Ad Widget

ತುಳುನಾಡಿನ ವಿಶಿಷ್ಟ ಪರ್ವ ದಿನ ಪತ್ತನಾಜೆ

ಅನಾದಿ ಕಾಲದಿಂದಲೇ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದ ಧಾರ್ಮಿಕ, ಸಾಮಾಜಿಕ ಆಚರಣೆಗಳ ಗಡುವೇ ಈ ಪತ್ತನಾಜೆ. ತುಳುನಾಡಿನಲ್ಲಿ ಹಬ್ಬದ ಋತುವಿನ ಕೊನೆಯ ಒಂದು ದಿನದ ಆಚರಣೆ ಇದಾಗಿದೆ. ಇದು ಒಂದು ನಿಗದಿತ ದಿನದ ಆಚರಣೆಯಾಗಿದ್ದು, ತುಳುವಿನಲ್ಲಿ ಪಗ್ಗು, ಬೇಸ, ಕಾರ್ತಿಲ್, ಆಟಿ, ಸೋಣ, ನಿರ್ನಾಲ್, ಬೊಂತೆಲ್ ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ ಎಂಬ ಹನ್ನೆರಡು ತಿಂಗಳುಗಳಿದ್ದು, ವೃಷಭ ಮಾಸ ಅಂದರೆ ತುಳುವಿನ ಬೇಸ  ಎಂದು ಕರೆಯಲ್ಪಡುವ ಎರಡನೇ ಸೌರ ತಿಂಗಳ 10ನೇ ದಿನ ಈ ಪತ್ತನಾಜೆಯನ್ನು ಆಚರಿಸುತ್ತಾರೆ. ಸಾಮಾನ್ಯವಾಗಿ ಪ್ರತೀ ವರ್ಷ ಮೇ ತಿಂಗಳ 24 ಅಥವಾ 25ನೇ ತಾರೀಕಿನಂದು ಇದು ಬರುತ್ತದೆ. ಈ ಆಚರಣೆಯು ಕೇರಳದ ಕಾಸರಗೋಡು ಜಿಲ್ಲೆಯಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಬಾರ್ಕೂರಿನವರೆಗೆ ಹಾಗೆಯೇ ಕರ್ನಾಟಕದ ಮಡಿಕೇರಿ (ಕೊಡಗು) ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ. ಈ ಆಚರಣೆಯ ಪ್ರಮುಖ ನಂಬಿಕೆ ಎಂದರೆ ವಾರ್ಷಿಕ ಉತ್ಸವಗಳು, ವಿಶೇಷ ಪರ್ವಗಳು ಮತ್ತು ದೈವಿಕ ದೇವಾಲಯಗಳಲ್ಲಿ ನಡೆಯುವ ಉತ್ಸವಗಳು ಈ ದಿನದಂದು ಮುಕ್ತಾಯಗೊಳ್ಳುತ್ತವೆ ಎಂಬುದು. ಭೂತಕೋಲ, ರಥೋತ್ಸವ ಹಾಗೆಯೇ ತುಳುನಾಡಿನ ದೇವಸ್ಥಾನಗಳಲ್ಲಿ ವಿಶೇಷ ಉತ್ಸವಗಳು ಈ ದಿನ ಕೊನೆಗೊಂಡು ಮುಂದಿನ ಮೂರು ತಿಂಗಳುಗಳು ನಡೆಯುವುದಿಲ್ಲ ಎನ್ನುವುದು ವಾಡಿಕೆ. ಹಾಗೇನೇ ಯಕ್ಷಗಾನ ಮೇಳಗಳು ಕೂಡ ಪತ್ತನಾಜೆಯಂದು ತಮ್ಮ ಕೊನೆಯ ಪ್ರದರ್ಶನವನ್ನು ನೀಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟ ಮುಕ್ತಾಯ ಮಾಡುತ್ತವೆ.  ಮತ್ತೆ ದೀಪಾವಳಿಯ ಬಳಿಕ ದೀಪೋತ್ಸವ ಸಂದರ್ಭದಲ್ಲಿ ಪುನಃ ಪ್ರದರ್ಶನಕ್ಕೆ ಅಣಿಯಾಗುತ್ತಾರೆ.

