Ad Widget

ಆಮವಾತ ತರುವ ಗಂಟುನೋವು(ರುಮಾಟಾಯ್ಡ್ ಆಥ್ರೈಟಿಸ್)



ಶರೀರದ ಗಂಟುಗಳಲ್ಲಿ ಉರಿಯೂತ ಉಂಟುಮಾಡುವ ಒಂದು ರೋಗವೇ ರುಮಾಟಾಯ್ಡ್ ಆಥ್ರೈಟಿಸ್ ಗಂಟುಗಳಲ್ಲಿ ನೋವಿನಿಂದ ಕೂಡಿದ ಬಾವು ಕಾಣಿಸಿಕೊಂಡು, ನಿಧಾನವಾಗಿ ಎಲುಬುಗಳ ಸವಕಳಿ ಹಾಗೂ ಗಂಟುಗಳ ವೈಕಲ್ಯವನ್ನು ತರುತ್ತದೆ.

. . . . . .


ಲಕ್ಷಣಗಳು:
ಗಂಟುಗಳನ್ನು ಸ್ಪರ್ಶಿಸಿದಾಗ ನೋವು, ಗಂಟುಗಳಲ್ಲಿ ಬಿಸಿ ಏರುವುದು, ಗಂಟುಗಳು ಊದಿಕೊಳ್ಳುವುದು.
ಗಂಟುಗಳಲ್ಲಿ ಬಿಗಿತ- ಇದು ಬೆಳಿಗ್ಗೆ ಹೆಚ್ಚು. ಅಥವಾ ವಿಶ್ರಾಂತಿಯ ನಂತರ ಕೆಲಸ ಶುರು ಮಾಡುವ ಹೊತ್ತಿನಲ್ಲಿ ಜಾಸ್ತಿ.
ಸುಸ್ತು, ಆಯಾಸ
ಕೆಲವರಲ್ಲಿ ಜ್ವರ ಇರಬಹುದು, ಇಲ್ಲದೇ ಇರಬಹುದು.
ಹಸಿವೆ ಇಲ್ಲದಿರುವುದು

https://www.prasadini.com/



ಆರಂಭದಲ್ಲಿ ಸಣ್ಣ ಗಂಟುಗಳನ್ನು ಬಾಧಿಸುತ್ತದೆ. ಅದರಲ್ಲೂ ಬೆರಳುಗಳನ್ನು ಕೈಗೆ ಜೋಡಿಸುವ, ಕಾಲಿನ ಬೆರಳುಗಳನ್ನು ಪಾದಗಳಿಗೆ ಜೋಡಿಸುವ ಸಂಧಿಗಳಲ್ಲಿ ಹೆಚ್ಚು ತೊಂದರೆ ಕಾಣಿಸಿಕೊಳ್ಳುವುದು. ರೋಗ ಉಲ್ಬಣಿಸಿದಂತೆಲ್ಲ, ಮಣಿಗಂಟು, ಮಂಡಿಗಳು, ಮೊಣಕೈ, ಭುಜ, ಸೊಂಟಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ನಲುವತ್ತು ಶೇಕಡಾ ಜನರಲ್ಲಿ ಮೂತ್ರಪಿಂಡ, ಜೊಲ್ಲುಗ್ರಂಥಿಗಳು, ನರಗಳು, ಎಲುಬುಗಳ ಮಜ್ಜೆ, ಹೃದಯ, ಶ್ವಾಸಕೋಶ, ಚರ್ಮ, ಕಣ್ಣು, ರಕ್ತನಾಳಗಳು ಹಾನಿಗೋಳಗಾಗುತ್ತವೆ. ಆದುದರಿಂದ ಇದು ಕೇವಲ ಗಂಟುಗಳಿಗೆ ಮಾತ್ರ ಸೀಮಿತವಾಗಿರದೆ, ಇಡೀ ದೇಹದ ಅಂಗಗಳಿಗೆ ಪಸರಿಸುತ್ತದೆ. ಗೋಡೆ ಬಿರುಕು ಬಿಟ್ಟು ನೆಲಕ್ಕೆ ಉರುಳುವ ಕಟ್ಟಡದಂತೆ ದೇಹದ ಗತಿ.
ಯಾವುದೇ ಸಂದರ್ಭದಲ್ಲಿ ಗಂಟುಗಳಲ್ಲಿ ಕಡಿಮೆಯಾಗದ ಬಾವು ಮತ್ತು ನೋವು ಇದ್ದಾಗ ವೈದ್ಯರನ್ನು ಸಂಪರ್ಕಿಸಬೇಕು.

