✍️ ಭಾಸ್ಕರ ಜೋಗಿಬೆಟ್ಟು
ದೈವರಾಧನೆ ಎಂಬುವುದು ತುಳುನಾಡಿನ ಪೂಜ್ಯನೀಯ ಆರಾಧನ ಪದ್ಧತಿ. ಇಲ್ಲಿ ದೈವಗಳೆ ಪ್ರಮುಖ ಆರಾಧನಾ ಶಕ್ತಿಗಳು . ದೈವಗಳು ಸಾಮಾಜಿಕ ನ್ಯಾಯ ಕೊಡುವ ಮಾಯಾ ಶಕ್ತಿಗಳು. ದೈವರಾಧನೆಯಲ್ಲಿ ಹಿರಿಯರು ಮಾಡಿಕೊಂಡು ಬಂದ ಹಲವಾರು ಕಟ್ಟುಪಾಡುಗಳಿವೆ.
ನಮ್ಮ ದೈವರಾಧನೆಯಲ್ಲಿ ಆಣೆ ಪ್ರಮಾಣಕ್ಕೆ ಭಾರಿ ಪ್ರಾಮುಖ್ಯತೆ ಇದೆ. ಆಣೆ ಮಾಡುವುದು ಮಕ್ಕಳಾಟಿಕೆಯಲ್ಲ…!! ಇದರ ಪ್ರಭಾವ ಅತ್ಯಂತ ಘೋರವಾಗಿರುತ್ತದೆ. ದೈವದ ಕೋಪಕ್ಕೆ,ವಕ್ರ ದೃಷ್ಟಿಗೆ ಸಿಲುಕಿದರೆ ಹಲವಾರು ತಲೆಮಾರುಗಳು ನೋವು ಅನುಭವಿಸಬೇಕಾಗುತ್ತದೆ ಎಂಬ ಮಾತಿದೆ…!! ಇತ್ತೀಚಿಗೆ ನಾವು ಬೇರೆ ಬೇರೆ ಕಡೆ ಆಣೆ ಪ್ರಮಾಣದ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಹಾಗಾದರೆ ಏನಿದು ಆಣೆ ಪ್ರಮಾಣ??
ವ್ಯಕ್ತಿಗಳ ಮಧ್ಯೆ ಅಥವಾ ಕುಟುಂಬದ ನಡುವೆ ಏನಾದರು ವ್ಯಾಜ್ಯಗಳು ಬಂದಾಗ ಇಂತಹ ಆಣೆ ಪ್ರಮಾಣಗಳು ನಡೆಯುತ್ತವೆ. ಆದರೆ ಆಣೆ ಪ್ರಮಾಣಗಳು ನಡೆಯುವುದು ಭಾರಿ ವಿರಳ. ಯಾಕೆಂದರೆ ಇದರ ಪರಿಣಾಮ ಅತ್ಯಂತ ಕಷ್ಟಕರವಾಗಿ ಗೋಚರಿಸುತ್ತವೆ. ದೈವರಾಧನೆಯ ವಿಚಾರದಲ್ಲಿ ಆಣೆ ಪ್ರಮಾಣಕ್ಕೆ ಅದರದ್ದೇ ಆದ ಮಾನದಂಡಗಳು , ಕಟ್ಟುಪಾಡುಗಳು ಇವೆ. ಆಣೆ ಪ್ರಮಾಣವು , ದೈವದ ಕಲದಲ್ಲಿ , ಗುತ್ತು , ತರವಾಡು ಮನೆತನದಲ್ಲಿ, ಗ್ರಾಮ ದೈವದ ಸಾನಿಧ್ಯದಲ್ಲಿ ನಡೆಯುತ್ತವೆ. ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ಇದ್ದಲ್ಲಿ ಗುತ್ತು ಅಥವಾ ತರವಾಡು ಮನೆತನದ ಹಿರಿಯರಲ್ಲಿ ಅಥವಾ ಗ್ರಾಮ ದೈವಸ್ಥಾನದ ಮುಖ್ಯಸ್ಥರಲ್ಲಿ ಮಾಹಿತಿಯನ್ನು ತಿಳಿಸಬೇಕಾಗುತ್ತದೆ. ತದನಂತರ ಮೂರು ದಿನ ಕಳೆದು ತಮ್ಮ ಬಳಿ ಕರೆದು ಆಣೆ ಪ್ರಮಾಣ ಮಾಡಿದರೆ ಒಳಿತು ಕೆಡುಕುಗಳ ಬಗ್ಗೆ ವಿವರಿಸುತ್ತಾರೆ. ಒಂದೆ ಕೊಪ್ಪರಿಗೆಯ ನೀರು ಕುಡಿಯುವವರು ನೀವು, ವಿಚಾರ ಮಾಡಿಕೊಳ್ಳಿ ಎಂದು ರಾಜಿ ಪಂಚಾತಿಗೆಯಲ್ಲಿ ಮುಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಆಣೆ ಪ್ರಮಾಣಕ್ಕೆ ಹೋಗಿಯೆ ಸಿದ್ಧ ಎಂದು ಕೊಳ್ಳುವವರು , ತರವಾಡು ಮನೆಯ ಹಿರಿಯರ ( ಪ್ರಧಾನ ಧರ್ಮದೈವ ಪೂಜಾರಿ) ಅಥವಾ ಮುಖ್ಯಸ್ಥರು ದೈವಸ್ಥಾನದ ಎದುರು ಬರಮಾಡಿಕೊಂಡು ದೈವದ ಎದುರು ವ್ಯಕ್ತಿಗಳ ವಿಚಾರಗಳನ್ನು ದೈವದ ಎದುರು ನಿವೇದನೆ ಮಾಡಿಕೊಳ್ಳುತ್ತಾರೆ. ಆಗ ದೈವವು ನೀವೆ ವಿಚಾರವನ್ನು ಸರಿಮಾಡಿಕೊಳ್ಳಿ, ಆಣೆ ಪ್ರಮಾಣ ಮಾಡಿದರೆ ಕೊಪ್ಪರಿಗೆಯಲ್ಲಿ ಕುದಿಯುವ ಎಣ್ಣೆಯಂತೆ ಇರಬಹುದು, ಆಣೆ ಪ್ರಮಾಣ ಮಾಡಿದರೆ ಎಂದಿಗೂ ಕ್ಷಮೆ ಇಲ್ಲ , ನೀನು ಸತ್ತರೆ ಪ್ರೇತವನ್ನು ಬಿಡಲಾಗುವುದಿಲ್ಲ , ನಿನ್ನ ಏಳು ತಲೆಮಾರುಗಳಿಗೂ ನನ್ನ ಪ್ರಭಾವ ಇರುತ್ತದೆ ಎಂದು ಎಚ್ಚರಿಕೆ ನೀಡುತ್ತದೆ . ಆದರೆ ಇದೂ ಮುಂದುವರಿದೂ ಆಣೆ ಪ್ರಮಾಣ ಮಾಡಬೇಕಾದರೆ ಬಾವಿಯಿಂದ ನೀರು ಎಳೆದು ಸ್ನಾನ ಮಾಡಿ ಉಟ್ಟ ಚಂಡಿ ಬಟ್ಟೆಯಲ್ಲೆ ಬಂದು ಇಬ್ಬರೂ ( ವಾದಿ – ಪ್ರತಿ ವಾದಿ) ಆಣೆ ಪ್ರಮಾಣ ಮಾಡಿ ಯಾರನ್ನೂ ಹಿಂದುರುಗಿ ನೋಡದೆ ನಡೆದು ಹೋಗುವುದು ಪದ್ಧತಿ.
ಆದ್ಧರಿಂದ ಇತ್ತೀಚಿಗೆ ನಡೆದ ಯಾವುದೇ ಆಣೆ ಪ್ರಮಾಣಗಳು ಸಂಪೂರ್ಣವಾಗಿ ನಡೆದ ಆಣೆ ಪ್ರಮಾಣಗಳಲ್ಲ . ಬದಲಾಗಿ ಅದು ಕೇವಲ ಮಾತಿಗಷ್ಟೆ , ಹೇಳಿಕೆಗೆ ಅಷ್ಟೆ ಸೀಮಿತ …!!!