      ಇನ್ನೊಂದು ವಿಶೇಷತೆ ಎಂದರೆ ಈ ದಿನ ಮಳೆಗಾಲದ ಪ್ರಾರಂಭ ಎಂಬುದು ತುಳುವರಲ್ಲಿ ನಂಬಿಕೆ ಇದೆ.

“ಪತ್ತನಾಜೆಗೆ ಪತ್ತ್ ಪನಿ ಬರ್ಸ” ಎಂಬ ಗಾದೆಯಂತೆ ಪತ್ತನಾಜೆಯಂದು ಹತ್ತು ಹನಿ ಮಳೆಯಾದರೂ ಬೀಳಬೇಕೆಂಬುದು ತುಳುವರ ನಂಬಿಕೆ. ಆ ದಿನದ ಮಳೆಯು ಮುಂದೆ ಬೆಳೆಯುವ ಬೆಳೆಯ ಸಮೃದ್ಧತೆಯನ್ನು ಸೂಚಿಸುತ್ತದೆ. ಇಂದಿನಿಂದ ಶುಭ ಕಾರ್ಯಗಳು, ಧಾರ್ಮಿಕ ಆಚರಣೆಗಳು ಕೊನೆಗೊಂಡು ಕೃಷಿಯ ಕಡೆಗೆ ತುಳುವರು ತಮ್ಮ ಗಮನವನ್ನು ಹರಿಸುವುದು ವಾಡಿಕೆಯಾಗಿತ್ತು. ಪತ್ತನಾಜೆಗೆ ಒಳ್ಳೆಯ ಅರ್ಥವಿದ್ದು ಪತ್ತನೆ ಎಂದರೆ ‘ಹತ್ತನೇ’ ಎಂದೂ ಹಾಗೂ ಅಜೆ ಎಂದರೆ ‘ಹೆಜ್ಜೆ’ ಎಂದು ಅರ್ಥವಿದೆ. ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಗದ್ದೆ ಉಳುವ ಮೂಲಕ ಕೃಷಿ ಕಾರ್ಯ ಆರಂಭಗೊಂಡು ಹದಿನೆಂಟನೇ ದಿನದಂದು ನೇಜಿ ನೆಡುವ ಸಂಪ್ರದಾಯವಿತ್ತು.

  ಹಿಂದಿನ ದಿನಗಳಲ್ಲಿ ಆರು ತಿಂಗಳು ಮಳೆಗಾಲ, ಆರು ತಿಂಗಳು ಸೆಕೆಗಾಲ ಎಂದು ಎರಡು ಕಾಲಗಳಾಗಿ ಜನರು ವಿಂಗಡಿಸುತ್ತಿದ್ದರು. ಮೇ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದುದರಿಂದಲೂ, ವಿಪರೀತ ಮಳೆಯಾಗುತ್ತಿದ್ದುದರಿಂದಲೂ ನೇಮೋತ್ಸವ, ಯಕ್ಷಗಾನ ಮುಂತಾದ ಕಾರ್ಯಗಳಿಗೆ ಸಮಯ ಇಲ್ಲದ ಕಾರಣ ಅವುಗಳನ್ನು ಸ್ಥಗಿತಗೊಳಿಸುತ್ತಿದ್ದರು ಎಂಬ ಮಾತೂ ಇದೆ. ಮಾತ್ರವಲ್ಲದೇ ಮಳೆಯ ಮಧ್ಯೆ ಯಾವ ಉತ್ಸವ ನಡೆಸುವುದೂ ಅಸಾಧ್ಯವಾದ ಕಾರಣ ಈ ಗಡುವು ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬೇಸಾಯವೇ ಕಣ್ಮರೆಯಾಗುತ್ತಿರುವ ಕಾರಣ ಪತ್ರನಾಜೆಗೂ ಕೃಷಿಕರಿಗೂ ಸಂಬಂಧ ದೂರವಾದಂತಾಗಿದೆ. ಆದರೆ ಧಾರ್ಮಿಕ ನೆಲೆಗಟ್ಟಿನಲ್ಲಿ ಪತ್ತನಾಜೆ ಆಚರಣೆ ಇಂದಿಗೂ ಉಳಿದುಕೊಂಡಿದೆ.

