ಸುಳ್ಯ : 110ಕೆ.ವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯನ್ನು ವಾರದೊಳಗೆ ಪ್ರಾರಂಭಿಸದೇ ಇದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಬಿಜೆಪಿ ತಿಳಿಸಿದೆ. ಬಿಜೆಪಿಯ ಹೇಳಿಕೆಯನ್ನು ನೋಡಿದಾಗ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ. 110ಕೆ.ವಿ ಸಬ್ ಸ್ಟೇಷನ್ ಬಗ್ಗೆ ಸುಮಾರು 25 ವರ್ಷಗಳಿಂದ ಚುನಾವಣಾ ಸಂದರ್ಭದಲ್ಲಿ ಸುಳ್ಯದ ಜನತೆಗೆ ಬಿಜೆಪಿ ಭರವಸೆ ನೀಡುತ್ತಾ ಬಂದಿದ್ದು, ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರು ತರಾತುರಿಯಲ್ಲಿ ಸಚಿವರಾದ ಅಂಗಾರರ ಉಪಸ್ಥಿತಿಯಲ್ಲಿ ಗುದ್ದಲಿಪೂಜೆ ಮಾಡಿರುವುದನ್ನೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಬಿಂಬಿಸಲಾಯಿತು. ಗ್ರಾಮ ಪಂಚಾಯತ್ ನಿಂದ ಲೋಕಸಭೆಯ ತನಕ ಆಡಳಿತ ನಡೆಸಿದ ಬಿಜೆಪಿಯ ನಾಯಕರಿಗೆ ಗುದ್ದಲಿಪೂಜೆ ಮಾಡುವ ಮೊದಲೇ ಕೆಲವು ಇಲಾಖಾ ಪ್ರಕ್ರಿಯೆಗಳು ಬಾಕಿ ಇವೆ ಎಂಬ ಕನಿಷ್ಠ ಜ್ಞಾನ ಇಲ್ಲದಿರುವುದೇ ವಿಳಂಬವಾಗುವುದಕ್ಕೆ ಕಾರಣವಾಗಿದೆ. ಇಲಾಖಾ ಪ್ರಕ್ರಿಯೆ ಮುಗಿಯದೇ ಗುದ್ದಲಿಪೂಜೆ ಮಾಡುವ ಅವಶ್ಯಕತೆ ಏನಿತ್ತು? 2023 ಜನವರಿ 10 ರಂದು ಗುದ್ದಲಿಪೂಜೆ ಮಾಡಿದ ನಂತರ ಕಾಮಗಾರಿಯನ್ನು ಏಕೆ ಆರಂಭಿಸಲಿಲ್ಲ ಎಂದು ಪ್ರಶ್ನಿಸಬೇಕಾಗಿದೆ. ಈಗಿನ ಶಾಸಕರೇ ಇಲಾಖಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೊನ್ನೆ ಹೇಳಿಕೆ ನೀಡಿದ್ದಾರೆ. ಗುದ್ದಲಿಪೂಜೆ ಮಾಡುವ ಮೊದಲೇ ಇದನ್ನು ಆಲೋಚಿಸಬೇಕಾಗಿತ್ತು. ಈ ಬಗ್ಗೆ ನಾವು ಆದಷ್ಟು ಶೀಘ್ರ ನೂತನ ಇಂಧನ ಸಚಿವರ ಮೂಲಕ ಮೆಸ್ಕಾಂ ನ ತಾಂತ್ರಿಕ ಅಡಚಣೆ ಇರುವುದನ್ನು ಸರಿಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸುವಂತೆ ಮಾಡುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ್ ಹಾಗೂ ಪಿ.ಯಸ್ ಗಂಗಾಧರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Friday
- November 1st, 2024