ಕಾರಣ:
ದೇಹದ ಕೋಶಗಳನ್ನು ರಕ್ಷಿಸಬೇಕಾದ ರೋಗನಿರೋಧಕ ವ್ಯವಸ್ಥೆಯೇ(ಇಮ್ಯೂನ್ ಸಿಸ್ಟಂ) ಕೋಶಗಳ ಮೇಲೆ ಧಾಳಿ(ಅಟ್ಯಾಕ್) ಮಾಡುವ ವಿಚಿತ್ರ ಕಾಯಿಲೆ ಇದು.

ಗಂಭೀರತೆ ಹಾಗೂ ಜಟಿಲತೆ:
ಮೂಳೆಗಳು ದುರ್ಬಲವಾಗಿ, ಸುಲಭವಾಗಿ ಮುರಿತಕ್ಕೆ ಒಳಗಾಗುವುದು. ದೇಹದ ಯಾವುದೇ ಭಾಗದಲ್ಲಿ, ವಿಶೇಷವಾಗಿ ಮೊಣಕೈಯಲ್ಲಿ ಗಂಟಿನಂತಹ ರಚನೆಗಳು ಕಾಣಿಸಿಕೊಳ್ಳಬಹುದು, ಕಣ್ಣುಗಳು ಒಣಗುವುದು, ಬಾಯಿ ಒಣಗುವುದು, ಸೂಕ್ಷ್ಮಾಣು ಸೋಂಕಿನ(ಇನ್‌ಫೆಕ್ಷನ್) ಸಾಧ್ಯತೆ ಹೆಚ್ಚುವುದರಿಂದ ಜ್ವರ ಬರುವುದು, ಕೊಬ್ಬು ಸಂಗ್ರಹವಾಗಿ ಬೊಜ್ಜು ಬರುವುದು, ಕೈಯ ಮಣಿಗಂಟಿನ ನರಗಳ ಮೇಲೆ ಒತ್ತಡ ಉಂಟಾಗಿ, ನೋವು ಹೆಚ್ಚಾಗುವುದು, ಗಂಟುಗಳ ಚಲನೆ ಕಷ್ಟವಾಗುವುದು, ಹೃದಯದ ರಕ್ತನಾಳಗಳ ಅಡಚಣೆಯಿಂದಾಗಿ ಅತಿ ಆಯಾಸ ಮತ್ತು ಹೃದಯದ ಕಾಯಿಲೆ, ರಕ್ತಹೀನತೆ, ಶ್ವಾಸಕೋಶದ ಬಾಧೆಯಿಂದ ಕೆಮ್ಮು-ದಮ್ಮು ಇತ್ಯಾದಿ.

ಪರಿಹಾರ:
ಲಕ್ಷಣಗಳು ಕಾಣಿಸಿಕೊಂಡಾಗ ವಿಶ್ರಾಂತಿ, ಲಕ್ಷಣ ಇಲ್ಲದಿದ್ದಾಗ ವ್ಯಾಯಾಮ ಮಾಡುವುದು.
ಸಂಸ್ಕರಿಸಿದ ಆಹಾರ, ಬೇಕರಿ ತಿನಿಸು, ಮಾರುಕಟ್ಟೆಯಲ್ಲಿ ಲಭ್ಯವಿರುವ, ಅಂದವಾಗಿ ಪ್ಯಾಕ್ ಮಾಡಿದ ಕೃತಕ ಬಣ್ಣ, ರುಚಿ, ಪರಿಮಳ ರಾಸಾಯನಿಕ ಸೇರಿಸಿದ ಎಲ್ಲಾ ಆಹಾರಗಳ ಸೇವನೆ ಕೂಡಲೇ ನಿಲ್ಲಿಸತಕ್ಕದ್ದು. ನಲುವತ್ತು ಸೆಕುಂಡುಗಳ ರುಚಿಗೆ ನಲುವತ್ತು ವರುಷ಼ಗಳ ಆಯುಷ್ಯ ಕಳೆದುಕೊಳ್ಳಬೇಡಿ.
ಮಾಂಸ ಸೇವನೆ ಬಿಡಬೇಕು.
ಎಣ್ಣೆಯಲ್ಲಿ ಕರಿದ ತಿಂಡಿ ಸೇವಿಸಬೇಡಿ.
ಬಿಳಿ ಅನ್ನ, ಬಿಳಿಸಕ್ಕರೆ, ರಿಫೈನ್ ಮಾಡಿದ ಎಣ್ಣೆ ತೆಗೆದುಕೊಳ್ಳಬೇಡಿ. ಕುಚ್ಚಿಲಕ್ಕಿ (ಪಾಲಿಶ್ ಮಾಡದ ಕಜೆ ಅಕ್ಕಿ) ಉತ್ತಮ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಭಜನೆ, ಪ್ರಾರ್ಥನೆ, ಜಪ ಅಳವಡಿಸಿಕೊಳ್ಳಿ. ಈ ಕಾಯಿಲೆಯಲ್ಲಿ ಮನಸ್ಸಿನ ಸ್ಥಿತಿ ತುಂಬಾ ಮುಖ್ಯ.

