

ಈ ಜಗತ್ತಿನಲ್ಲಿ ಮನುಷ್ಯ ಬದುಕಬೇಕೆಂದರೆ ಅವನಿಗೆ ಪ್ರೀತಿ, ಸ್ನೇಹ, ಸಂಬಂಧ ಎಲ್ಲವೂ ತುಂಬಾ ಮುಖ್ಯ. ಆದರೆ ಅದರ ಜೊತೆಗೆ ಹಣವೂ ಕೂಡ ಮುಖ್ಯವಾಗಿರುತ್ತದೆ. ಯಾಕಂದ್ರೆ ಮನುಷ್ಯ ಅಂದ ಮೇಲೆ ಅವನಲ್ಲಿ ಕೊನೆಯಿಲ್ಲದ ಆಸೆಗಳು, ಎಂದೂ ಮುಗಿಯದ ಆಕಾಂಕ್ಷೆಗಳು ಇದ್ದೇ ಇರುತ್ತವೆ. ಆದರೆ ಕೆಲವರು ತಮ್ಮ ಬದುಕಿನ ಕಷ್ಟ-ನೋವುಗಳಿಂದಾಗಿ ತಮ್ಮೆಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗಿರಿಸಿ ಬದುಕಿಗಾಗಿ ಹಣ ಸಂಪಾದನೆ ಮಾಡುತ್ತಾರೆ. ಅವರ ಸಂಪಾದನೆ ಸ್ವಲ್ಪವೇ ಆಗಿದ್ದರೂ ಆ ಅಲ್ಪ ಸಂಪಾದನೆಯಲ್ಲಿಯೇ ಅವರು ಸಂತೋಷದಿಂದ ಬದುಕು ನಡೆಸುತ್ತಾರೆ. ಆದರೆ ಅವರ ಸಂಪಾದನೆ ಚಿಕ್ಕದಾಗಿದ್ದರೂ ಅವರ ಮನಸ್ಸು ಮಾತ್ರ ದೊಡ್ಡದಾಗಿರುತ್ತದೆ. ಯಾಕಂದ್ರೆ ಅವರು ತಮ್ಮ ಚಿಕ್ಕ ಸಂಪಾದನೆಯಲ್ಲೂ ಕಷ್ಟದಲ್ಲಿರುವ ಇತರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅವರಲ್ಲಿ ಹಂಚಿ ತಿನ್ನುವ ಗುಣ ಇರುತ್ತದೆಯೇ ವಿನಃ ಇನ್ನೊಬ್ಬರಿಗೆ ಮೋಸ ಮಾಡಿ ಹಣ ಸಂಪಾದಿಸುವ ದುರಾಸೆ ಇರುವುದಿಲ್ಲ.ಇನ್ನೂ ಕೆಲವರು ಹೇಗೆಂದರೆ ತಾವು ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಮಾಡಿದರೂ, ಅವರಲ್ಲಿ ತಮ್ಮೆಲ್ಲಾ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಷ್ಟು ಹಣವಿದ್ದರೂ ಕೂಡ ಅವರು ತಮ್ಮ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಮ್ಮ ಬಳಿ ಇರಿಸಿಕೊಂಡು ಉಳಿದದ್ದನ್ನು ಕಷ್ಟದಲ್ಲಿರುವವರಿಗೆ ಹಾಗೂ ಸಮಾಜಕ್ಕೆ ನೀಡುತ್ತಾರೆ. ಇವರಲ್ಲೂ ಹಾಗೆಯೇ ಇತರರ ಬಗ್ಗೆ ಕಾಳಜಿ, ಮಾನವೀಯತೆ ಇರುತ್ತದೆಯೇ ವಿನಃ ಇನ್ನೊಬ್ಬರಿಂದ ಕಸಿದುಕೊಂಡು ಬದುಕುವ ದುರಾಸೆ ಇರುವುದಿಲ್ಲ.