

2 ವರ್ಷಗಳಲ್ಲಿ 200ಕ್ಕೂ ಅಧಿಕ ಜನರಿಂದ ಕೇಶದಾನ ಹಾಗೂ ನೇತ್ರದಾನದ ಸಂಕಲ್ಪ
ತಡರಾತ್ರಿ ಕರೆಮಾಡಿದರೂ ರಕ್ತದ ವ್ಯವಸ್ಥೆ, ಇಲ್ಲಿಯವರೆಗೆ ಸಾವಿರಾರು ಯುನಿಟ್ ರಕ್ತದ ಪೂರೈಕೆ
ಸುಳ್ಯದಲ್ಲಿ ಕಳೆದ 9 ವರ್ಷಗಳ ಹಿಂದೆ ಪ್ರಾರಂಭಗೊಂಡ ಸಮಾಜಸೇವಾ ಸಂಸ್ಥೆಯೊಂದು “ಅಳಿಯುವ ಮುನ್ನ ಒಂದಿಷ್ಟು ಅಳಿಲಸೇವೆ” ಎನ್ನುವ ಧ್ಯೇಯವಾಕ್ಯದೊಂದಿಗೆ ರಕ್ತದಾನ, ನೇತ್ರದಾನ ಹಾಗೂ ಕೇಶದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ರಕ್ತದಾನಿಗಳನ್ನು ಕೂಡಿಸಿಕೊಂಡು ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುತ್ತಿದ್ದು, ನೇತ್ರದಾನದ ಸಂಕಲ್ಪ ಕೈಕೊಳ್ಳುವವರಿಗೆ ನೆರವಾಗುವುದರೊಂದಿಗೆ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಲಿಚ್ಛಿಸುವವರಿಗೂ ನೆರವಾಗುತ್ತಿದೆ.
ಸಣ್ಣ ಉದ್ಯಮಿ ಹಾಗೂ ಸಾಹಿತಿಯೂ ಆಗಿರುವ ಉದಯಭಾಸ್ಕರ್ ಸುಳ್ಯ ಅವರು ತನ್ನ ಸ್ನೇಹಿತರನ್ನು ಜೊತೆಗೂಡಿಸಿಕೊಂಡು 2015ರಲ್ಲಿ “ರಕ್ತದಾನಿಗಳ ಬಳಗ ಸುಳ್ಯ” ಎನ್ನುವ ಹೆಸರಿನಲ್ಲಿ ರಚಿಸಿದ ವಾಟ್ಸ್ ಆ್ಯಪ್ ಗ್ರೂಪ್ 2021ರವರೆಗೆ ರಕ್ತದಾನದ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿತ್ತು. ಉದಯಭಾಸ್ಕರ್ ಅವರು ಹೇಳುವಂತೆ ನಂತರದ ದಿನಗಳಲ್ಲಿ ರಕ್ತದಾನದ ಸೇವೆಯ ನಡುವೆ ಅನೇಕರು ನೇತ್ರದಾನ ಹಾಗೂ ಕೇಶದಾನದ ಬಗ್ಗೆ ವಿಚಾರಿಸುತ್ತಿದ್ದರು. ಹಾಗಾಗಿ ನೇತ್ರದಾನ ಹಾಗೂ ಕೇಶದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2022ರಿಂದ ರಕ್ತದಾನದ ಜೊತೆಗೆ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಲಿಚ್ಛಿಸುವವರಿಗಾಗಿ ಕೂದಲುದಾನ ಅಭಿಯಾನ ಹಾಗೂ ಮರಣಾನಂತರ ನೇತ್ರದಾನ ಮಾಡಲಿಚ್ಛಿಸುವವರಿಗಾಗಿ ನೇತ್ರದಾನ ಅಭಿಯಾನವನ್ನು ಅಧಿಕೃತ ನೇತ್ರಬ್ಯಾಂಕ್ ನ ಸಹಯೋಗದೊಂದಿಗೆ ಜೋಡಿಸಿಕೊಳ್ಳಲಾಯಿತು. ನಂತರ ಉದಯಭಾಸ್ಕರ್ ಅವರು ಈ ಸಂಸ್ಥೆಗೆ “ಅಮೃತಗಂಗಾ ಸಮಾಜಸೇವಾ ಸಂಸ್ಥೆ” ಎಂದು ಮರುನಾಮಕರಣ ಮಾಡಿ “ಅಮೃತಬಿಂದು(ರಕ್ತನಿಧಿ), ಅಮೃತದೃಷ್ಟಿ(ನೇತ್ರದಾನ) ಅಭಿಯಾನ ಹಾಗೂ ಅಮೃತಕೇಶ(ಕೂದಲುದಾನ) ಅಭಿಯಾನ” ಎನ್ನುವ ಮೂರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಮಹಿಳಾ ರಕ್ತದಾನಿಗಳ ಪ್ರತ್ಯೇಕ ತಂಡವನ್ನೂ ರಚಿಸಿಕೊಂಡಿದ್ದಾರೆ. ಸುಳ್ಯ, ಪುತ್ತೂರು, ಮಂಗಳೂರಿನವರೆಗೂ ರಕ್ತದ ಅವಶ್ಯಕತೆಯಿದ್ದವರ ಕರೆಗೆ ದಿನದ 24 ಗಂಟೆಯೂ ತನ್ನ ಸಂಸ್ಥೆಯ ಮೂಲಕ ಸ್ಪಂದಿಸುವ ಉದಯಭಾಸ್ಕರ್ ಅವರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ರಕ್ತವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದ್ದು, ದಾನಿಗಳ ನೆರವಿನಿಂದ ಇಲ್ಲಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾವಿರಾರು ಯುನಿಟ್ ರಕ್ತದ ಪೂರೈಕೆ ಮಾಡಲಾಗಿದೆ.
ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ದಿನಗಳನ್ನು “ಅಮೃತಗಂಗಾ ಸಮಾಜಸೇವಾ ಸಂಸ್ಥೆ”ಯ ಜೊತೆಗೆ ಸೇರಿ ರಕ್ತದಾನ ಮಾಡುವುದು, ನೇತ್ರದಾನದ ಸಂಕಲ್ಪ ಕೈಗೊಳ್ಳುವುದು ಹಾಗೂ ಕೇಶದಾನ ಮಾಡುವ ಮೂಲಕ ಸಮಾಜಮುಖಿಯಾಗಿ ಆಚರಿಸಿಕೊಳ್ಳುತ್ತಿದ್ದು ಒಂದೊಳ್ಳೆಯ ಬೆಳವಣಿಗೆ ಎಂದು ಹೇಳಬಹುದು.
ಒಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ರಕ್ತದಾನ, ನೇತ್ರದಾನ ಹಾಗೂ ಕೇಶದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ “ಅಮೃತಗಂಗಾ ಸಮಾಜಸೇವಾ ಸಂಸ್ಥೆ”ಯ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸುತ್ತಾ ಈ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂದು ಆಶಿಸೋಣ.
✍️ಬರಹ : ಉಲ್ಲಾಸ್ ಕಜ್ಜೋಡಿ
