸತ್ಯಪ್ರಮಾಣ ಕಾರ್ಯ ನಡೆಯುತ್ತಿತ್ತು. ಆರಾಧನೆಯ ಭಾಗವಾಗಿ 8 ಶಿಲೆಗಳನ್ನಿಟ್ಟು ಗೌಡ ಪೂಜಾರಿಗಳು ಕೊಡಿ ಬಾಳೆಲೆಯಲ್ಲಿ ಅವಲಕ್ಕಿ, ಹಸಿ ಬಾಳೆಕಾಯಿ, ತೆಂಗಿನಕಾಯಿ ಹೋಳು ಬಡಿಸಿ ನೈವೇದ್ಯ ಕೊಡುವ ಸಂಪ್ರದಾಯವಿದೆ.
ಕಂದ್ರಪ್ಪಾಡಿ ಜಾತ್ರೆಗೆ ಆರಂಭದ ಪ್ರಥಮ ಕಾರ್ಯವಾಗಿ ಪೂಜಾರಿ ಮೊಕ್ತೇಸರರಾದಿಯಾಗಿ ಸಂಬಂಧಿಸಿದ ಎಲ್ಲರೂ ವಳಲಂಬೆ ದೇವಾಲಯದಲ್ಲಿ ತೀರ್ಥಸ್ನಾನಕಲಶ ಮಿಂದು ಪೂರಾಳ ಕ್ಷೇತ್ರಕ್ಕೆ ಬಂದು ತೆಂಗಿನಕಾಯಿಯನ್ನು ಅಯ್ಯಂಗಾಯಿ ಮಾಡಿ ಶಂಖಪಾಲನನ್ನು ಪ್ರಾರ್ಥಿಸಿ ಆಶೀರ್ವಾದ ಪಡೆದುಕೊಳ್ಳಲಾಗುತ್ತದೆ. ವಳಲಂಬೆಯ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಕಂದ್ರಪ್ಪಾಡಿಯಿಂದ ದೈವಗಳ ಬಾಳು ಭಂಡಾರ ಸಮೇತ ಪೂರಾಳಕ್ಷೇತ್ರಕ್ಕೆ ಭೇಟಿ ನೀಡಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಮಣಿಯಾನ ಮನೆಯ ಕುಟುಂಬಸ್ಥರಿಂದ ಅಲ್ಲಿ ಸ್ಥಾಪಿಸಲಾಗಿರುವ ಎಂಟು ಕಲ್ಲುಗಳಿಗೆ ನೈವೇದ್ಯ ಸಮರ್ಪಣೆ ಮಾಡಲಾಗುತ್ತಿದೆ.
ಚೈತನ್ಯ ಸ್ವರೂಪಿ ನಾಗಲಿಂಗ ಸಾನಿಧ್ಯವು ಅಜೀರ್ಣವಸ್ಥೆಯಲ್ಲಿರುವುದರಿಂದ ಮುಂದೆ ಜೀರ್ಣೋದ್ಧಾರ ಕಾರ್ಯ ಆಗಬೇಕೆಂಬುದು ಈ ಹಿಂದೆ ಕೈಗೊಳ್ಳಲಾಗಿದ್ದ ಅಷ್ಟಮಂಗಳ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿರುತ್ತದೆ. ಅದರಂತೆ ಬಾಲಾಲಯ ನಿರ್ಮಾಣ ವಿಗ್ರಹಾದಿಯಾಗಿ ವಾಸ್ತುರಚನೆ, ಶುದ್ದೀಕರಣ ಕ್ರಿಯಾ ವಿಧಿಗಳು, ಕೃಷ್ಣಶಿಲೆಯ ನಾಗಬಿಂಬಗಳ ರಚನೆ, ಎಂಟು ಪದ್ಧಶಿಲೆಗಳ ಸ್ಥಾಪನೆ, ನಾಳಿಕೇರ ಶಿಲೆ ಸ್ಥಾಪನೆ, ಅಶ್ವತ್ಥ ಕಟ್ಟೆ ನಿರ್ಮಾಣ, ಸತ್ಯ ಪ್ರಮಾಣ ಕಲ್ಲು ನಿರ್ಮಾಣ. ತೀರ್ಥಬಾವಿ ನಿರ್ಮಾಣ, ಆವರಣ ಗೋಡೆಗಳ ನಿರ್ಮಾಣ. ನಂತರದಲ್ಲಿ ತಂತ್ರಿವರ್ಯರ ಸಲಹೆಯಂತೆ ಪ್ರಸಾದ ಶುದ್ಧಿ, ಬಿಂಬ ಶುದ್ದಿ, ವಾಸ್ತು ಬಲಿ, ರಾಕ್ಷೆಘ್ನ ಹೋಮ, ಗಣಪತಿ ಹೋಮ, ಸುದರ್ಶನ ಹೋಮ ಅಲ್ಲದೇ ವಿವಿಧ ರೀತಿಯ ಸ್ಥಳ ಬಾಧೆಗಳನ್ನು ಉಚ್ಚಾಟನೆ ಮಾಡಿದ ಬಳಿಕ ದೈವಜ್ಞರ ನಿರ್ದೇಶನದ ಪ್ರಕಾರ ಶ್ರೀ ಶಂಖಪಾಲನ ಪ್ರತಿಷ್ಠೆ ಮಾಡಬೇಕಾಗಿದೆ.
ಪೂರಾಳಬದಿಯ ಶ್ರೀ ಕ್ಷೇತ್ರದ ಸಮಗ್ರ ಜೀಣೋದ್ಧಾರ ಕಾರ್ಯವು ಮಣಿಯಾನ ಮನೆ ಕುಟುಂಬಸ್ಥರೊಡಗೂಡಿ ಊರ ಪರವೂರ ಹತ್ತು ಸಮಸ್ತರ ಸರ್ವ ಸಹಕಾರದೊಂದಿಗೆ ನೆರವೇರಿಸಿದಲ್ಲಿ ಎಲ್ಲಾ ವಿಧದ ಇಷ್ಟಾರ್ಥಸಿದ್ದಿ, ಸಕಲ ಸಂಪತ್ತು, ಐಶ್ವರ್ಯ ಭಾಗ್ಯ ಲಭಿಸುವುದಾಗಿ ತಿಳಿದುಬಂದಿರುತ್ತದೆ.