ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, ಎಕ್ಸ್‌ಪೋ-2023 ನಡೆಯಿತು. ಪ್ರದರ್ಶನದ ಉದ್ಘಾಟನೆಯನ್ನು ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಎಂ. ಕೆ. ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಂಡರೆ ಹೊಸ ಅವಕಾಶಗಳು ದೊರೆಯುವುದರೊಂದಿಗೆ ಸರಕಾರದಿಂದ ಕೊಡಮಾಡುವ ಕೌಶಲ್ಯ ಭಾರತ ಯೋಜನೆಯ ಮೂಲಕ ಸ್ವಉದ್ಯಮವನ್ನು ಆರಂಭಿಸಬಹುದು ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ. ಮಾತನಾಡಿ ವಿದ್ಯಾರ್ಥಿಗಳು ವಿವಿಧ ಯೋಜನೆಗಳನ್ನು ಮಾಡಿ ಹೊಸ ತಂತ್ರಜ್ಞಾನಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ. ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ಭಾಗವಹಿಸಿದ ಕಾಲೇಜಿನ ಎಲ್ಲಾ ವಿಭಾಗಗಳ ಯೋಜನಾ ಗುಂಪುಗಳಿಗೆ ಶುಭಹಾರೈಸಿದರು. ವಿವಿಧ ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರಾಜೆಕ್ಟ್‌ಗಳು ಪ್ರದರ್ಶಿತಗೊಂಡಿದ್ದು, ವಿದ್ಯಾರ್ಥಿಗಳ ಆಸಕ್ತಿ, ಶ್ರಮ ಮತ್ತು ಸೃಜನಶೀಲತೆಗೆ ಮತ್ತು ಬೋಧಕ ವೃಂದದಿಂದ ನೀಡಲ್ಪಟ್ಟ ಸೂಕ್ತ ಮಾರ್ಗದರ್ಶನಕ್ಕೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಚಂದ್ರಶೇಖರ್ ಎ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಕುಸುಮಾಧರ ಎಸ್. ಮತ್ತು ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ಕಾಲೇಜಿನ ಆಡಳಿತಾಧಿಕಾರಿ ಶ್ರೀ ನಾಗೇಶ್ ಕೊಚ್ಚಿ ಉಪಸ್ಥಿತರಿದ್ದರು. ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್. ನೆರೆದ ಎಲ್ಲರನ್ನು ಸ್ವಾಗತಿಸಿದರು. ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಹಿತೇಶ್ ಎಂ.ಎಸ್. ಕಾರ್ಯಕ್ರಮದ ಸಮನ್ವಯಕಾರರಾಗಿದ್ದರು. ಪ್ರೊ. ಅಶ್ವಿಜ ಕೆ.ಸಿ ಕಾರ್ಯಕ್ರಮ ನಿರೂಪಣೆ ಹಾಗು ಧನ್ಯವಾದ ಸಮರ್ಪಿಸಿದರು. ಎಕ್ಸ್‌ಪೋ-೨೦೨೩ ಪ್ರಾಜೆಕ್ಟ್ ವೀಕ್ಷಣೆಗೆ ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜು ಮತ್ತು ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನಿಂದ ಹಲವಾರು ವಿದ್ಯಾರ್ಥಿಗಳು ಆಗಮಿಸಿದರು. ಸಾರ್ವಜನಿಕರು ಕೂಡಾ ಪ್ರಾಜೆಕ್ಟನ್ನು ವೀಕ್ಷಿಸಿ ಅದರ ಸದುಪಯೋಗ ಪಡೆದುಕೊಂಡರು. ಕಾಲೇಜಿನ ನಾಲ್ಕು ಇಂಜಿನಿಯರಿಂಗ್ ವಿಭಾಗಗಳಿಂದ ಒಟ್ಟು ೪೮ ಪ್ರಾಜೆಕ್ಟ್‌ಗಳು ಪ್ರದರ್ಶಿತಗೊಂಡವು.