ಪತ್ತೆಹಚ್ಚುವುದು ಹೇಗೆ?
ರಕ್ತದಲ್ಲಿ ರುಮಾಟಾಯ್ಡ್ ಅಂಶ, ಆಂಟಿನ್ಯೂಕ್ಲಿಯರ್ ಆಂಟಿಬಾಡಿ ಟೆಸ್ಟ್, ಆಂಟಿ ಸಿ.ಸಿ.ಪಿ. ಆಂಟಿಬಾಡಿ ಟೆಸ್ಟ್ ಮಾಡುವುದರ ಮೂಲಕ ದೃಢೀಕರಿಸಬಹುದು.
ಆಯುರ್ವೇದದಲ್ಲಿ ಈ ಕಾಯಿಲೆಗೆ ಆಮವಾತ ಎಂಬ ಹೆಸರಿದೆ. ಚಿಕಿತ್ಸೆಯೂ ಇದೆ.
ಒಂದು ಗ್ಲಾಸ್ ಹಾಲಿಗೆ ಆರರಿಂದ ಎಂಟು ಬೆಳ್ಳುಳ್ಳಿಗಳನ್ನು ಜಜ್ಜಿ ಹಾಕಿ ಕುದಿಸಿ ಸೇವಿಸುವುದು.
ದಶಮೂಲ, ರಾಸ್ನಾ, ಅಮೃತಬಳ್ಳಿ, ಅಶ್ವಗಂಧಾ, ಗೋಕ್ಷಂರ ಇತ್ಯಾದಿ ಮೂಲಿಕೆಗಳನ್ನು ಕಷಾಯ ಮಾಡಿ ದಿನಕ್ಕೆ ಎರಡು ಸಲ ಎರಡು ಚಮಚ, ಖಾಲಿ ಹೊಟ್ಟೆಗೆ ಸೇವಿಸುವುದು.
ಹತ್ತು ಬಿಂದುಗಳಷ್ಟು ಹರಳೆಣ್ಣೆಯನ್ನು ರಾತ್ರೆ ಹಾಲಿನೊಂದಿಗೆ ಮಲಗುವ ಮುನ್ನ ಸೇವಿಸುವುದು.
ಉಪವಾಸ
ಬೆವರಿಳಿಸುವ ಚಿಕಿತ್ಸೆ(ಸ್ವೇದನ)
ಪಂಚಕರ್ಮ ಚಿಕಿತ್ಸೆಯಲ್ಲಿ ವಮನ, ವಿರೇಚನ, ಬಸ್ತಿಕರ್ಮಗಳನ್ನು ರೋಗಿ ಮತ್ತು ರೋಗದ ಅವಸ್ಥೆಗೆ ಅನುಸಾರ ನಿರ್ಧರಿಸಿ ಆಯುರ್ವೇದ ರೀತಿಯ ಚಿಕಿತ್ಸೆ ನಮ್ಮಲ್ಲಿ ನೀಡುತ್ತೇವೆ.

ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ. ಬಿ.ಎ.ಎಂ.ಎಸ್., ಎಂ.ಎಸ್.(ಆಯು)
ಆಡಳಿತ ನಿರ್ದೇಶಕರು ಹಾಗೂ ಆಯುರ್ವೇದ ತಜ್ಞ ವೈದ್ಯರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು ಗ್ರಾಮ ಪಣಚಾಯತ್ ಸಮೀಪ, ಪಾದೆ, ನರಿಮೊಗರು, ಪುತ್ತೂರು.
ಮೊಬೈಲ್: 9740545979

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!