ಪತ್ತನಾಜೆಯಂದು ದೇವಸ್ಥಾನಗಳಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತವೆ. ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆ. ಮತ್ತೆ ದೀಪಾವಳಿಯ ಬಳಿಕ ದೇವರು ಗುಡಿಯಿಂದ ಹೊರಬಂದು ಉತ್ಸವಗಳು ಆರಂಭಗೊಳ್ಳುತ್ತವೆ. ತುಳುವಿನ ಬೇಸ, ಕಾರ್ತೆಲ್ ಮತ್ತು ಆಟಿ ಈ ಮೂರು ತಿಂಗಳುಗಳ ಕಾಲ ತುಳುನಾಡಿನ ಯಾವುದೇ ದೇವಸ್ಥಾನ, ದೈವಸ್ಥಾನಗಳಲ್ಲಿ ವಿಶೇಷ ಉತ್ಸವ ನಡೆಯುವುದಿಲ್ಲ. ಆಟಿ ಮುಗಿದು ಸೋಣ ತಿಂಗಳು ಅಂದರೆ ಸಿಂಹ ಮಾಸದಲ್ಲಿ ಸಿಂಹ ಸಂಕ್ರಮಣದ ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ಶುಭಕಾಲವಾಗಿದ್ದು ಅಂದಿನಿಂದ ಎಲ್ಲಾ ಉತ್ಸವಗಳು ಆರಂಭಗೊಳ್ಳುತ್ತವೆ.

  ತುಳುನಾಡಿನ ದೈವಸ್ಥಾನಗಳಲ್ಲಿ ಕೋಲ, ನೇಮ, ಅಗೆಲು, ತಂಬಿಲ ಮುಂತಾದ ಸೇವೆಗಳಿಗೆ ಪತ್ತನಾಜೆ ಗಡುವು. ಪತ್ತನಾಜೆಯ ದಿನ ಗುಳಿಗ, ಭೈರವ ದೈವಗಳು ಹಾಗೂ ಇತರ ಎಲ್ಲಾ ಪೂಜಾ ಸ್ಥಳಗಳು, ಭೂತದ ದೇಗುಲ, 

ವಿಶೇಷ ಚೇತನಗಳನ್ನು ಸಮಾಧಾನಪಡಿಸಲು ಬಾಳೆ ಎಲೆಯ ಮೇಲೆ ಅಕ್ಕಿ ಮತ್ತು ಇತರ ಖಾದ್ಯಗಳನ್ನು ಬಡಿಸುವ ಸಂಪ್ರದಾಯಿವಿದೆ. ಪತ್ತನಾಜೆಯ ಹೆಚ್ಚಿನ ಆಚರಣೆಗಳನ್ನು ಮನೆಯ ಹೊರಗೆ, ಅದರಲ್ಲೂ ಹೆಚ್ಚಾಗಿ ದೈವಸ್ಥಾನ, ಗುಳಿಗನ ಕಟ್ಟೆ, ಬೈರವ ಕಟ್ಟೆ ಅಥವಾ ದೈವದ ಕಲ್ಲಿನ ಮುಂದೆ ಆಚರಿಸಲಾಗುತ್ತದೆ.

   ಪತ್ತನಾಜೆಯ ದಿನ ಸಾಮಾನ್ಯವಾಗಿ ಕುಟುಂಬದ ದೈವಗಳಿಗೆ ತಂಬಿಲ ಕೊಡುವ ಸಂಪ್ರದಾಯವಿದೆ. ಇದರ ಆಚರಣೆ ಒಂದು ಕಡೆಯಲ್ಲಿ ಒಂದೊಂದು ರೀತಿಯಿರುತ್ತದೆ. ಈ ಸಂದರ್ಭದಲ್ಲಿ ವಿವಾಹಿತ ಮಹಿಳೆಯರು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಅವರು ಬರುವಾಗ ಇನ್ನೂ ಮೊಟ್ಟೆ ಇಡದ ಒಂದು ಚಿಕ್ಕ ಕೋಳಿಯನ್ನು ಮತ್ತು ಒಂದು ಕಿಲೋ ಅಕ್ಕಿ, ಮಸಾಲೆ, ಮೆಣಸು ಮೊದಲಾದವನ್ನು ತರಬೇಕು.  ಕುಟುಂಬದ ಹಿರಿಯ ವ್ಯಕ್ತಿ ಎಲ್ಲಾ ವಿಧಿ ವಿಧಾನಗಳನ್ನು ಮಾಡುತ್ತಾ ಹೆಣ್ಣು ಮಗಳಿಗೆ ತೊಂದರೆ ಆಗಬಾರದು ಎಂದು ಕುಟುಂಬದ ದೈವದಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.

