ಸುಳ್ಯ ನಗರಕ್ಕೆ ಕುಡಿಯುವ ನೀರು ಒದಗಿಸುತ್ತಿರುವ ಪಯಸ್ವಿನಿ ನದಿಯಲ್ಲಿ ನೀರು ತಳ ಸೇರಿದ್ದು, ನಗರಕ್ಕೆ ನೀರು ಸರಬರಾಜು ಮಾಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾಗಿರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸುಳ್ಯ ತಹಶೀಲ್ದಾರ್ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಚುನಾವಣಾ ಸಂದರ್ಭವಾದ ಕಾರಣ ಜನಪ್ರತಿನಿಧಿಗಳು ನೇರವಾಗಿ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದರಿಂದ ಅಧಿಕಾರಗಳೇ ಈ ಕೆಲಸ ಮಾಡಬೇಕಾಗಿದೆ ಎಂದವರು ಹೇಳಿದ್ದಾರೆ. ಜತೆಗೆ ಪ್ರಸ್ತುತ ಸರಬರಾಜು ಆಗುತ್ತಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು. ಕೃಷಿ, ಕಟ್ಟಡ ನಿರ್ಮಾಣ ಮತ್ತಿತರ ಕಾರ್ಯಕ್ಕೆ ಬಳಕೆ ಮಾಡಬಾರದು.
ನೀರನ್ನು ದುರ್ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ನೀರಿನ ಸಂಪರ್ಕವನ್ನು ಕಡಿತ ಮಾಡಲಾಗುವುದು ಎಂದು ನಗರ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ನಗರದಲ್ಲಿ ನೀರು ಸರಬರಾಜು ಅವಧಿಯಲ್ಲಿ ಕೂಡ ಕಡಿತಗೊಳಿಸಲಾಗುವುದು ಎಂದೂ ನಗರ ಪಂಚಾಯತ್ ತಿಳಿಸಿದೆ.
ಪಯಸ್ವಿನಿ ನದಿಯ ನೀರಿನ ಹರಿವು ಹೆಚ್ಚು ಮಾಡುವ ನಿಟ್ಟಿನಲ್ಲಿ ಸುಳ್ಯದಿಂದ ಸಂಪಾಜೆವರೆಗಿನ ಪಯಸ್ವಿನಿ ನದಿಗೆ ಅಳವಡಿಸಿರುವ ಕೃಷಿ ಪಂಪ ಸೆಟ್‌ಗಳಿಗೆ ವಿದ್ಯುತ್ ಅವಧಿ ಕಡಿತಗೊಳಿಸುವುದು, ಜಾಕ್ ವೆಲ್ ಬಳಿಯಲ್ಲಿ ನದಿ ಹೂಳೆತ್ತುವುದು, ನೀರಿನ ಮಿತ ಬಳಕೆಯ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಇತ್ಯಾದಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ. ಪ್ರಸ್ತುತ ಚುನಾವಣಾ ಸಮಯದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಸಭೆ ಕರೆದು ತುರ್ತು ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲದೇ ಇರುವ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ತುರ್ತು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ.