ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಮುಸಲ್ಮಾನರ ಪವಿತ್ರ ತೀರ್ಥ ಯಾತ್ರೆಯಾದ ಹಜ್ ವ್ಯವಸ್ಥೆಯನ್ನು ಬದಲಿಸಿ ಕೇರಳದ ಕಣ್ಣೂರಿಗೆ ನೀಡಿರುವುದು ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್ ಹೇಳಿದ್ದಾರೆ.
ಮೇ.12ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮುಸಲ್ಮಾನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಾ ಬರುತ್ತಿದೆ. ಹಲವಾರು ವರ್ಷಗಳಿಂದ ಇದ್ದ ಹಜ್ ಯಾತ್ರಿಕರಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ತೆರಳಲು ಇದ್ದ ವ್ಯವಸ್ಥೆಯನ್ನು ಕೇರಳದ ಕಣ್ಣೂರು ಗೆ ಬದಲಿಸಿರುವ ಕಾರಣ ಯಾತ್ರಿಕರಿಗೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳಿದರು. ಅಲ್ಲದೆ ಇದರಿಂದಾಗಿ ಮಂಗಳೂರು ಭಾಗದ ನಾನಾ ರೀತಿಯ ಉದ್ಯಮಿಗಳಿಗೆ, ಪ್ರವಾಸೋದ್ಯಮ ಕೇಂದ್ರಗಳಿಗೆ ಇದರಿಂದ ನಷ್ಟವೇ ಹೊರತು ಲಾಭವೇನು ಇಲ್ಲ.ಕಾರಣ ಹಜ್ ಯಾತ್ರಿಕರನ್ನು ಬೀಳ್ಕೊಡಲು ನೂರಾರು ಮಂದಿ ಮಂಗಳೂರು ಪರಿಸರಕ್ಕೆ ಬರುತ್ತಿದ್ದರು.ಈ ಕಾರಣದಿ ವ್ಯಾಪಾರ ವಹಿವಾಟುಗಳಲ್ಲಿ ಅಭಿವೃದ್ಧಿ ಕಾಣುತ್ತಿತ್ತು.
ಅಲ್ಲದೆ ಯಾವುದೇ ಧರ್ಮದಲ್ಲಿ ಪುಣ್ಯಕ್ಷೇತ್ರಗಳಿಗೆ ತೆರಳುವ ಯಾತ್ರಿಕರು ಅವರವರ ರಾಜ್ಯ ಮತ್ತು ಜಿಲ್ಲೆಗಳಿಂದ ತೆರಳುವುದೇ ಹೆಮ್ಮೆಯ ವಿಷಯವಾಗಿರುತ್ತದೆ.
ಆದರೆ ನಮ್ಮ ರಾಜ್ಯದಲ್ಲಿ ಮತ್ತು ನಮ್ಮ ಜಿಲ್ಲೆಯಲ್ಲಿ ವ್ಯವಸ್ಥೆಗಳು ಇದ್ದಾಗ ಅದನ್ನು ಉಪಯೋಗಿಸದೆ ಬೇರೆ ರಾಜ್ಯಗಳಿಗೆ ಅದನ್ನು ನೀಡುವುದು ಎಷ್ಟು ಸರಿ ಎಂದು ಅವರು ಕೇಳಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ಜನರಿಗೆ ಹೆಚ್ಚು ಅನುಕೂಲ ಆಗಿತ್ತು. ಆದರೆ ಈಗ ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಇಲ್ಲದೆ ಮಂಗಳೂರಿನ ಬದಲು ಕಣ್ಣೂರಿಗೆ ಹೋಗಲು ಸೂಚಿಸಲಾಗಿದೆ. ಇದರಿಂದ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವ 800ಕ್ಕೂ ಅಧಿಕ ಯಾತ್ರಿಕರಿಗೆ ಸಮಸ್ಯೆ ಆಗಿದ್ದು ಖರ್ಚು ವೆಚ್ಚಕೂಡ 50 ಸಾವಿರ ಹೆಚ್ಚು ನೀಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್.ಎಂ.ಕೃಷ್ಣ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ಮಂಗಳೂರಿನಲ್ಲಿ ಎಂಬಾರ್ಕೇಷನ್ ಸೆಂಟರ್ ಆರಂಭಗೊಂಡು 2009ರಲ್ಲಿ ಪ್ರಥಮ ಹಜ್ ವಿಮಾನ ಆರಂಭವಾಗಿತ್ತು.