2000 ರೂಪಾಯಿ ಮುಖಬೆಲೆಯ ನೋಟನ್ನು ಹಿಂತೆಗೆದುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸಾರ್ವಜನಿಕರಿಗೆ ಸಾಕಷ್ಟು ಸಮಯವನ್ನು ಒದಗಿಸಲು, ಎಲ್ಲಾ ಬ್ಯಾಂಕುಗಳಲ್ಲಿ ಸೆಪ್ಟೆಂಬರ್ 30, 2023 ರೊಳಗೆ ರೂ. 2000 ಮುಖಬೆಲೆಯ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಮೇ 23 ರಿಂದ ನೋಟು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅಕ್ಟೋಬರ್ 1, 2023 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.
ಈ ಬಗ್ಗೆ ಬ್ಯಾಂಕ್‌ಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.
2,000 ರೂ ಮುಖಬೆಲೆಯ ನೋಟು ಹಿಂಪಡೆಯಲು ಏನು ಕಾರಣ?
ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದಂಥವು. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ.