
ಸುಳ್ಯ:ಕರ್ನಾಟಕದಲ್ಲಿ ಕಾಂಗ್ರೆಸ್ ನೂತನ ಸರಕಾರ ರಚಿಸಿ, ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಮತ್ತಿತರ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುಳ್ಯ ಬಸ್ ನಿಲ್ದಾಣದ ಬಳಿ ಸಂಭ್ರಮಾಚರಣೆ ಆಚರಿಸಿದರು. ಸುಳ್ಯ ಬಸ್ ನಿಲ್ದಾಣದ ಬಳಿ ಅಳವಡಿಸಲಾದ ಎಲ್‌ಸಿಡಿ ಪರದೆಯಲ್ಲಿ ಪ್ರಮಾಣವಚನದ ನೇರ ಪ್ರಸಾರವನ್ನು ವೀಕ್ಷಿಸಿದ ಕಾರ್ಯಕರ್ತರು
ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಪಟಾಕಿ ಹೊಡೆದು ಕಾಂಗ್ರೇಸ್ ಪರ ಘೋಷಣೆ ಕೂಗಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ಬಿಜೆಪಿಯವರಿಗೆ ಮೋದಿ ಬಂದ್ರೆ ಜನ ಓಟು ಹಾಕುತ್ತಾರೆ ಕಲ್ಪನೆ ಇತ್ತು. ಈ ಚುನಾವಣೆಯಲ್ಲಿ ಅದು ಕೂಡ ನಡೆಯಲಿಲ್ಲ. ಜನರು ಅಭಿವೃದ್ದಿಯನ್ನು ಬಯಸಿ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ ಸಿದ್ಧರಾಮಯ್ಯ ಅವರು ಸದೃಢ ಸರಕಾರ ರಚಿಸುತ್ತಾರೆ ಮತ್ತು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ತಕ್ಷಣದಿಂದಲೇ ಜಾರಿಗೆ ತರುತ್ತಾರೆ ಎಂದರು. ಕೇಂದ್ರದ ಬಿಜೆಪಿ ಸರಕಾರ ರೂ. 2000ದ ನೋಟುಗಳನ್ನು ರದ್ದು ಮಾಡಲು ಮುಂದಾಗಿದೆ. ಅದರ ಮುದ್ರಣಕ್ಕಾಗಿ ಮಾಡಿದ ಕೋಟಿಗಟ್ಟಲೆ ವೆಚ್ಚಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು. ಪಕ್ಷದ ಪ್ರಮುಖರಾದ ಕೆ.ಗೋಕುಲ್ ದಾಸ್, ಹಮೀದ್ ಕುತ್ತಮೊಟ್ಟೆ, ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಶ್ರೀಹರಿ ಕುಕ್ಕುಡೇಲು, ಇಸ್ಮಾಯಿಲ್ ಪಡ್ಪಿನಂಗಡಿ, ಪೂರ್ಣಚಂದ್ರ ಕಣೆಮರಡ್ಕ, ಬಾಲಕೃಷ್ಣ ಭಟ್ ಕೊಡೆಂಕಿರಿ, ರಾಜಾರಾಮ್ ಭಟ್ ಬೆಟ್ಟ, ಭೋಜಪ್ಪ ನಾಯ್ಕ, ಹಸೈನಾರ್ ಕೊಳೆಂಜಿಕೋಡಿ, ಭವಾನಿಶಂಕರ ಕಲ್ಮಡ್ಕ, ಹೂವಪ್ಪ ಗೌಡ ಆರ್ನೋಜಿ, ರಾಧಾಕೃಷ್ಣ ಅರಂಬೂರು, ನಂದರಾಜ್ ಸಂಕೇಶ, ಚೇತನ್ ಕಜೆಗದ್ದೆ, ಮುಜೀಬ್ ಪೈಚಾರ್ ಮತ್ತಿತರರು ಉಪಸ್ಥಿತರಿದ್ದರು.
