ಅಲೆಟ್ಟಿ ಗ್ರಾಮ ಪಂಚಾಯತ್ ನ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಇವರ ಅಧ್ಯಕ್ಷತೆಯಲ್ಲಿ ಆರಂಭಗೊಂಡು ಅಧಿಕಾರಿಗಳ ಗೈರು ಹಾಜರಿಯಿಂದ ಅಪೂರ್ಣಗೊಂಡು ಗ್ರಾಮಸಭೆ ರದ್ದಾದ ಘಟನೆ ಸೆ.25 ರಂದು ನಡೆದಿದೆ. ನೋಡೆಲ್ ಅಧಿಕಾರಿ ಅರಬಣ್ಣ ಪೂಜಾರ ಆಗಮಿಸಿದ್ದರು.
ಸಭೆಯ ಆರಂಭದಲ್ಲಿ ಪಿಡಿಓ ವರದಿಯನ್ನು ವಾಚಿಸಿದರು. ಕಳೆದ ಗ್ರಾಮಸಭೆಯ ನಿರ್ಣಯಗಳಿಗೆ ಏನೆಲ್ಲಾ ಕ್ರಮ ತೆಗೆದುಕೊಂದ್ದೀರಿ ಹೇಳಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಶ್ರೀಧರ ಮಾಣಿಮರ್ದು ರವರು ಮಾತನಾಡಿ ಮಾಣಿಮರ್ದು ಪ್ರದೇಶಕ್ಕೆ ಮಂಜೂರಾದ ಕಾಮಗಾರಿಯನ್ನು ಯಾಕೆ ಬದಲಾವಣೆ ಮಾಡಿದ್ದೀರಿ ಎಂದು ವಾರ್ಡಿನ ಸದಸ್ಯರಲ್ಲಿ ಕೇಳಿದರು ಈ ಸಂದರ್ಬದಲ್ಲಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆಯವರು ಕೊಡಂಬರೆ ಪ್ರದೇಶಕ್ಕೆ ಕಾಲುಸಂಕಕಕ್ಕೆ ಪಂಚಾಯತ್ ವತಿಯಿಂದ ಯಾವುದೇ ಅನುದಾನ ಇಟ್ಟಿರುವುದಿಲ್ಲ, ಕೊಡಂಬರೆ ಎಂಬಲ್ಲಿಗೆ ಹಿಂದಿನ ಶಾಸಕರಾಗಿದ್ದ ಎಸ್ ಅಂಗಾರರವರು ಗ್ರಾಮ ಸೇತು ಯೋಜನೆ ಅಡಿಯಲ್ಲಿ ಅನುದಾನ ಇಟ್ಟಿರುವುದು ಅಲ್ಲದೇ ಕಾಮಗಾರಿ ಬದಲಾವಣೆ ಆದ ವಿಚಾರ ಇತ್ತೀಚೆಗೆ ನಮ್ಮ ಗಮನಕ್ಕೆ ಬಂದಿರುತ್ತದೆ ಎಂದು ಉತ್ತರಿಸಿದರು ಈ ವೇಳೆ ಸದಸ್ಯರಾದ ದಿನೇಶ್ ಕಣಕ್ಕೂರು ಅವರು ಮಾತನಾಡಿ ಅನುದಾನ ಬೇರೆ ಕಡೆ ಬದಲಾವಣೆ ಮಾಡಲು ಪಂಚಾಯತಿನಿಂದ ಪತ್ರ ನಾವು ಬರೆದಿರುವುದು ನಿಜ ಆದರೆ ಯಾವುದೇ ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ನಿರ್ಣಯ ಮಾಡದೇ ನಾನು ಹಾಗೂ ಅಧ್ಯಕ್ಷರು ಸಹಿ ಹಾಕಿ ಕೊಟ್ಟಿರುತ್ತೇವೆ ಯಾಕೆಂದರೆ ಕಾಮಗಾರಿ ಬದಲಾವಣೆ ಮಾಡಲು ಕಾರಣ ಅರಣ್ಯ ಇಲಾಖೆಯವರ ಆಕ್ಷೇಪಣೆ ಇರುವ ಕಾರಣ ಮತ್ತು ಮಂಜೂರಾದ ಹಣ ಲ್ಯಾಪ್ಸ್ ಆಗಬಾರದೆಂಬ ಉದ್ದೇಶಕ್ಕೆ ನೀಡಿರುತ್ತೇವೆ ಎಂದರು ಆಗ ಅಲ್ಲಿನ ನಿವಾಸಿಗಳು ಅಲ್ಲಿಯೇ ಮೋರಿ ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಆಗ ಅರಣ್ಯ ಇಲಾಖೆಯವರು ಒಪ್ಪಿಗೆ ನೀಡಿದರೆ ಖಂಡಿತವಾಗಿಯೂ ಅಲ್ಲಿ ಮೋರಿ ಹಾಕುತ್ತೇವೆ ಎಂದು ಸದಸ್ಯರು ಹೇಳಿದರು. ಆರಂಬೂರಿನಲ್ಲಿ ಪಂಚಾಯತಿಗೆ ಜಾಗ ಇದ್ದು ಅದು ಈಗ ಪಂಚಾಯತ್ ಸ್ವಾಧೀನದಲ್ಲಿ ಇದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇಲ್ಲದಿದ್ದರೇ ಜಾಗವನ್ನು ಪಂಚಾಯತ್ ಸುಪರ್ದಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಗ್ರಾಮಸಭೆಗೆ ಎಲ್ಲಾ ಇಲಾಖಾ ಅಧಿಕಾರಿಗಳು ಗ್ರಾಮಸಭೆಗೆ ಬಾರದಿರುವ ಬಗ್ಗೆ ಸುದರ್ಶನ ಪಾತಿಕಲ್ಲು, ರಾಧಾಕೃಷ್ಣ ಪರಿವಾರಕಾನ, ಧನಂಜಯ ಕುಂಚಡ್ಕ ಪ್ರಶ್ನಿಸಿದರು. ಸಭೆ ಮಾಡಬೇಡಿ ಎಲ್ಲಾ ಅಧಿಕಾರಿಗಳು ಕಡ್ಡಾಯ ಭಾಗವಹಿಸಬೇಕು. ಇಂದು ಸಭೆ ಮಾಡಬೇಡಿ ಎಂದರು. ಆರೋಗ್ಯ ಇಲಾಖೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಆಲೆಟ್ಟಿ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕರು ಸರಿಯಾಗಿ ಬೋಧನೆ ಮಾಡುತ್ತಿಲ್ಲ. ವಾಲ್ಮೀಕಿ ಶಾಲೆ ಅಲೆಟ್ಟಿಯಲ್ಲಿ ನೂತನವಾಗಿ ಬಂದಿರುವ ವಾರ್ಡನ್ ರವರು ಬಂದು ಹೊಸ ಹೊಸ ನಿಯಮ ಮಾಡುತ್ತಿದ್ದು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಸಭೆಗೆ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು, ವಾರ್ಡನ್ ರವರು ಬರಲೇಬೇಕು. ಬಾರದಿದ್ದರೆ ಗ್ರಾಮಸಭೆ ಮುಂದೂಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ ಮೇರೆಗೆ ಗ್ರಾಮಸಭೆಯನ್ನು ಮುಂದಿನ ದಿನದಲ್ಲಿ ನಡೆಸಲಾಗುವುದು ಎಂದು ತೀರ್ಮಾನಿಸಿ ಗ್ರಾಮಸಭೆಯನ್ನು ಮುಂದೂಡಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಕೆಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನೋಡೆಲ್ ಅಧಿಕಾರಿಗಳ ಸ್ಪಷ್ಟನೆ
ಸೆ.25 ರಂದು ಆಲೆಟ್ಟಿ ಗ್ರಾಮಸಭೆಯ ನೋಡೆಲ್ ಅಧಿಕಾರಿಗಳಾಗಿ ಆಗಮಿಸಿದ್ದು, ಇಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಉತ್ತರ ನೀಡಬೇಕು ಎಂದು ಆಗ್ರಹಿಸಿ ಜನತೆ ಬಿಗಿಪಟ್ಟು ಹಿಡಿದ ಹಿನ್ನೆಲೆಯಲ್ಲಿ ಗ್ರಾಮ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.