ಶಿಕ್ಷಣ ನೀತಿಯ ಕುರಿತ ವಿಚಾರವನ್ನು ರಾಜಕಾರಣಿಗಳ ಪ್ರತಿಷ್ಠೆಗೆ ಬಿಡದೆ, ಶಿಕ್ಷಕರು ಮೌನ ಮುರಿದು ಮಾತನಾಡಬೇಕು. ಶಿಕ್ಷಕರೊಳಗೆ ಚರ್ಚೆ ನಡೆಯಬೇಕು” ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೆ.5 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಳಿಕ ಅವರು ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿಯ ಕುರಿತು ಚರ್ಚೆಗಳಾಗುವ ಈ ದಿನದಲ್ಲಿ ಯಾವ ರೀತಿಯ ಶಿಕ್ಷಣ ಮಕ್ಕಳಿಗೆ ಬೇಕು ಎನ್ನುವುದನ್ನು ಶಿಕ್ಷಕರು ತಿಳಿಸಬೇಕು. ತಾಲೂಕು, ಜಿಲ್ಲಾ ಹಂತದಲ್ಲಿಯೂ ಗುಣ ಮಟ್ಟದ ಚರ್ಚೆಗಳಾಗಬೇಕು ಎಂದ ಅವರು, ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಸರಕಾರ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದರೂ ಸರಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಮುಂದಿನ 5 ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 10 ಸಾವಿರ ಶಾಲೆಗಳು ಮುಚ್ಚಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.