ಆದರೆ ಇನ್ನೂ ಕೆಲವರಿಗೆ ತಾವು ಎಷ್ಟೇ ಹಣ ಸಂಪಾದನೆ ಮಾಡಿದರೂ ತೃಪ್ತಿ ಸಿಗುವುದಿಲ್ಲ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಅನ್ನುವಂತಹ ಮನಸ್ಥಿತಿ ಅವರದ್ದಾಗಿರುತ್ತದೆ. ಅವರಿಗೆ ತಮ್ಮ ಅಭಿವೃದ್ಧಿಯೇ ಮುಖ್ಯವಾಗಿರುತ್ತದೆಯೇ ವಿನಃ ಇತರರ ಬಗ್ಗೆ ಕಾಳಜಿ ಹಾಗೂ ಮಾನವೀಯತೆ ಇರುವುದಿಲ್ಲ. ಏಕೆಂದರೆ ಅವರಿಗೆ ಇನ್ನೊಬ್ಬರಿಂದ ಕಸಿದುಕೊಂಡು ಬದುಕುವ ಅಭ್ಯಾಸವಿರುತ್ತದೆಯೇ ಹೊರತು ಇನ್ನೊಬ್ಬರಿಗೆ ನೀಡಿ ಅಭ್ಯಾಸವಿರುವುದಿಲ್ಲ.ಹೇಗೆ ನಮ್ಮ ಕೈಬೆರಳುಗಳು ಒಂದೇ ಸಮನಾಗಿಲ್ಲವೋ ಹಾಗೆಯೇ ಈ ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ. ಕೆಲವರು ತಮ್ಮ ಅಲ್ಪ ಸಂಪಾದನೆಯಲ್ಲೂ ಇತರರಿಗೆ ಕೈಲಾದಷ್ಟು ನೀಡಿ ಇರುವುದನ್ನು ಹಂಚಿಕೊಂಡು ಬದುಕುತ್ತಾರೆ. ಕೆಲವರು ತಾವು ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದರೂ ತಮ್ಮ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಮ್ಮ ಬಳಿ ಇರಿಸಿಕೊಂಡು ಉಳಿದದ್ದನ್ನು ಸಮಾಜಕ್ಕೆ ನೀಡುತ್ತಾರೆ. ಇವರಿಬ್ಬರಲ್ಲೂ ಮಾನವೀಯತೆ ಹಾಗೂ ಸಮಾಜದ ಬಗ್ಗೆ ಕಾಳಜಿ ಇರುತ್ತದೆ. ಆದರೆ ಇನ್ನೂ ಕೆಲವರು ಹೇಗೆಂದರೆ ತಾವೆಷ್ಟೇ ಸಂಪಾದನೆ ಮಾಡಿದರೂ ತೃಪ್ತಿ ಸಿಗದೇ, ತಮ್ಮ ಸಂಪಾದನೆಯಲ್ಲಿ ಒಂದು ರೂಪಾಯಿಯನ್ನೂ ಕೂಡ ಇತರರಿಗೆ ನೀಡದೇ ಇನ್ನೊಬ್ಬರಿಂದ ಕಸಿದುಕೊಂಡು ಬದುಕುತ್ತಾರೆ. ಇವರಿಗೆ ಸಮಾಜದ ಬಗ್ಗೆ ಕಾಳಜಿಯಾಗಲಿ, ಮಾನವೀಯತೆಯಾಗಲಿ ಇರುವುದಿಲ್ಲ.ಅಂತಿಮವಾಗಿ ಇವೆಲ್ಲವನ್ನೂ ಗಮನಿಸಿದಾಗ ಶಿವರಾಮ ಕಾರಂತರು ಹೇಳಿದ “ಹಣ ಎಂಬುವುದು ಉಪ್ಪು ಇದ್ದಂತೆ. ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ” ಎನ್ನುವ ಮಾತು ನೆನಪಾಗುತ್ತದೆ.ಸತ್ತಾಗ ಯಾರೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಒಳ್ಳೆಯ ಕೆಲಸಗಳು ಸದಾ ನಮಗೆ ಒಳಿತನ್ನು ಮಾಡುತ್ತವೆ. ಹಾಗಾಗಿ ಇರುವುದರಲ್ಲಿ ಹಂಚಿಕೊಂಡು ಬದುಕಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಸಾರ್ಥಕ ಬದುಕು ಮಾತ್ರ ಈ ಜಗತ್ತಿನಲ್ಲಿ ಶಾಶ್ವತವಾಗಿರುತ್ತದೆ.✍️ಉಲ್ಲಾಸ್ ಕಜ್ಜೋಡಿ