  ಹಿಂದೆಲ್ಲಾ ಪತ್ತನಾಜೆಯಂದು ಊರಿನ ಕಾಡಿಗೆ ಹೋಗಿ ಬೇಟೆಯಾಡುವ ಕ್ರಮ ಇತ್ತಂತೆ.  ಮಳೆಗಾಲ ಪ್ರಾರಂಭವಾಗುವುದಕ್ಕೆ ಮುಂಚೆ ಗದ್ದೆ ಕೆಲಸ ಆರಂಭಿಸುವುದಕ್ಕೆ ಮೊದಲು ಕಾಡಿನ ಮೃಗಗಳನ್ನು ನಿಯಂತ್ರಣ ಮಾಡುವ ಉದ್ದೇಶ ಕೂಡ ಇದರ ಹಿಂದೆ ಇತ್ತು. ಈ ಬೇಟೆಯ ಕ್ರಮದಿಂದಾಗಿ ಹಿಂದೆ ಹಳ್ಳಿಗಳಲ್ಲಿ ಪತ್ತನಾಜೆಯಂದು ಗಮ್ಮತ್ತಿನ ಮಾಂಸದ ಊಟ ಇರುತ್ತಿತ್ತು.  ಅದಕ್ಕೆ ಸರಿಯಾಗಿ ಹೆಚ್ಚಿನ ಕುಟುಂಬಗಳಲ್ಲಿ ಪತ್ತನಾಜೆಯಂದು ಕಾಲಾವಧಿ ತಂಬಿಲ ಕೂಡ ಇರುತ್ತಿತ್ತು. ಇದು ಇಂದಿಗೂ ಕೆಲವು ಕಡೆ ಮುಂದುವರಿದುಕೊಂಡು ಬಂದಿದೆ.

   ಒಟ್ಟಿನಲ್ಲಿ  ಪತ್ತನಾಜೆಯು ತುಳುವರು ತಮ್ಮ ಸುಂದರ ಬದುಕಿಗೆ ಬೇಕಾದ ಅರ್ಥಪೂರ್ಣ ನಿಯಮಗಳನ್ನು ರೂಪಿಸಿಕೊಂಡ ಹಬ್ಬವಾಗಿದೆ. ಇದು ತುಳುವರ ಕಾಲಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಆಚರಣೆಗಳು ಶಾಶ್ವತವಾಗಿ ಉಳಿಯಬೇಕಾದರೆ

ಮುಂದಿನ ಪೀಳಿಗೆಗೆ ಇಂತಹ ಆಚರಣೆಗಳ ಮಹತ್ವವನ್ನು ತಿಳಿಸುವುದರೊಂದಿಗೆ ಅದನ್ನು ಆಚರಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಪ್ರಕೃತಿ ಮತ್ತು ಮಾನವನ ನಡುವಿನ ಬಾಂಧವ್ಯವನ್ನು ಸಾರುವ, ಮನಸು ಮನಸುಗಳನ್ನು ಒಂದುಗೂಡಿಸುವ ಈ ಆಚರಣೆ ಶಾಶ್ವತವಾಗಿ ಉಳಿಯಲಿ ಎಂಬುದೇ ನಮ್ಮ ಆಶಯ.

ಲೇಖಕರು: ಡಾ. ಅನುರಾಧಾ ಕುರುಂಜಿ
ವ್ಯಕ್ತಿತ್ವ ವಿಕಸನ ತರಬೇತುದಾರರು, ಸುಳ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!