
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.24 ರಂದು ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಅವರ ಅಧ್ಯಕ್ಷತೆಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು.ಸಂಘವು 2022-23ನೇ ಸಾಲಿನಲ್ಲಿ 108.02 ಕೋಟಿ ರೂಪಾಯಿ ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 23.43 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿರುತ್ತದೆ. ಶೇರುದಾರರಿಗೆ 6 ಶೇಕಡಾ ಡಿವಿಡೆಂಡ್ ಘೋಷಣೆ ಮಾಡಲಾಯಿತು. ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಕೆ.ಎಸ್ ಮಂಡಿಸಿದರು. ವರದಿ ಸಾಲಿನಲ್ಲಿ 17.88 ಕೋಟಿ ರೂ. ಸಾಲ ವಿತರಿಸಿದ್ದು, 16.61 ಕೋಟಿ ವಸೂಲಿ ಮಾಡಿ ವರ್ಷಾಖೇರಿಗೆ 17.82 ಕೋಟಿ ಸಾಲ ಇರುತ್ತದೆ. 93.91 ಶೇಕಡಾ ಸಾಲ ವಸೂಲಾತಿಯಾಗಿರುತ್ತದೆ. ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ರಾಮ ಶರ್ಮ.ಕೆ ಸುಬ್ರಹ್ಮಣ್ಯ ಹಾಗೂ ವಸಂತ ಕುಮಾರ್ ಕೂಜುಗೋಡು ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ, ಎಸ್.ಎಸ್.ಎಲ್.ಸಿ, ಏಳನೇ ತರಗತಿ ಹಾಗೂ ಐದನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು, ಸ್ವಂತ ಬಂಡವಾಳದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸಿದ ಸದಸ್ಯರನ್ನು ಹಾಗೂ ಅತಿ ಹೆಚ್ಚು ಪಿಗ್ಮಿ ಠೇವಣಿ ನೀಡಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಮಹಾಸಭೆಯಲ್ಲಿ 67.03 ಶೇಕಡಾ ದಾಖಲೆಯ ಹಾಜರಾತಿ ಆಗಿದ್ದು, ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರುಗಳು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ.ಡಿ, ನಿರ್ದೇಶಕರುಗಳಾದ ಸೋಮಸುಂದರ.ಕೆ, ರವೀಂದ್ರ ಕುಮಾರ್ ರುದ್ರಪಾದ, ಮೋಹನ್ ದಾಸ್ ರೈ, ವೆಂಕಟೇಶ್.ಹೆಚ್.ಎಲ್, ಸುರೇಶ್ ಕೋಟೆಬೈಲು, ದಾಮೋದರ್.ಕೆ, ಕಿರಣ್ ಪೈಲಾಜೆ, ಸುಬ್ರಹ್ಮಣ್ಯ ರಾವ್.ಎ, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಆಶಾಕುಮಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ ನಿರ್ದೇಶಕರಾದ ರವೀಂದ್ರ ಕುಮಾರ್ ರುದ್ರಪಾದ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)