ಸುಳ್ಯ: ಜಿ.ಪಂ.ಮಾಜಿ ಸದಸ್ಯ, ಬಿಜೆಪಿ ಮುಖಂಡ, ಅಜ್ಜಾವರ ಗ್ರಾಮದ ನವೀನ್ ಕುಮಾರ್ ರೈ ಮೇನಾಲ ಅವರು ಪಯಸ್ವಿನಿ ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಅವರ ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ತುದಿಯಡ್ಕ ಗಿರಿಜಾಶಂಕರ್ ಅವರ ಮನೆಯ ಬಳಿ ಪಯಸ್ವಿನಿ ನದಿಯ ಬದಿಯಲ್ಲಿ ಅವರ ತೋಟಕ್ಕೆ ನೀರು ಸರಬರಾಜು
ಮಾಡುವ ಪಂಪ್ ಇದ್ದು, ಅಲ್ಲಿಗೆ ಅವರು ಮೇ. 18ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಏಕಾಂಗಿಯಾಗಿ ಹೋಗಿದ್ದರನ್ನಲಾಗಿದೆ. ಅವರು ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಮನೆಯವರು ಫೋನ್ ಮಾಡಿದರೂ ಫೋನ್ ಸ್ವೀಕರಿಸದಿದ್ದಾಗ ಕೆಲಸದಾಳು ಅವರನ್ನು ಹುಡುಕಿಕೊಂಡು ನದಿಯ ಬಳಿ ಬಂದಾಗ ಪಂಪ್ ಶೆಡ್ ನ ಬಳಿ ದಡದಲ್ಲಿ ಅವರ ಬಟ್ಟೆ ಹಾಗೂ ಮೊಬೈಲ್ ಕಂಡುಬಂತು.ತಕ್ಷಣ ಅವರು ಇತರರಿಗೆ ಮಾಹಿತಿ ನೀಡಿ ಪೈಚಾರಿನ ಮುಳುಗು ತಜ್ಞರನ್ನು ಕರೆಸಿ ನೀರಿನಲ್ಲಿ ಇಳಿದು ಹುಡುಕಿದಾಗ ಅವರ ಮೃತದೇಹ ಪತ್ತೆಯಾಯಿತು. ಅಗ್ನಿಶಾಮಕ ದಳದವರೂ ಸಹಕರಿಸಿದರು.
ಅವರು ಆರು ವರ್ಷಗಳ ಹಿಂದೆ ಜಾಲ್ಸೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅತ್ಯಂತ ಚುರುಕಿನಿಂದ ಓಡಾಟ ನಡೆಸಿ ತನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದ ನವೀನ್ ಕುಮಾರ್ ರೈ ಮೇನಾಲ ಬಿಜೆಪಿಯ ಪ್ರಭಾವೀ ಮುಖಂಡರಾಗಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಜನಾನುರಾಗಿಯಾಗಿದ್ದರು.
ಅವರು ಪತ್ನಿ ರೂಪಾ ರೈ, ಪುತ್ರಿಯರಾದ ಪೃಥ್ವಿ ರೈ, ಹಾಗೂ ಆರ್ವಿ ರೈ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಪಂಪ್ ಶೆಡ್ ಬಳಿ ಫುಟ್ ವಾಲ್ವ್ ಕ್ಲೀನ್ ಮಾಡಲೆಂದು ನದಿಗೆ ಇಳಿದಾಗ ಕಾಲು ಜಾರಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿರಬಹುದೆಂದು ಹೇಳಲಾಗಿದೆ.
- Thursday
- November 21st, 2024